ADVERTISEMENT

ಅತಿವೃಷ್ಟಿ: ಶಿವಮೊಗ್ಗ ಜಿಲ್ಲೆಯಲ್ಲಿ ₹ 418 ಕೋಟಿ ಹಾನಿ

ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳಿಗೆ ಸಚಿವದ್ವಯರ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 3:04 IST
Last Updated 7 ಆಗಸ್ಟ್ 2021, 3:04 IST
ತೀರ್ಥಹಳ್ಳಿ ತಾಲ್ಲೂಕು ಸೀಬಿನಕೆರೆ ಗುಡ್ಡ ಕುಸಿತದ ಸ್ಥಳವನ್ನು ಶುಕ್ರವಾರ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ ಪರಿಶೀಲಿಸಿದರು.
ತೀರ್ಥಹಳ್ಳಿ ತಾಲ್ಲೂಕು ಸೀಬಿನಕೆರೆ ಗುಡ್ಡ ಕುಸಿತದ ಸ್ಥಳವನ್ನು ಶುಕ್ರವಾರ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ ಪರಿಶೀಲಿಸಿದರು.   

ಶಿವಮೊಗ್ಗ: ಜಿಲ್ಲೆಯ ಅತಿವೃಷ್ಟಿ, ಗುಡ್ಡ ಕುಸಿತ ಪ್ರದೇಶಗಳ ಹಾನಿ ಪ್ರಮಾಣದ ಸಮೀಕ್ಷೆ ನಡೆಸಲಾಗುತ್ತಿದೆ. ₹ 418 ಕೋಟಿ ಹಾನಿಯಾಗಿರುವ ಕುರಿತು ಪ್ರಾಥಮಿಕ ವರದಿಯಲ್ಲಿ ಅಂದಾಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತೀರ್ಥಹಳ್ಳಿ, ಹೊಸನಗರ ತಾಲ್ಲೂಕುಗಳ ಅತಿವೃಷ್ಟಿ ಹಾನಿ ಪ್ರದೇಶಗಳಿಗೆ ಶುಕ್ರವಾರ ಸಚಿವ ಆರಗ ಜ್ಞಾನೇಂದ್ರ ಅವರ ಜತೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಮಾತನಾಡಿದರು.

ಹಾನಿಯಾದ ಕೃಷಿ ಭೂಮಿ, ಮನೆಗಳು, ಪ್ರಾಣ ಹಾನಿ, ಜಾನುವಾರು ಹಾನಿ ಸೇರಿ ಅತಿವೃಷ್ಟಿಯ ಹಾನಿಗೆ ಸೂಕ್ತ ಪರಿಹಾರ ಒದಗಿಸಲಾಗುವುದು. ಸರ್ಕಾರದ ಮಾರ್ಗಸೂಚಿ ಹೊರತುಪಡಿಸಿ, ಹೆಚ್ಚುವರಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ADVERTISEMENT

ಅತಿವೃಷ್ಟಿ ನಷ್ಟ ಪರಿಹಾರ ಸಮೀಕ್ಷೆ ನಾಲ್ಕು ದಿನಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ವರದಿ ಕೈ ಸೇರಿದ ಬಳಿಕ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರಗ ಜ್ಞಾನೇಂದ್ರ ಹೇಳಿದರು.

ಒಂದೇ ದಿನ ಸುರಿದ ಭಾರಿ ಮಳೆಗೆ ತಾಲ್ಲೂಕಿನಲ್ಲಿ 10ಕ್ಕೂ ಹೆಚ್ಚು ಕಡೆ ಗುಡ್ಡಗಳು ಕುಸಿದಿವೆ. ಹಲವು ಕೆರೆಗಳ ಕೋಡಿ ಹರಿದು ಕೃಷಿ ಜಮೀನುಗಳಿಗೆ ಹಾನಿಯಾಗಿದೆ. ಗ್ರಾಮೀಣ ರಸ್ತೆಗಳು ಹಾಳಾಗಿವೆ. ಅಧಿಕಾರಿಗಳು ಸ್ಥಳಕ್ಕೆ
ಭೇಟಿ ನೀಡಿ ಹಾನಿ ಅಂದಾಜು ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಗುಡ್ಡ ಕುಸಿದ ಪ್ರದೇಶಗಳಾದ ಕೂಡಿಗೆ ಮಜಿರೆಯ ಹೆಗ್ಗಾರು ಬೆಟ್ಟ, ಎಡೆಹಳ್ಳಿ ಕೆರೆ ಬಳಿಯ ಗುಡ್ಡ,
ಯೋಗಿ ನರಸೀಪುರ ಬಳಿಯ ಹುಲಿಬೆಟ್ಟ,ಬೆಕ್ಷೆ ಕೆಂಜಗುಡ್ಡೆ, ಭಾರತಿಪುರ ಹೆದ್ದಾರಿ, ಗೇರುವಳ್ಳಿ ರಸ್ತೆ ಕುಸಿದ ಸ್ಥಳ,ಹೊಸನಗರ
ತಾಲ್ಲೂಕಿನ ರಾವೆ ಗ್ರಾಮ ಪಂಚಾಯಿತಿಯ ನೆಮ್ಮದಿ ಕೇಂದ್ರಕ್ಕೆ ಪರಿಶೀಲನೆ ನಡೆಸಿದರು.

ಜಮೀನಿನಲ್ಲಿ ಭಾರಿ ಪ್ರಮಾಣದ ಮಣ್ಣು ಸಂಗ್ರಹವಾಗಿರುವ ಪರಿಣಾಮ ತೆರವಿಗೆ ಸಾಕಷ್ಟು ಹಣ, ಸಮಯ ತಗಲುತ್ತದೆ. ಹಾಗಾಗಿ, ಗುಡ್ಡ ಕುಸಿದ ಜಮೀನುಗಳಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒಎಂ.ಎಲ್‌.ವೈಶಾಲಿ, ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್, ತಹಶೀಲ್ದಾರ್ ಶ್ರೀಪಾದ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ನಿರ್ದೇಶಕ ಆರ್.ಮದನ್, ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಅಶೋಕ್‌ ಮೂರ್ತಿ, ಮುಖಂಡರಾದ ಪ್ರಶಾಂತ್ ಕುರ್ಕೆ, ಕೂಡು ಮಲ್ಲಿಗೆ ಭಾಷ್ಕರ ಶೆಟ್ಟಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.