ADVERTISEMENT

ಆಗುಂಬೆ ಧರೆ ಕುಸಿತ: ಆತಂಕದಲ್ಲಿ ಸ್ಥಳೀಯರು

ಪ್ರವಾಸೋದ್ಯಮಕ್ಕೆ ಧಕ್ಕೆಯಾಗುವ ಭೀತಿ

ನಿರಂಜನ ವಿ.
Published 13 ಜುಲೈ 2022, 3:41 IST
Last Updated 13 ಜುಲೈ 2022, 3:41 IST
ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ ತಾಲ್ಲೂಕು ವ್ಯಾಪ್ತಿಯ 11ನೇ ತಿರುವಿನಲ್ಲಿ ಕುಸಿದಿರುವ ಆಗುಂಬೆ ಘಾಟಿ
ರಾಷ್ಟ್ರೀಯ ಹೆದ್ದಾರಿ 169ಎ ಹೆಬ್ರಿ ತಾಲ್ಲೂಕು ವ್ಯಾಪ್ತಿಯ 11ನೇ ತಿರುವಿನಲ್ಲಿ ಕುಸಿದಿರುವ ಆಗುಂಬೆ ಘಾಟಿ   

ತೀರ್ಥಹಳ್ಳಿ: ಸಹ್ಯಾದ್ರಿ ಕಣಿವೆಯ ಅರಣ್ಯ ಕಾಡಿನ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ– 169‘ಎ’ ಮಾರ್ಗ ಮಧ್ಯೆ ಆಗುಂಬೆ ಗುಡ್ಡ ಕುಸಿತವು ಅಧಿಕಾರಿಗಳು, ಸಾರ್ವಜನಿಕರು, ಸ್ಥಳೀಯರ ನಿದ್ದೆಗೆಡಿಸಿದೆ. ಉಡುಪಿ– ಶಿವಮೊಗ್ಗ ಸಂಪರ್ಕ ದೂರವಾಗುವ ಆತಂಕ ಹೆಚ್ಚಾಗುತ್ತಿದೆ.

2000ನೇ ಸಾಲಿನಲ್ಲಿ ಘಾಟಿ ರಸ್ತೆ ಮಾರ್ಗ ಮೊದಲ ಬಾರಿ ಕುಸಿದು ಸಂಚಾರ ಸ್ಥಗಿತಗೊಂಡಿತ್ತು. ಎರಡು ದಶಕಗಳಿಂದ ಸುಮಾರು ₹ 25 ಕೋಟಿ ವೆಚ್ಚದಲ್ಲಿ ದುರಸ್ತಿ ಕಾಮಗಾರಿ ನಡೆದಿದೆ. ಕಾಂಕ್ರೀಟ್‌ ರಸ್ತೆ, ಟಾರ್‌, ಜಲ್ಲಿ, ಚರಂಡಿ ಮುಂತಾದ ಕಾಮಗಾರಿಗಳು ನಡೆದಿವೆ. 2022ರ ಮಾರ್ಚ್‌ನಲ್ಲಿ 10 ದಿನ ಡಾಂಬರೀಕರಣದ ಉದ್ದೇಶದಿಂದ ರಸ್ತೆ ಸಂಚಾರ ನಿಲ್ಲಿಸಲಾಗಿತ್ತು.

ಕಡಿದಾದ 14 ತಿರುವಿನ 9.5 ಕಿ.ಮೀ ಘಾಟಿ ರಸ್ತೆ ಮಾರ್ಗದಲ್ಲಿ ಸುಮಾರು 2 ದಶಕಗಳಿಂದ ಮರು ಡಾಂಬರೀಕರಣ, ಕಾಂಕ್ರೀಟ್‌, ಚರಂಡಿ, ಆಯಕಟ್ಟಿನ ಜಾಗದಲ್ಲಿ ತಡೆಗೋಡೆ ಕಾಮಗಾರಿ ಅನುಷ್ಠಾನಗೊಂಡಿದೆ. ಹೀಗಿದ್ದರೂ ಸಮಸ್ಯೆ ಎದುರಾಗುತ್ತಿದ್ದು, ಮಾರ್ಗ ಶಾಶ್ವತವಾಗಿ ಬಂದ್‌ ಆಗುವ ಭಯ ಸೃಷ್ಟಿಸಿದೆ.

ADVERTISEMENT

ಹಲವು ಕಡೆ ಗುಡ್ಡ ಕುಸಿತ: 1, 4, 5, 6, 12, 13 ಮತ್ತು 14ನೇ ತಿರುವಿನಲ್ಲಿಯೂ ಸಣ್ಣ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. 11ನೇ ತಿರುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣು ಜರಿದಿದ್ದು ಆತಂಕಕ್ಕೆ ಕಾರಣವಾಗಿದೆ. ಮಣ್ಣು ಬಿದ್ದ ಪರಿಣಾಮ 11ನೇ ತಿರುವಿನ ರಸ್ತೆಗೂ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದು ರಸ್ತೆ ಬಿರುಕು ಬಿಟ್ಟಿದೆ. ಜೊತೆಗೆ ಘಾಟಿ ಭಾಗದಲ್ಲಿ ಮರ ಬಿದ್ದು ಕೆಲವು ಕಡೆ ಹಾನಿಯಾಗಿದೆ.

ರಸ್ತೆ ಮೇಲೆ ನೀರು: ಘಾಟಿ ನಿರ್ವಹಣೆಗೆ ಲೋಕೋಪಯೋಗಿ ಇಲಾಖೆಯಿಂದ ಗ್ಯಾಂಗ್‌ಮ್ಯಾನ್ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಘಾಟಿ ಭಾಗದಲ್ಲಿ ಬೀಳುತ್ತಿದ್ದ ಕಸ, ಕಡ್ಡಿ, ಪ್ಲಾಸ್ಟಿಕ್‌, ತರಗೆಲೆ ತೆಗೆದು ಸರಾಗವಾಗಿ ನೀರು ಹರಿಯುವಂತೆ ಮಾಡುತ್ತಿತ್ತು. ರಸ್ತೆ ದುರಸ್ತಿ ನಂತರ ಚರಂಡಿ ನಿರ್ವಹಣೆ ಇಲ್ಲದೆ ರಸ್ತೆಮೇಲೆ ನೀರು ಹರಿಯುವಂತಾಗಿದೆ. ನೀರಿನ ಹರಿವಿಗೆ ತೊಂದರೆಯಾದ್ದರಿಂದ ಭೂಮಿ ಕುಸಿಯುತ್ತಿದೆ.

ಚೆಕ್‌ಪೋಸ್ಟ್‌ ಲಾಭಿ: ‘ಅರಣ್ಯ ಇಲಾಖೆ ಚೆಕ್‌ ಪೋಸ್ಟ್‌ನಲ್ಲಿ ವಾಚರ್‌ಗಳು ಜಲ್ಲಿ, ಮರಳು ಸೇರಿ 25 ಟನ್‌ ತೂಕದ ವಾಹನಗಳಿಗೆ ಹಣ ಪಡೆದು ಘಾಟಿ ಸಂಚಾರಕ್ಕೆ ಅವಕಾಶ ನೀಡುತ್ತಾರೆ. ಸಂಜೆ ವೇಳೆ ರಸ್ತೆಯ ಪಕ್ಕದ ಮರವೊಂದರ ಬುಡ ಬಿಡಿಸುವ ಕೆಲಸ ಮಾಡುತ್ತಿದ್ದಾರೆ. ಬಿದ್ದ ಮರದಿಂದ ವಾಹನ ದಟ್ಟಣೆ ಅಧಿಕವಾದಾಗ ಸಿಬ್ಬಂದಿ ಕಡಿಯುವ ನೆಪದಲ್ಲಿ ವಾಹನ ಸವಾರರಿಂದ ಹಣ ಪಡೆಯುತ್ತಾರೆ’ ಎಂದು ಸ್ಥಳೀಯರಾದ ದಿನೇಶ್‌ ದೂರುತ್ತಾರೆ.

***

‘ವೈಬ್ರೇಟರ್‌ ಅಳವಡಿಕೆ ಕುಸಿತಕ್ಕೆ ಕಾರಣ’

ಜಾಗತಿಕ ತಾಪಮಾನ ಏರಿಕೆಯಿಂದ ಕಡಿಮೆ ಸಮಯದಲ್ಲಿ ಅಧಿಕ ಮಳೆಯಾಗುತ್ತಿದೆ. 2019ರಲ್ಲೇ ಭಾರಿ ವಾಹನ ಸಂಚಾರ ನಿಷೇಧಿಸುವಂತೆ ದೂರು ನೀಡಿದ್ದೇವೆ. ರಸ್ತೆ ವಿಸ್ತರಣೆ ಸಂದರ್ಭ ವೈಬ್ರೇಟರ್‌ ಅಳವಡಿಸಿರುವುದು ಕುಸಿತಕ್ಕೆ ಪ್ರಮುಖ ಕಾರಣ. ಲಕ್ಷ ವಾಹನ ಓಡಾಡುತ್ತವೆ ಎಂದು ಘಟ್ಟ ಪ್ರದೇಶದ ಹೃದಯ ಭಾಗ ನಾಶ ಮಾಡುವುದು ಮೂರ್ಖತನ. 2020ರಲ್ಲಿ 10 ಕಿ.ಮೀ. ವಿಸ್ತಾರವಿದ್ದ ಪರಿಸರ ಸೂಕ್ಷ್ಮ ಪ್ರದೇಶವನ್ನು 1 ಕಿ.ಮೀ.ಗೆ ಇಳಿಸಲಾಗಿದೆ.

– ಸಹದೇವ್‌ ಶಿವಪುರ, ಪರಿಸರ ಹೋರಾಟಗಾರ

***

ಸೂರ್ಯಾಸ್ಥ ವೀಕ್ಷಣೆಗೆ ಪ್ರವಾಸಿಗರನ್ನು ಹೊತ್ತು ತರುವ ಬಸ್‌ಗಳಿಗೆ ಅವಕಾಶ ದೊರೆಯಬೇಕು. ಬಸ್‌ ಸಂಚಾರಕ್ಕೆ ತೊಂದರೆ ಮಾಡಿದರೆ ಆಗುಂಬೆ ದ್ವೀಪವಾಗುತ್ತದೆ. ಪ್ರವಾಸಿಗರಿಂದ ಗ್ರಾಮಸ್ಥರ ಜೀವನ ನಡೆಯಬೇಕು.

ಪ್ರಕಾಶ್, ಆಗುಂಬೆ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.