ADVERTISEMENT

ಎಸ್‌ಡಿಪಿಐ, ಪಿಎಫ್ಐ ವಿರುದ್ಧ ಎಚ್ಚರಿಕೆ ಅಗತ್ಯ: ಸಂಸದ ಬಿ.ವೈ. ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2022, 3:41 IST
Last Updated 19 ಫೆಬ್ರುವರಿ 2022, 3:41 IST
ರಾಘವೇಂದ್ರ
ರಾಘವೇಂದ್ರ   

ಶಿವಮೊಗ್ಗ: ಎಸ್‌ಡಿಪಿಐ, ಪಿಎಫ್ಐ ಸಂಸ್ಥೆಗಳು ಹಿಜಾಬ್ ವಿಷಯ ಇಟ್ಟುಕೊಂಡು ಮುಗ್ಧ ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡುತ್ತಿದೆ. ಸಮಾಜದ ಶಾಂತಿ, ನೆಮ್ಮದಿಗೆ ಭಂಗ ಮಾಡುತ್ತಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದರು.

ದೇಶದಲ್ಲಿ ಕರ್ನಾಟಕ ಶಾಂತಿ ಸುವ್ಯವಸ್ಥೆಗೆ ಹೆಸರಾಗಿದೆ. ಕೆಲವರು ಹಿಜಾಬ್ ವಿಷಯ ಇಟ್ಟುಕೊಂಡು ಶಾಂತಿ ಕದಡುತ್ತಿದ್ದಾರೆ. ರಾಜ್ಯಕ್ಕೆ ಕಪ್ಪುಚುಕ್ಕೆ ಇಡುವ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ವಿದ್ಯಾರ್ಥಿನಿಯರಲ್ಲಿ ಎಚ್ಚರ ಮೂಡಿಸಬೇಕಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಸಲಹೆ ನೀಡಿದರು.

ಸದನದಲ್ಲಿ ಈಗಾಗಲೇ ಚರ್ಚೆ ಆರಂಭವಾಗಿತ್ತು. ಸರ್ಕಾರ ತನ್ನ ತೀರ್ಮಾನ ತೆಗೆದುಕೊಳ್ಳುವ ಸಮಯದಲ್ಲೇ ಕಾಂಗ್ರೆಸ್‌ ಸದನದ ಒಳಗೂ ಶಾಂತಿ ಭಂಗ ತರುವ ಕೆಲಸ ಮಾಡಿದೆ. ಸದನದ ಸಮಯ ವ್ಯರ್ಥಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸುಳ್ಳು ಪ್ರಚಾರದ ಮೂಲಕ ವಿಧಾನಸಭಾ ಕಲಾಪ ಹಾಳು ಮಾಡುತ್ತಿದ್ದಾರೆ. ಲಾಲ್‌ಚೌಕ್‌ನಲ್ಲಿ ದೇಶದ್ರೋಹಿಗಳು ತಾಕತ್ತಿದ್ದರೆ ಭಾರತದ ರಾಷ್ಟ್ರಧ್ವಜ ಹಾರಿಸಿ ಎಂದು ಧಮಕಿ ಹಾಕಿದಾಗ ನಮ್ಮ ನಾಯಕರಾದ ಈಶ್ವರಪ್ಪ, ಯಡಿಯೂರಪ್ಪ ಗುಂಡಿಗೆ ಎದೆಕೊಟ್ಟು ಧ್ವಜ ಹಾರಿಸಿದ್ದಾರೆ. ಕಾಂಗ್ರೆಸ್‌ನಿಂದ ದೇಶ ಭಕ್ತಿ ತಿಳಿದುಕೊಳ್ಳುವ ಆವಶ್ಯಕತೆ ಇಲ್ಲ. ರಾಜಕಾರಣಕ್ಕೆ ಬೇರೆ ಏನೂ ವಿಷಯ ಸಿಗದೇ ಹಿಜಾಬ್ ವಿಚಾರ ಹಿಡಿದುಕೊಂಡು ಶಾಂತಿ ಭಂಗದ ಯತ್ನ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಸದನ ನಡೆಸಲು ಅವಕಾಶ ನೀಡುತ್ತಿಲ್ಲ. ಮಕ್ಕಳ ಮನಸ್ಸನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಅಲ್ಪ ಸಂಖ್ಯಾತರನ್ನು ತುಳಿಯುವ ಕೆಲಸ ಮಾಡಲಾಗುತ್ತಿದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಆದರೆ, ಬಿಜೆಪಿ ಭೇದ–ಭಾವ ಮಾಡದೇ ಸರಿಯಾದ ದಿಕ್ಕಿನಲ್ಲಿ ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುತ್ತಿದೆ ಎಂದು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿಪ್ರಕಾಶ್, ಎನ್.ಜೆ. ನಾಗರಾಜ್, ಸುನೀತಾ ಅಣ್ಣಪ್ಪ, ಎನ್.ಕೆ. ಜಗದೀಶ್, ಕೆ.ವಿ. ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.