
ಶಿಕಾರಿಪುರ: ‘ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಬರಹದಲ್ಲಿ ಕೃಷಿ, ವೈಜ್ಞಾನಿಕ ಚಿಂತನೆ ಹೆಚ್ಚಾಗಿವೆ. ಅವರ ಹುಟ್ಟೂರು ಈಸೂರು ಗ್ರಾಮದಲ್ಲಿ ಅವರ ನೆನಪು ಸದಾ ಇರುವಂತೆ ಮಾಡಬೇಕಿದೆ’ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಆರ್.ಸಿ.ಜಗದೀಶ್ ಹೇಳಿದರು.
ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಈಚೆಗೆ ಇರುವಕ್ಕಿ ಕೃಷಿ ವಿ.ವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಭಾವಕವಿ ಜಿ.ಎಸ್.ಶಿವರುದ್ರಪ್ಪ ಜನ್ಮಶತಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಜಿ.ಎಸ್.ಎಸ್. ಸಾಹಿತ್ಯ ಕೃಷಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಕವಿಯ ಹುಟ್ಟೂರಿನಲ್ಲಿ ವಿದ್ಯಾರ್ಥಿಗಳು ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಕವಿ ಜನ್ಮ ಶತಮಾನೋತ್ಸವ ನೆಪದಲ್ಲಿ ಕವಿ, ಕಾವ್ಯ ಪರಿಚಯದ ಮೂಲಕ ಸಾಹಿತ್ಯದ ಕಂಪು ಪಸರಿಸುವ ಕೆಲಸ ಆಗುತ್ತಿದ್ದು, ಅದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಜಿ.ಎಸ್.ಎಸ್. ಹುಟ್ಟೂರಿನಲ್ಲಿ ಅವರ ನೆನಪು ಸದಾ ಇರುವಂತ ಸಾಹಿತ್ಯ ಚಟುವಟಿಕೆ ನಡೆಸಲು ಎಲ್ಲರೂ ಮುಂದಾಗಬೇಕು’ ಎಂದರು.
‘ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಜನ್ಮಸ್ಥಳ ಈಸೂರಿನಲ್ಲಿ ಅವರ ಸ್ಮಾರಕ ನಿರ್ಮಿಸುವುದಕ್ಕೆ ಆಡಳಿತ ಮುಂದಾಗಬೇಕು ಎನ್ನುವುದು ನಮ್ಮೆಲ್ಲರ ಒತ್ತಾಯ. ಕಟ್ಟಡ ಮಾತ್ರವಲ್ಲ ಸಾಹಿತ್ಯ ಪರಿಷತ್, ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳು, ಸಾಹಿತ್ಯ ಸಂಘಟನೆಗಳು, ಜಿಎಸ್‌ಎಸ್ ಪ್ರತಿಷ್ಠಾನ, ಸಾಹಿತ್ಯ ಅಭಿಮಾನಿಗಳು ಕೈಜೋಡಿಸಿ ಗ್ರಾಮದಲ್ಲಿ ನಿರಂತರವಾಗಿ ಸಾಹಿತ್ಯ ಚಟುವಟಿಕೆ ನಡೆಯುವುದಕ್ಕೆ ಕಾರ್ಯಕ್ರಮ ರೂಪಿಸಬೇಕು. ಆ ಮೂಲಕ ಜನ್ಮಶತಮಾನೋತ್ಸವ ಸಾರ್ಥಕಗೊಳಿಸಬೇಕಿದೆ’ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಸಚಿವ ಕೆ.ಸಿ.ಶಶಿಧರ ಹೇಳಿದರು.
‘ಜಿ.ಎಸ್.ಶಿವರುದ್ರಪ್ಪ ಈಸೂರು ಗ್ರಾಮದಲ್ಲಿ ಜನಿಸಿದ್ದು ಎನ್ನುವುದು ಗ್ರಾಮದ ಬಹಳಷ್ಟು ಜನರಿಗೆ ತಿಳಿದಿಲ್ಲ. ಅದನ್ನು ತಿಳಿಸುವ ಕೆಲಸ ಆಗಬೇಕಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಕವಿಯ ನೆನಪಿಗಾಗಿ ವಿವಿಧ ಸಾಹಿತ್ಯ ಸ್ಪರ್ಧೆ ಆಯೋಜಿಸಿರುವುದು ಶ್ಲಾಘನೀಯ. ಅಂತಹ ಕೆಲಸ ಇನ್ನಷ್ಟು ಹೆಚ್ಚಾಗಬೇಕು’ ಎಂದು ಈಸೂರು ಗ್ರಾಮದ ಕಲಾವಿದ ಬೇಗೂರು ಶಿವಪ್ಪ ಹೇಳಿದರು.
ಕಮಲಾ ನೆಹರೂ ಕಾಲೇಜು ಪ್ರಾಧ್ಯಾಪಕ ಬಸವರಾಜ್ ಕವಿ– ಕಾವ್ಯ ಪರಿಚಯದ ಜತೆಗೆ ಅವರ ಬರಹ ವಿಮರ್ಶೆ ನಡೆಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಜಿ. ರೇಖಾ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಕವನ, ವಿಮರ್ಶೆ, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಶಿವಮೊಗ್ಗದ ಎಸ್.ಅಮಿತ್‌ಕುಮಾರ್ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.