ಕೆ.ಎಸ್. ಈಶ್ವರಪ್ಪ
ಶಿವಮೊಗ್ಗ: ‘ಆದಾಯ ಮೀರಿ ಅಕ್ರಮ ಆಸ್ತಿ ಗಳಿಸಿದ ಆರೋಪದ ಹಿನ್ನಲೆ ಶಿವಮೊಗ್ಗ ಲೋಕಾಯುಕ್ತ ಪೊಲೀಸರು ಮಾಜಿ ಉಪಮಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹಾಗೂ ಕುಟುಂಬ ಸದಸ್ಯರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಗುರುವಾರ ತಡೆ ನೀಡಿದೆ.
ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಈಶ್ವರಪ್ಪ, 'ವಕೀಲ ಬಿ.ವಿನೋದ್ ಅವರು ಅಕ್ರಮ ಆಸ್ತಿ ಗಳಿಕೆಯ ಆರೋಪ ಮಾಡಿ ನನ್ನ ಹಾಗೂ ನನ್ನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಹಿಂದೆ ಅವರು ದಾಖಲಿಸಿರುವ ಒಂದು ಪ್ರಕರಣವೂ ಯಶಸ್ವಿ ಆದ ಉದಾಹರಣೆ ಇಲ್ಲ. ವಿನೋದ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಬ್ಲಾಕ್ ಮೇಲ್ ಮಾಡುವ ಉದ್ದೇಶದಿಂದ ಪ್ರಕರಣ ದಾಖಲಿಸಲಾಗಿತ್ತು. ಆದರೆ, ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ' ಎಂದರು.
'ರಾಜ್ಯದಲ್ಲಿ ಪೂರ್ಣ ಅವಧಿಯ ಮುಖ್ಯಮಂತ್ರಿ ನಾನೇ ಆಗಿರುತ್ತೇನೆ' ಎಂದು ಹೇಳಿರುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, 'ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನವನ್ನು ಗುತ್ತಿಗೆ ನೀಡಿದವರು ಯಾರು? ಡಿ.ಕೆ. ಶಿವಕುಮಾರ್ ಹಾಗೂ ಅವರ ಬೆಂಬಲಿಗರು ಸಹ ಬಾಯಿ ಬಿಡುತ್ತಿಲ್ಲ. ಕೇಂದ್ರ ಹೈಕಮಾಂಡ್ ಈ ಬಗ್ಗೆ ಸ್ಪಷ್ಟನೆ ನೀಡಬೇಕಿತ್ತು. ಸಿದ್ದರಾಮಯ್ಯನವರೇ ಎಲ್ಲವನ್ನು ತೀರ್ಮಾನ ಮಾಡಿಕೊಳ್ಳುವುದಾರೆ ಕಾಂಗ್ರೆಸ್ ಹೈಕಮಾಂಡ್ ಯಾಕೆ ಬೇಕು' ಎಂದು ಪ್ರಶ್ನಿಸಿದರು.
'ಅಂಬಾರಗೋಡ್ಲು – ಕಳಸವಳ್ಳಿ ಸೇತುವೆ ನಿರ್ಮಾಣದ ಹಿಂದೆ ಸಂಸದರ ಶ್ರಮ ಇದೆ. ಸೇತುವೆಗೆ ಹೆಸರು ಸೂಚಿಸುವ ಬಗ್ಗೆ ಗೊಂದಲ ಮಾಡುವುದು ಬೇಡ' ಎಂದ ಅವರು, 'ಹತ್ತು ಮಹಾನಗರ ಪಾಲಿಕೆ ನೌಕರರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ನೌಕರರ ಬಗ್ಗೆ ಗಮನ ನೀಡುತ್ತಿಲ್ಲ. ಸರ್ಕಾರವೇ ದೆಹಲಿಗೆ ಹೋಗಿ ಕೂತಿದೆ. ರಾಜ್ಯದ ಜನರ ಬಗ್ಗೆ ಇವರಿಗೆ ಕಾಳಜಿ ಇಲ್ಲ' ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.