
ಸಾಗರ: ನಗರದ ಹೃದಯ ಭಾಗದಲ್ಲಿರುವ ಗೋಪಾಲಗೌಡ ಕ್ರೀಡಾಂಗಣದಲ್ಲಿ ಮಾರಿಕಾಂಬಾ ಜಾತ್ರೆ ಅಂಗವಾಗಿ ಹೆಲಿ ಟೂರಿಸಂ ನಡೆಸಲು ಜಿಲ್ಲಾಡಳಿತ ನಿರಾಕ್ಷೇಪಣಾ ಪತ್ರ ನೀಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಈ ಮೊದಲು ಹೆಲಿ ಟೂರಿಸಮ್‌ಗೆ ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣ ಬಳಸಲು ಉದ್ದೇಶಿಸಲಾಗಿತ್ತು. ಅಪಾರ ಪ್ರಮಾಣದ ದೂಳಿನಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂಬ ಆಕ್ಷೇಪ ಕೇಳಿಬಂದಿತ್ತು. ಹೆಲಿ ಟೂರಿಸಂ ಆಯೋಜಕರು ಹೆಲಿಕಾಪ್ಟರನ್ನು ಗೋಪಾಲಗೌಡ ಕ್ರೀಡಾಂಗಣದಲ್ಲಿ ಇಳಿಸಲು ಜಿಲ್ಲಾಡಳಿತದಿಂದ ನಿರಾಕ್ಷೇಪಣಾ ಪತ್ರ ಪಡೆದುಕೊಂಡಿದ್ದು, ಶುಕ್ರವಾರದಿಂದಲೇ ಅಲ್ಲಿ ಹೆಲಿಕಾಪ್ಟರ್ ಇಳಿಸಲು ಸಿದ್ಧತೆ ನಡೆದಿದೆ.
ಗೋಪಾಲಗೌಡ ಕ್ರೀಡಾಂಗಣದಲ್ಲಿ 2009ರಲ್ಲಿ ₹ 40 ಲಕ್ಷ ವೆಚ್ಚದಲ್ಲಿ ಟರ್ಫ್ ಅಂಕಣ ನಿರ್ಮಿಸಲಾಗಿದ್ದು, ಕ್ರಿಕೆಟ್ ಚಟುವಟಿಕೆಗಳಿಗೆ ಮೀಸಲಾಗಿದೆ. ಟರ್ಫ್ ಅಂಕಣ ರಕ್ಷಿಸಬೇಕಾದ ಸರ್ಕಾರವೇ ಈಗ ಹೆಲಿ ಟೂರಿಸಮ್‌ಗೆ ಅನುಮತಿ ನೀಡಿರುವುದು ಕ್ರೀಡಾಪಟುಗಳ, ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.
‘ಹೆಲಿಕಾಪ್ಟರ್ ಹೊರಹೊಮ್ಮಿಸುವ ತೀವ್ರ ಗಾಳಿ ಕ್ರೀಡಾಂಗಣದ ಹುಲ್ಲುಹಾಸಿನ ಮೇಲ್ಮೈಯನ್ನು ಹಾಳು ಮಾಡುತ್ತದೆ. ಇದರಿಂದ ಮಣ್ಣು ಸಡಿಲಗೊಂಡು, ಹುಲ್ಲು ಹೋಗಿ ಅಂಕಣ ಹಾಗೂ ಮೈದಾನದ ಹೊರಮೈ ಭಾಗದಲ್ಲಿ ಕುಸಿತ ಉಂಟಾಗುವ ಸಾಧ್ಯತ ಇದೆ’ ಎನ್ನುತ್ತಾರೆ ಕೆಎಸ್‌ಸಿಎ ಶಿವಮೊಗ್ಗ ವಲಯ ಅಧ್ಯಕ್ಷ ನಾಗೇಂದ್ರ ಪಂಡಿತ್.
‘ಈಗ ಅಲ್ಲಿ ಹೆಲಿಕಾಪ್ಟರ್ ಇಳಿಸಲು ಅವಕಾಶ ನೀಡಿದರೆ ಮೈದಾನವನ್ನು ಸರಿಪಡಿಸಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೆ ಇಲ್ಲಿ ಯಾವುದೇ ಕ್ರಿಕೆಟ್ ಚಟುವಟಿಕೆಗೆ ಅವಕಾಶ ಸಿಗುವುದಿಲ್ಲ’ ಎಂದು ಅವರು ಹೇಳುತ್ತಾರೆ.
ಹೆಲಿಕಾಪ್ಟರ್ ಇಳಿಸುವ ನೆಲ ಗಟ್ಟಿಯಾಗಿರಬೇಕು. ಹುಲ್ಲು ಹಾಸಿನ ಕ್ರೀಡಾಂಗಣದಲ್ಲಿ ಈ ರೀತಿ ಮಾಡಿದರೆ ಕ್ರೀಡಾಂಗಣದ ಸ್ವರೂಪವೇ ಬದಲಾಗುತ್ತದೆ ಎಂಬ ಆತಂಕ ಕ್ರಿಕೆಟ್ ಆಟಗಾರದ್ದಾಗಿದೆ. ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಾಣವಾದ ಮೈದಾನವನ್ನು ವಾಣಿಜ್ಯ ಉದ್ದೇಶಕ್ಕೆ ನೀಡಿ ಹಾನಿಪಡಿಸುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗಬಾರದು ಎಂಬ ಒತ್ತಾಯ ಕ್ರಿಕೆಟ್ ಅಭಿಮಾನಿಗಳದ್ದು.
ವರದಹಳ್ಳಿ ರಸ್ತೆಯಲ್ಲಿ ಸುಸಜ್ಜಿತ ಹೆಲಿಪ್ಯಾಡ್ ಇದೆ. ಹೀಗಿರುವಾಗ ಗೋಪಾಲಗೌಡ ಕ್ರೀಡಾಂಗಣದಲ್ಲಿ ಹೆಲಿ ಟೂರಿಸಮ್‌ಗೆ ಅವಕಾಶ ನೀಡಬಾರದುಟಿ.ಡಿ.ಮೇಘರಾಜ್ ನಗರಸಭೆ ಮಾಜಿ ಸದಸ್ಯ ಸಾಗರ
ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ತೀರ್ಮಾನ
ಸಂಗೊಳ್ಳಿ ರಾಯಣ್ಣ ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಹೆಲಿ ಟೂರಿಸಮ್‌ಗೆ ಅವಕಾಶ ನಿರಾಕರಿಸಲಾಗಿತ್ತು. ಈಗ ಗೋಪಾಲಗೌಡ ಕ್ರೀಡಾಂಣದಲ್ಲಿ ಅವಕಾಶ ನೀಡಿದರೆ ಕ್ರಿಕೆಟ್ ಟರ್ಫ್ ಅಂಕಣ ಹಾಳಾಗುತ್ತದೆ ಎಂದು ಕ್ರಿಕೆಟ್ ಪಟುಗಳು ಮನವಿ ಸಲ್ಲಿಸಿದ್ದಾರೆ. ಜಿಲ್ಲಾಧಿಕಾರಿ ಜೊತೆಗೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ವೀರೇಶ್ ಕುಮಾರ್ ಉಪವಿಭಾಗಾಧಿಕಾರಿ ಸಾಗರ
ಗೋಪಾಲಗೌಡ ಕ್ರೀಡಾಂಗಣದಲ್ಲಿ ಹೆಲಿ ಟೂರಿಸಂ
ಸಾಗರ: ಮಾರಿಕಾಂಬಾ ಜಾತ್ರೆ ಪ್ರಯುಕ್ತ ಇಲ್ಲಿನ ಗೋಪಾಲಗೌಡ ಕ್ರೀಡಾಂಗಣದಲ್ಲಿ ಶುಕ್ರವಾರದಿಂದ ಹೆಲಿ ಟೂರಿಸಂ ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಯೋಜಕ ಕಿರಣ್ ದೊಡ್ಮನೆ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಸಾಗರದಲ್ಲಿ ಹೆಲಿ ಟೂರಿಸಂ ಪರಿಚಯಿಸಲಾಗುತ್ತಿದೆ. ಹೆಲಿಕಾಪ್ಟರ್ ಮೂಲಕ ಸಾಗರ ನಗರ ಸಿಗಂದೂರು ಜೋಗ ಸುತ್ತುವ ಅವಕಾಶ ಕಲ್ಪಿಸಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸಾಗರ ನಗರವನ್ನು ಹೆಲಿಕಾಪ್ಟರ್‌ನಲ್ಲಿ ಸುತ್ತಲು ಓರ್ವ ವ್ಯಕ್ತಿಗೆ ₹ 4000 ಜೋಗ ಜಲಪಾತ ಸುತ್ತಲು ಆರು ಜನರಿಗೆ ₹ 45000 ಸಿಗಂದೂರು ಸೇತುವೆ ಸುತ್ತಿ ಬರಲು ಆರು ಜನರಿಗೆ ₹ 45 ಸಾವಿರ ಜೋಗ ಸಿಗಂದೂರು ಎರಡೂ ಸ್ಥಳಗಳನ್ನು ಸುತ್ತಿ ಬರಲು ಆರು ಜನರಿಗೆ ₹ 75000 ಶುಲ್ಕ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಮುಖರಾದ ಡಿ.ದಿನೇಶ್ ಧನಂಜಯ ಆರೋಡಿ ಸುಜಿತ್ ಕೃಷ್ಣ ಮನೋಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.