ಕಾರ್ಗಲ್: ಭಾರತ– ಪಾಕ್ ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಶರಾವತಿ ಕಣಿವೆಯಲ್ಲಿರುವ ಲಿಂಗನಮಕ್ಕಿ, ತಳಕಳಲೆ ಮತ್ತು ಟೇಲ್ ರೇಸ್ ಗೇರುಸೊಪ್ಪ ಅಣೆಕಟ್ಟು, ಶರಾವತಿ, ಮಹಾತ್ಮಗಾಂಧಿ, ಅಂಬುತೀರ್ಥ, ಲಿಂಗನಮಕ್ಕಿ, ಶರಾವತಿ ಟೇಲ್ ರೇಸ್ ಜಲವಿದ್ಯುದಾಗರಗಳಿಗೆ ಗರಿಷ್ಠ ಪ್ರಮಾಣದ ಭದ್ರತೆ ನೀಡಿ, ಖಾಸಗಿ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಮೇ 10ರಿಂದ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ಆರ್. ರಮೇಶ್ ತಿಳಿಸಿದ್ದಾರೆ.
ಸಮೀಪದ ಜೋಗದ ಎಸ್.ವಿ.ಪಿ ಕಾಲೊನಿಯಲ್ಲಿರುವ ಮುಖ್ಯ ಎಂಜಿನಿಯರ್ ಕಚೇರಿ ಸಭಾಂಗಣದಲ್ಲಿ ನಡೆದ ವಿಶೇಷ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಶರಾವತಿ ಕಣಿವೆಯಲ್ಲಿರುವ ಪ್ರಮುಖ 4 ಜಲವಿದ್ಯುದಾಗರಗಳಲ್ಲಿ 26 ಜಲವಿದ್ಯುತ್ ಘಟಕಗಳು ವಿದ್ಯುತ್ ಉತ್ಪಾದನೆ ಮಾಡುತ್ತ ರಾಜ್ಯಕ್ಕೆ ಬೆಳಕು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಕೆಪಿಸಿ ನಿಗಮದ ಹಲವು ಸ್ಥಾವರಗಳ ಭದ್ರತೆಯ ಜವಾಬ್ದಾರಿಯನ್ನು ಹೊತ್ತಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪೊಲೀಸ್ ಪಡೆ, ಭದ್ರತಾ ಪಡೆ, ಹೊರಗುತ್ತಿಗೆ ಭದ್ರತಾ ಪಡೆ ಮತ್ತು ಸ್ಥಳೀಯ ಸಿವಿಲ್ ಪೊಲೀಸ್ ವಿಭಾಗದವರ ನಡುವೆ ಸಮನ್ವಯವನ್ನು ಕಾಯ್ದುಕೊಂಡು ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.
ನಾಗರಿಕ ಸೇವಾ ಪೊಲೀಸ್ ವಿಭಾಗದ ಸಬ್ಇನ್‌ಸ್ಪೆಕ್ಟರ್ ಹೊಳೆಬಸಪ್ಪ ಹೋಳಿ ಮಾತನಾಡಿ, ‘ಪೊಲೀಸ್ ಇಲಾಖೆಯ 112 ವಾಹನ ಮತ್ತು ತುರ್ತು ಕಾರ್ಯಾಚರಣೆಯ ಒಂದು ವಾಹನ ನಿರಂತರವಾಗಿ ಶರಾವತಿ ಕಣಿವೆಯಾದ್ಯಂತ ಗಸ್ತು ತಿರುಗಲಿದೆ. ಕೆಪಿಸಿ ನಿಗಮದ ಆಸ್ಪತ್ರೆಗಳಲ್ಲಿ ಹೆಚ್ಚು ಬಳಕೆಯಾಗುವ ಔಷಧಗಳನ್ನು ಸಂಗ್ರಹಿಸಿ ಇಡಬೇಕು. ಆಸ್ಪತ್ರೆಯನ್ನು ತುರ್ತು ಕಾರ್ಯಾಚರಣೆಗೆ ಸದಾ ಸನ್ನದ್ಧವಾಗಿಡಬೇಕು ಎಂದು ಹೇಳಿದರು.
‘ವಡನ್ ಬೈಲು ದೇವಸ್ಥಾನದ ಹಾದಿಯಲ್ಲಿರುವ ಬ್ರಿಡ್ಜ್ ಗೇಟ್ ಚೆಕ್ ಪೋಸ್ಟ್‌ನಲ್ಲಿ ಭದ್ರತಾ ತಪಾಸಣೆಯನ್ನು ಇನ್ನಷ್ಟು ಹೆಚ್ಚಿಸಬೇಕು. ಹೊನ್ನೆಮರಡು ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರ ಬಗ್ಗೆ ನಿಗಾ ವಹಿಸಲು ಕೆಪಿಸಿ ಭದ್ರತಾ ವಿಭಾಗ ಗಮನಹರಿಸಬೇಕು. ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ನಿಷೇಧಿತ ವಲಯಗಳಲ್ಲಿ ಕಂಡು ಬಂದರೆ ಕೂಡಲೇ ನಾಗರಿಕರು 112 ವಾಹನಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು’ ಎಂದು ಹೇಳಿದರು.
‘ಅಪರಿಚಿತರೊಂದಿಗೆ ವ್ಯವಹರಿಸುವುದು, ವಾಸ್ತವ್ಯಕ್ಕೆ ಸ್ಥಳಾವಕಾಶ ಕಲ್ಪಿಸುವುದನ್ನು ಸ್ಥಳೀಯರು ಮಾಡಬಾರದು. ಉಗ್ರಗಾಮಿಗಳು ಸೈಬರ್ ಕ್ರೈಂ ಬಳಕೆಗೆ ಮುಂದಾಗಿರುವುದರಿಂದ ಇ– ಮೇಲ್, ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂ ಸಾಮಾಜಿಕ ತಾಣಗಳಲ್ಲಿ ಅತ್ಯಂತ ಜಾಗರೂಕತೆಯಿಂದ ವ್ಯವಹರಿಸಬೇಕು. ನಗದು ರಹಿತವಾಗಿ ವ್ಯವಹರಿಸುವಾಗ ಎಚ್ಚರಿಕೆಯಿಂದ ಹಣಕಾಸಿನ ವ್ಯವಹಾರಗಳನ್ನು ಮಾಡಬೇಕು’ ಎಂದು ಸಭೆಯಲ್ಲಿ ಜಾಗೃತಿ ಮೂಡಿಸಿದರು.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಇನ್‌ಸ್ಪೆಕ್ಟರ್ ಕುಮಾರ್ ಮಾತನಾಡಿ, ‘ಶರಾವತಿ ಯೋಜನೆಯ ಕೆಪಿಸಿ ನಿಗಮದ ಸ್ಥಾವರಗಳ ಭದ್ರತಾ ಜವಾಬ್ದಾರಿಯ ಉಸ್ತುವಾರಿ ಹೊತ್ತಿರುವ ಕೈಗಾರಿಕಾ ಭದ್ರತಾ ಪಡೆಯಲ್ಲಿ ಕಮಾಂಡೋ ತರಬೇತಿ ಪಡೆದಿರುವ ಸಿಬ್ಬಂದಿಯನ್ನು ಹೊಂದಲಾಗಿದ್ದು, ಗರಿಷ್ಠ ಪ್ರಮಾಣದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಜಲಾಶಯ ವಿಭಾಗದ ಅಧೀಕ್ಷಕ ಎಂಜಿನಿಯರ್ ಆರ್.ಶಿವಕುಮಾರ್, ವಿದ್ಯುತ್ ವಿಭಾಗದ ಅಧೀಕ್ಷಕ ಎಂಜಿನಿಯರ್ ವಾಸುದೇವ ಮೂರ್ತಿ, ಕೆಪಿಸಿ ಕಾರ್ಮಿಕ ಸಂಘಟನೆಯ ಕೇಂದ್ರ ಸಮಿತಿ ಅಧ್ಯಕ್ಷ ಕೆ.ವೀರೇಂದ್ರ, ಜೋಗ ಸಮಿತಿ ಅಧ್ಯಕ್ಷ ಮೊಹಮ್ಮದ್ ಸದ್ದೂರ್, ಚಂದ್ರಶೇಖರ್ ಮತ್ತು ಕೆಪಿಸಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.