ಶಿವಮೊಗ್ಗ: 'ಕನ್ನಡ ಮಾಧ್ಯಮದ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸರ್ಕಾರದಿಂದಲೇ ಅತಿಥಿ ಶಿಕ್ಷಕರ ನೇಮಕ ಮಾಡಲು ನಿರ್ಧರಿಸಲಾಗಿದೆ' ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಎಸ್.ಬಂಗಾರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಪ್ರೆಸ್ ಟ್ರಸ್ಡ್ ವತಿಯಿಂದ ಆಯೋಜಿಸಿದ್ಸ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನುದಾನಿತ ಶಾಲೆಗಳ 6 ಸಾವಿರ ಹಾಗೂ ಸರ್ಕಾರಿ ಶಾಲೆಗಳ 12 ಸಾವಿರ ಸೇರಿದಂತೆ 18 ಸಾವಿರ ಶಿಕ್ಷಕರ ನೇಮಕಕ್ಕೆ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತಿದೆ. ಅದರ ಹೊರತಾಗಿ ಅನುದಾನಿತ ಶಾಲೆಗಳಲ್ಲಿ ಖಾಲಿ ಉಳಿಯುವ ಹುದ್ದೆಗಳಿಗೆ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲು ಆಯಾ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಬಹುಶಃ ಅನುದಾನಿತ ಶಾಲೆಗಳಿಗೆ 4ರಿಂದ 5 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಬೇಕಾಗುತ್ತದೆ. ಅವರಿಗೆ ಗೌರವಧನ ಸರ್ಕಾರದಿಂದಲೇ ಪಾವತಿಸಲಾಗುವುದು. ಕನ್ನಡ ಮಾಧ್ಯಮದ ಶಾಲೆಗಳ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದರು.
'1995ರ ನಂತರದ 10 ವರ್ಷಗಳ ಅವಧಿಯ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ. ಆ ಪ್ರಸ್ತಾವಕ್ಕೆ ಸಿಎಂ ಸಿದ್ದರಾಮಯ್ಯ ಅನುಮತಿ ಕೊಡುತ್ತಿದ್ದಂತೆಯೇ ಪ್ರಕ್ರಿಯೆ ಆರಂಭಿಸಲಾಗುವುದು' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
'ಅಂಗವಿಕಲ ಮಕ್ಕಳಿಗೆ ಚಿಕಿತ್ಸೆ ಹಾಗೂ ಶಿಕ್ಷಣ ಎರಡಕ್ಕೂ ಅವಕಾಶವಾಗಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎರಡು ವಸತಿಯುತ ಶಾಲೆ ಆರಂಭಿಸಲಾಗುತ್ತಿದೆ' ಎಂದು ಸಚಿವರು ಹೇಳಿದರು.
ಸಂವಾದದಲ್ಲಿ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್, ಕಾರ್ಯದರ್ಶಿ ನಾಗರಾಜ ನೇರಿಗೆ, ಸಂಚಾಲಕ ಚಂದ್ರಶೇಖರ ಹೊನ್ನಾಳಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.