ADVERTISEMENT

ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕಬೇಡಿ: ರಾಜ್ಯಪಾಲರಿಗೆ ಚನ್ನಬಸಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 5:22 IST
Last Updated 24 ಡಿಸೆಂಬರ್ 2025, 5:22 IST
ಎಸ್.ಎನ್.ಚನ್ನಬಸಪ್ಪ
ಎಸ್.ಎನ್.ಚನ್ನಬಸಪ್ಪ   

ಶಿವಮೊಗ್ಗ: ಕರ್ನಾಟಕ ದ್ವೇಷ, ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ–2025 ಪೂರ್ವಾಗ್ರಹಪೀಡಿತವಾಗಿದ್ದು, ವಿರೋಧ ಪಕ್ಷಗಳನ್ನು ಕಟ್ಟಿಹಾಕುವ ತಂತ್ರ ಹೊಂದಿಗೆ. ಅದಕ್ಕೆ ಯಾವುದೇ ಕಾರಣಕ್ಕೂ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಮನವಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಪಾಲರ ಬಳಿಗೆ ಬಿಜೆಪಿ ನಿಯೋಗ ತೆರಳಿ ಈ ಮಸೂದೆಯನ್ನು ತಿರಸ್ಕರಿಸುವಂತೆ ಮನವಿ ಮಾಡಲಿದೆ. ರಾಷ್ಟ್ರಪತಿಗೂ ಮನವಿ ಮಾಡುತ್ತೇವೆ. ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಕೂಡ ಹೋಗುತ್ತವೆ ಎಂದು ಎಚ್ಚರಿಸಿದರು.

ಈ ವಿಧೇಯಕವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ತುರ್ತು ಪರಿಸ್ಥಿತಿ  ಹೇರಿದೆ. ಅಂದು ರಾಷ್ಟ್ರಮಟ್ಟದಲ್ಲಿ ಇಂದಿರಾಗಾಂಧಿ ಮಾಡಿದ್ದ ಕೆಲಸವನ್ನು ಈಗ ಸಿದ್ಧರಾಮಯ್ಯ ಮಾಡುತ್ತಿದ್ದಾರೆ. ಇದು ಸಂವಿಧಾನ ವಿರೋಧಿ ಧೋರಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸತ್ಯ ಹೇಳುವುದೇ ತಪ್ಪು ಎಂದು ಈ ವಿಧೇಯಕ ಹೇಳುತ್ತದೆ. ನಾವು ಯಾರ ವಿರುದ್ಧವೂ ಮಾತನಾಡುವಂತಿಲ್ಲ. ನಮಗೆ ದ್ವೇಷ ಇರುವುದು ದೇಶದ್ರೋಹಿಗಳ ವಿರುದ್ಧ ಮಾತ್ರ. ದೇಶದ್ರೋಹಿಗಳ ಬಗ್ಗೆ ನಾವು ಮಾತನಾಡಿದರೆ ನಿಮಗೇಕೆ ಅಸೂಯೆ ಎಂದು ಪ್ರಶ್ನಿಸಿದ ಚನ್ನಬಸಪ್ಪ, ನಾವು ಸತ್ಯವನ್ನೇ ಹೇಳುತ್ತೇವೆ. ಸತ್ಯವನ್ನು ಹೇಳುವುದೇ ತಪ್ಪು ಎಂದಾದರೆ ಹೇಗೆ? ಕಾಂಗ್ರೆಸ್‌ನ ಮಾನಸಿಕತೆ ಸಂವಿಧಾನ ವಿರೋಧಿ ಆಗಿದೆ ಎಂದು ದೂರಿದರು.

ಪ್ರಮುಖರಾದ ಜಗದೀಶ್ ಎನ್.ಕೆ., ನಾಗರಾಜ್ ಎನ್.ಜೆ., ಮಂಜುನಾಥ್ ನವಿಲೆ, ದೀನದಯಾಳ್, ಎಂ.ಬಿ. ಹರಿಕೃಷ್ಣ, ಮುರಳಿ, ಶ್ರೀನಾಗ್, ಮೋಹನ್ ರೆಡ್ಡಿ, ಮಂಜು ಇದ್ದರು.

Quote - ಈ ಕರಾಳ ವಿಧೇಯಕವನ್ನು ಪ್ರಬಲವಾಗಿ ವಿರೋಧಿಸಲಿರುವ ಬಿಜೆಪಿ ಅದರ ವಿರುದ್ಧ ಜನಾಂದೋಲನ ರೂಪಿಸಲಾಗುತ್ತದೆ. ಅದಕ್ಕೆ ಪೂರಕವಾಗಿ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಬಳಿ ಡಿ.26ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಸ್.ಎನ್.ಚನ್ನಬಸಪ್ಪ ಶಿವಮೊಗ್ಗ ನಗರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.