ADVERTISEMENT

ಹವ್ಯಕರ ಮೂಲನೆಲೆ ತಾಳಗುಂದ: ವಿಶೇಷ ವರದಿ

ಕರ್ನಾಟಕದ ಬ್ರಾಹ್ಮಣರಿಗೆ ಇದು ಶಕ್ತಿಕೇಂದ್ರ

ಎಂ.ನವೀನ್ ಕುಮಾರ್
Published 23 ನವೆಂಬರ್ 2022, 5:00 IST
Last Updated 23 ನವೆಂಬರ್ 2022, 5:00 IST
ಶಿರಾಳಕೊಪ್ಪ ಹತ್ತಿರದ ತಾಳಗುಂದದ ಗುಡ್ಡದ ಬಂಡೆಗಳ ಮೇಲೆ ಅಕ್ಷರ ಅಭ್ಯಾಸ ಮಾಡಿದ ಕುರುಗಳನ್ನು ಈಗಲೂ ಕಾಣಬಹುದು.
ಶಿರಾಳಕೊಪ್ಪ ಹತ್ತಿರದ ತಾಳಗುಂದದ ಗುಡ್ಡದ ಬಂಡೆಗಳ ಮೇಲೆ ಅಕ್ಷರ ಅಭ್ಯಾಸ ಮಾಡಿದ ಕುರುಗಳನ್ನು ಈಗಲೂ ಕಾಣಬಹುದು.   

ಶಿರಾಳಕೊಪ್ಪ: ಕರ್ನಾಟಕದ ಬ್ರಾಹ್ಮಣರಿಗೆ ಅನಾದಿ ಕಾಲದಿಂದಲೂ ತಾಳಗುಂದ ಶಕ್ತಿಕೇಂದ್ರವಾಗಿದೆ. ಅದರಲ್ಲೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರಿಗೆ ಈ ಊರು ಮೂಲ ನೆಲೆಯಾಗಿತ್ತು ಎಂಬುದಕ್ಕೆ ಹಲವಾರು ಕುರುಹುಗಳು ಇಲ್ಲಿ ಲಭಿಸಿವೆ.

ಕ್ರಿ.ಶ. 450ರ ಸ್ತಂಭ ಶಾಸನದಲ್ಲಿ ಅಗ್ರಹಾರದ ಉಲ್ಲೇಖ ಸ್ಪಷ್ಟವಾಗಿದ್ದು, ಕನ್ನಡದ ಮೊದಲ ಅರಸ ಮಯೂರ ವರ್ಮನ ಅಜ್ಜ ವೀರಶರ್ಮ ಹಾಗೂ ಬ್ರಾಹ್ಮಣರ ಅಗ್ರಹಾರಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಮಯೂರ ವರ್ಮ ರಾಜನಾದ ನಂತರ ಸೊರಬ ತಾಲ್ಲೂಕಿನ ಕುಬಟೂರು, ಶಿಕಾರಿಪುರ ತಾಲ್ಲೂಕಿನ ಈಸೂರು, ಹಿರೇಜಂಬೂರು, ಬೇಗೂರು, ಅಗ್ರಹಾರ ಮುಚ್ಚಡಿ, ಹಾವೇರಿ ಜಿಲ್ಲೆಯ ಹಿರೇಕೆರೂರು, ಚಿಕ್ಕೇರೂರು ಸೇರಿದಂತೆ 18 ಅನಾದಿ ಅಗ್ರಹಾರಗಳನ್ನು ಸ್ಥಾಪಿಸುತ್ತಾನೆ. 4ನೇ ಶತಮಾನದಲ್ಲಿ ಉತ್ತರ ಭಾರತ ಐಚ್ಛತ್ರದಿಂದ ಮಯೂರ ವರ್ಮ 32,000 ಬ್ರಾಹ್ಮಣರನ್ನು ತಾಳಗುಂದಕ್ಕೆ ಕರೆತರುತ್ತಾನೆ. ಈ ಬಗ್ಗೆ ತಾಲ್ಲೂಕಿನ ಸಂಡ ಗ್ರಾಮದ ಈಶ್ವರ ದೇವಾಲಯದ ಬಳಿ ನೆಟ್ಟ ಶಾಸನದಲ್ಲಿ ಉಲ್ಲೇಖವಿದೆ. (ಇಸಿ.ಶಿಕಾ.304). ಇದೇ ರೀತಿ ತಾಳಗುಂದದ 7 ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

11 ಮತ್ತು 12ನೇ ಶತಮಾನದವರೆಗೂ ಬ್ರಾಹ್ಮಣರು ದಾನ ಸ್ವೀಕರಿಸುವ ಜೊತೆಗೆ ಇಲ್ಲಿ ಧಾರ್ಮಿಕ ಕ್ಷೇತ್ರದ ಮುಖ್ಯಸ್ಥರಾಗಿಯೂ ಆಡಳಿತ ನಡೆಸಿದ್ದಾರೆ. ದಾನ ಪಡೆಯುವ ಜೊತೆಗೆ ಅವರು ದತ್ತಿ ದಾನ ನೀಡಿದ ಉಲ್ಲೇಖಗಳು ಸಹ ಶಾಸನದಲ್ಲಿ (ಇಸಿ.ಶಿಕಾ.177-1029) ಲಭಿಸಿವೆ.

ತಾಳಗುಂದ ಧಾರ್ಮಿಕ ಕ್ಷೇತ್ರ ಮಾತ್ರವಲ್ಲದೆ, ಶೈಕ್ಷಣಿಕವಾಗಿಯೂ ಕರ್ನಾಟಕದಲ್ಲಿ ಕ್ರಾಂತಿ ಮಾಡಿದ ಸ್ಥಳ. ಉಪಲಬ್ದ ಮಾಹಿತಿ ಪ್ರಕಾರ ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಪ್ರಾರಂಭವಾಗಿದ್ದು ತಾಳಗುಂದದಲ್ಲಿ. ಮಯೂರ ವರ್ಮ ಸ್ನಾತಕ ಪದವಿವರೆಗೂ ತಾಳಗುಂದದಲ್ಲಿ ಶಿಕ್ಷಣ ಪಡೆದು, ಸ್ನಾತಕೋತ್ತರ ಅಧ್ಯಯನಕ್ಕಾಗಿ ಕಂಚಿಗೆ ತೆರಳುತ್ತಾನೆ.

ತಾಳಗುಂದದಲ್ಲಿ ಸಂಸ್ಕೃತ, ಕನ್ನಡ ಎರಡೂ ಭಾಷೆಗಳಲ್ಲಿ ಕಲಿಕೆ ನಡೆಯುತ್ತಿತ್ತು. ವ್ಯಾಕರಣ, ಬಾಲಪುರಾಣ, ಪಂಚತಂತ್ರ, ವೇದಗಳು ಸೇರಿದಂತೆ ಹಲವಾರು ಬಗೆಯ ವಿಷಯದ ಮೇಲೆ ಅಧ್ಯಯನ ನಡೆಯುತ್ತಿತ್ತು. ವಿದ್ವಾಂಸರಿಗೆ ಸಕಲ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ತಾಂಬೂಲ ತಿನ್ನಿಸಲು, ಕೈ ಉಗುರು ತೆಗೆಯಲು ಸಹ ಸೇವಕರನ್ನು ನೇಮಿಸಲಾಗಿತ್ತು. 8 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕ ಪಾಠ, ಪ್ರವಚನ ಮಾಡುತ್ತಿದ್ದರು. ಕನ್ನಡ ಉಪಾಧ್ಯಾಯರಿಗೆ 5 ಗದ್ಯಾಣ ಅಂದರೆ 50 ಪಣ ಸಂಬಳ ನೀಡಲಾಗುತ್ತಿತ್ತು.

‘50 ಪಣ ಎಂದರೆ 25 ಉತ್ತಮ ಸೀರೆಗಳನ್ನು ಕೊಂಡುಕೊಳ್ಳುವಷ್ಟು ಹಣ’ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ವಿ. ವಸಂತಕುಮಾರ್ ತಾವು ಬರೆದಿರುವ ‘ಶಿಕಾರಿಪುರ ಸಾಂಸ್ಕೃತಿಕ ಸಂಕಥನ’ ಪುಸ್ತಕದಲ್ಲಿ ವಿವರಿಸಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಶಿವರಾಮ ಕಾರಂತ ಅವರ ಆತ್ಮಕಥನ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯಲ್ಲಿ ಐಚ್ಛತ್ರದಿಂದ ಮಯೂರ ವರ್ಮ ಬ್ರಾಹ್ಮಣರನ್ನು ಕರೆತಂದ ಬಗ್ಗೆ ಉಲ್ಲೇಖವಿದೆ.

ಸಂಶೋಧಕ ದಿವಂಗತ ಚಿದಾನಂದ ಮೂರ್ತಿ ಅವರು, ಬ್ರಾಹ್ಮಣರಲ್ಲಿ ‘ಹವ್ಯಕ’ ಪಂಗಡದವರಿಗೆ ಸ್ಪಷ್ಟವಾಗಿ ಇದೇ ಮೂಲ ಎಂದೂ ಪ್ರತಿಪಾದಿಸಿದ್ದಾರೆ. ಈ ಬ್ರಾಹ್ಮಣ ಸಮುದಾಯವು ಈಗಲೂ ಕದಂಬರ ಭೂಪ್ರದೇಶವಾದ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿಯೇ ಹೆಚ್ಚು ನೆಲೆಸಿದ್ದಾರೆ. ಹವ್ಯಕರು ಈಗಲೂ ಹಳೆಗನ್ನಡದ ಪದಗಳನ್ನು ದಿನನಿತ್ಯದ ಭಾಷೆಯಲ್ಲೇ ಮಾತನಾಡುತ್ತಾರೆ. ಉದಾಹರಣೆಗೆ ‘ಎಮ್ಮನೆ’ (ನನ್ನ ಮನೆ), ‘ಪೋಪ್ಲೆ’ (ಹೋಗಲಿಕ್ಕೆ ಹಳೆಗನ್ನಡದ ದಾತು ‘ಪೋಗು’).

ಹವ್ಯಕರು ಶರ್ಮರಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಇಂದಿಗೂ ಗೋತ್ರಪ್ರವರವನ್ನು ಹೇಳುವ ಸಂದರ್ಭದಲ್ಲಿ ಪ್ರತಿಯೊಬ್ಬ ಹವ್ಯಕರೂ ತಮ್ಮ ಹೆಸರಿನ ಮುಂದೆ ಶರ್ಮಣಃ ಎಂಬ ಪ್ರಯೋಗ ಮಾಡುತ್ತಾರೆ.

‘ತಾಳಗುಂದ ಶಾಸನದಲ್ಲೂ ಕದಂಬರೇ ತಮ್ಮ ಕುಲದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಹೀಗಾಗಿ ತಾಳಗುಂದ ಕರ್ನಾಟಕದ ಹವ್ಯಕರ ಮೂಲ ನೆಲೆಯಾಗಿ ಗಮನಸೆಳೆಯುತ್ತದೆ’ ಎಂದು ಇತಿಹಾಸ ಸಂಶೋಧಕ ಲಕ್ಷ್ಮೀಶ್ ಹೆಗಡೆ ಸೊಂದ ಅಭಿಪ್ರಾಯಪಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.