ಶಿಕಾರಿಪುರ: ರಾಜ್ಯದಲ್ಲೇ ಅತಿ ಹೆಚ್ಚು ಕೆರೆ ಹೊಂದಿರುವ ಎರಡನೇ ತಾಲ್ಲೂಕು ಶಿಕಾರಿಪುರ. ಈ ಬಾರಿ ನಿರಂತರವಾಗಿ ಮಳೆ ಸುರಿದಿರುವುದರಿಂದ ತಾಲ್ಲೂಕಿನ ಎಲ್ಲೆಡೆ ಜಲ ಮೂಲಗಳು ತುಂಬಿದ್ದು, ಜೀವಕಳೆಯಿಂದ ನಳನಳಿಸುತ್ತಿವೆ. ಬೇಸಿಗೆ ಬೆಳೆಗೂ ಇದರಿಂದ ಅನುಕೂಲವಾಗಿದೆ.
ತಾಲ್ಲೂಕಿನಲ್ಲಿ 43 ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟು 1,003 ಕೆರೆಗಳಿವೆ. ಅವುಗಳು 40 ಹೆಕ್ಟೇರ್‌ಗಿಂತ ಕಡಿಮೆ ಭೂಮಿಗೆ ನೀರಾವರಿ ಕಲ್ಪಿಸುತ್ತವೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 80 ದೊಡ್ಡ ಕೆರೆಗಳು ಸೇರಲಿದ್ದು, 105 ಕೆರೆಗಳು ಬೃಹತ್ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಡುತ್ತವೆ. ಇವು 50 ರಿಂದ 80 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸುತ್ತವೆ.
ಇವುಗಳಲ್ಲಿ ಬಹುತೇಕ ಕೆರೆಗಳು ಅಂಜನಾಪುರ, ಅಂಬ್ಲಿಗೊಳ್ಳ ಜಲಾಶಯದಿಂದ ಹರಿಯುವ ನಾಲೆ ನೀರಿನ ಮೂಲ ಹೊಂದಿವೆ. ಒಟ್ಟಾರೆ ತಾಲ್ಲೂಕಿನಲ್ಲಿ ಒಟ್ಟು 1,188 ಕೆರೆಗಳಿವೆ. ಇವುಗಳ ಜೊತೆಗೆ ಹತ್ತಾರು ಸಣ್ಣ ಕೆರೆ-ಕಟ್ಟೆಗಳಿದ್ದು, ಇವೂ ಈ ಬಾರಿಯ ವರ್ಷಧಾರೆಗೆ ಮೈದುಂಬಿವೆ.
ಎಲ್ಲೆಡೆ ಹಸಿರು: ನಿರಂತರ ಮಳೆಯಿಂದ ಮೆಕ್ಕೆಜೋಳ, ಹತ್ತಿ, ಶುಂಠಿಗೆ ತೊಂದರೆ ಆಗಿದ್ದರೂ ತೋಟಗಾರಿಕೆ ಬೆಳೆಗೆ ಅನುಕೂಲ ಉಂಟಾಗಿದೆ. ನೀರಾವರಿ ಸೌಲಭ್ಯ ಕಡಿಮೆ ಇರುವ ಉಡುಗಣಿ, ತಾಳಗುಂದ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ದೊಡ್ಡ ಕೆರೆಗಳಿದ್ದು, ಅವುಗಳೆಲ್ಲವೂ ತುಂಬಿವೆ. ಇದರಿಂದಾಗಿ ಕೆರೆ ಅಚ್ಚುಕಟ್ಟು ರೈತರ ಹೊಲದಲ್ಲಿ ಹಸಿರು ಸಿರಿ ತುಂಬಿದೆ.
ಬೇಗೂರು ದೊಡ್ಡಕೆರೆ, ಮಾರವಳ್ಳಿ ಹೊಟ್ಟೆಗೌಡನ ಕೆರೆ, ಬಳ್ಳಿಗಾವಿ ಜಿಡ್ಡಿ ಕೆರೆ, ಕಲ್ಮನೆ ಬಸಲಿ ಕೆರೆ, ಹಿರೇಜಂಬೂರು ದೊಡ್ಡಕೆರೆ, ಗಾಂಧಿನಗರ ಶೀಲವಂತನ ಕೊಪ್ಪದಕೆರೆ, ಈಸೂರು ಹೆಗ್ಗೆರೆ, ಗಾಮ ಕೋಗಿಲೆ ಕೆರೆ ಹೀಗೆ ತಾಲ್ಲೂಕಿನ ಬಹುತೇಕ ದೊಡ್ಡ ಕೆರೆಗಳು ಕೋಡಿ ಬಿದ್ದಿವೆ. ಕೋಡಿ ನೀರು ಹೋಗುವ ಜಾಗದಲ್ಲಿ ಯುವಕರು ಮೀನು ಹಿಡಿಯುವ ದೃಶ್ಯ ಸಾಮಾನ್ಯವಾಗಿದೆ.
ಹೆಚ್ಚುವರಿ ನೀರಾವರಿ ಸೌಲಭ್ಯ: ತಾಲ್ಲೂಕಿನ ಗಾಂಧಿನಗರ ಸಮೀಪ ಏತ ನೀರಾವರಿ ಮೂಲಕ ಕೊಪ್ಪದ ಕೆರೆ ತುಂಬಿಸುವ ಯೋಜನೆ, ಉಡುಗಣಿ, ತಾಳಗುಂದ, ಹೊಸೂರು ಹೋಬಳಿ ಕೆರೆಗಳಿಗೆ ತುಂಗಭದ್ರ ನದಿ ನೀರು ತುಂಬಿಸುವ ಪುರದಕೆರೆ ಏತ ನೀರಾವರಿ ಯೋಜನೆ, ಕಸಬಾ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕಾಳೇನಹಳ್ಳಿ ಕಸಬಾ ಏತ ನೀರಾವರಿ ಯೋಜನೆ, ಅಂಜನಾಪುರ ಜಲಾಶಯಕ್ಕೆ ತುಂಗಾ ನೀರು ಹರಿಸುವ ಹೊಸಳ್ಳಿ ಏತ ನೀರಾವರಿ ಯೋಜನೆ ತಾಲ್ಲೂಕಿನಲ್ಲಿ ಇದ್ದು, ಇವುಗಳಿಂದಲೂ 350ಕ್ಕೂ ಹೆಚ್ಚು ಕೆರೆಗಳಿಗೆ ಬೇಸಿಗೆಯಲ್ಲೂ ನೀರು ತುಂಬಲಿದೆ.
ಸ್ವಯಂ ನಿಯಂತ್ರಣ ಅಗತ್ಯ: ‘ತಾಲ್ಲೂಕಿನ ಸಾವಿರಾರು ಕೆರೆ- ಕಟ್ಟೆಗಳು ತುಂಬಿದ್ದು ಅವುಗಳಲ್ಲಿನ ನೀರನ್ನು ರೈತರು ಬೇಕಾಬಿಟ್ಟಿ ಬಳಕೆ ಮಾಡಿದರೆ ಬೇಸಿಗೆಯಲ್ಲಿ ನೀರು ಇಲ್ಲದೆ ರೈತರು, ಜಾನುವಾರುಗಳು ತೊಂದರೆಗೆ ಒಳಗಾಗಬೇಕಾಗುತ್ತದೆ. ಎಲ್ಲ ಕೆರೆಗಳ ಅಚ್ಚುಕಟ್ಟು ರೈತರು ಸಭೆ ನಡೆಸಿ ನಿಯಮಿತವಾಗಿ ನೀರು ಬಳಸುವ ಸಂಬಂಧ ಒಮ್ಮತದ ತೀರ್ಮಾನ ಕೈಗೊಳ್ಳಬೇಕು’ ಎಂದು ಪ್ರಗತಿಪರ ಕೃಷಿಕ ಗಾಮ ದಯಾನಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪರಿಹಾರಕ್ಕೆ ಒತ್ತಾಯ: ‘ನಿರಂತರ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಬೆಳೆದಿರುವ ಮೆಕ್ಕೆಜೋಳ, ಹತ್ತಿ, ಶುಂಠಿ ಬೆಳೆ ಹಾಳಾಗಿವೆ. ಸರ್ಕಾರ ಕೂಡಲೆ ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಸಂಘದ ರವಿ ಕಪ್ಪನಹಳ್ಳಿ ಒತ್ತಾಯಿಸಿದ್ದಾರೆ.
Highlights - ಅಗತ್ಯದಷ್ಟೇ ಕೆರೆ ನೀರು ಬಳಸಿ ಏತ ನೀರಾವರಿಯಿಂದ ಬೇಸಿಗೆಯಲ್ಲೂ ಕೆರೆಗೆ ನೀರು ಬೆಳೆ ಹಾನಿಗೆ ಪರಿಹಾರ ನೀಡಲು ಒತ್ತಾಯ
Quote - ತಾಲ್ಲೂಕಿನ ಕೆರೆಕಟ್ಟೆಗಳು ತುಂಬಿದ್ದು ಈಜಾಡಲು ಯುವಕರನ್ನು ಆಕರ್ಷಿಸುತ್ತಿವೆ. ಬೇಸಿಗೆಯಲ್ಲಿ ಕೆರೆ ಹೂಳೆತ್ತಿದ್ದು ನೀರು ಆಳವಾಗಿರುವ ಕಡೆ ಈಜು ಬಾರದವರು ಇಳಿಯದಂತೆ ಎಚ್ಚರಿಕೆಯ ಬೋರ್ಡ್ ಅಳವಡಿಸಬೇಕು ರವಿ ಪ್ರಗತಿಪರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.