ADVERTISEMENT

ಹೊಳೆಹೊನ್ನೂರು: ಉಪಯೋಗಕ್ಕೆ ಬಾರದ ಉಪ ಕೃಷಿ ಉತ್ಪನ್ನ ಮಾರುಕಟ್ಟೆ

ಕುಮಾರ್ ಅಗಸನಹಳ್ಳಿ
Published 17 ಮೇ 2025, 7:15 IST
Last Updated 17 ಮೇ 2025, 7:15 IST
ಹೊಳೆಹೊನ್ನೂರಿನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ನೋಟ 
ಹೊಳೆಹೊನ್ನೂರಿನಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ನೋಟ    

ಹೊಳೆಹೊನ್ನೂರು: ಎರಡು ವರ್ಷಗಳ ಹಿಂದೆ ಉದ್ಘಾಟನೆಗೊಂಡಿರುವ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇಂದಿಗೂ ಕಾರ್ಯಾರಂಭ ಮಾಡಿಲ್ಲ.

ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ, ರೈತರಿಗೆ ಅನುಕೂಲವಾಗಲೆಂದು ಪಟ್ಟಣದಲ್ಲಿ ಉಪ ಮಾರುಕಟ್ಟೆ ನಿರ್ಮಾಣ ಮಾಡಿದೆ. ಎರಡು ವರ್ಷಗಳ ಹಿಂದೆ ಉದ್ಘಾಟನೆಯಾದ ಈ ಕಟ್ಟಡದಲ್ಲಿ ಇದುವರೆಗೂ ಯಾವುದೇ ವಹಿವಾಟು ನಡೆಯುತ್ತಿಲ್ಲ.

ಉಪ ಮಾರುಕಟ್ಟೆಗೆ ಸಾಕಷ್ಟು ಬಂಡವಾಳ ಹಾಕಿ, ಜಮೀನು ಖರೀದಿ ಮಾಡಿ, ಕಟ್ಟಡ, ಗೋದಾಮು, ಪ್ರಾಂಗಣ ನಿರ್ಮಾಣ ಸೇರಿ ಕೆಲವು ಮಳಿಗೆಗಳನ್ನು ಸ್ಥಾಪಿಸಲಾಗಿದೆ. ರೈತರು ಬೆಳೆದ ಬೆಳೆಗಳ ವಹಿವಾಟನ್ನು ಮಾರುಕಟ್ಟೆಯಲ್ಲೇ ನಡೆಸುವಂತೆ ಸರ್ಕಾರ ಕಾನೂನು ಜಾರಿಗೆ ತಂದಿದೆ. ಇದರಿಂದ ರೈತರಿಗೆ ಅನುಕೂಲವಾಗುವ ಜೊತೆಗೆ ಸರ್ಕಾರಕ್ಕೂ ಸೆಸ್ ಮೂಲಕ ಆದಾಯ ಬರಲಿದೆ.

ADVERTISEMENT

ರೈತರು, ತಾವು ಬೆಳೆದ ಬೆಳೆಗಳನ್ನು ತಾಲ್ಲೂಕು ಕೇಂದ್ರ ಭದ್ರಾವತಿಗೆ ತೆಗೆದುಕೊಂಡು ಹೋಗಬೇಕಿತ್ತು. ಅದನ್ನು ತಡೆಯಲು ಉಪ ಮಾರುಕಟ್ಟೆ ನಿರ್ಮಾಣ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಈ ಉಪ ಮಾರುಕಟ್ಟೆ ಸಮಿತಿ ಪ್ರಾಂಗಣ ಬಿಡಾಡಿ ದನಗಳ ತಾಣವಾಗಿದೆ. ಈ ಪ್ರಾಂಗಣದ ಪಕ್ಕದಲ್ಲಿ ನಾಲ್ಕೈದು ಬಾರ್‌ಗಳಿವೆ. ಗೇಟ್ ಇದ್ದರೂ ಸಂಜೆ ವೇಳೆ ಕುಡುಕರ ಅಡ್ಡೆಯಾಗಿ ಮಾರ್ಪಟ್ಟಿದೆ. ಇದಕ್ಕೆಲ್ಲ ಆಡಳಿತ ಮಂಡಳಿಯೇ ನೇರ ಹೊಣೆ ಎಂದು ರೈತರು ದೂರುತ್ತಾರೆ.

ಹೊಳೆಹೊನ್ನೂರಿನ ಪಟ್ಟಣದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆಯ ಗೋದಾಮು.

ನಾಲ್ಕೈದು ವರ್ಷಗಳಿಂದಲೂ ಈ ಮಾರುಕಟ್ಟೆ ಸ್ಥಳ ಯಾವ ಕಾರ್ಯಕ್ಕೂ ಉಪಯೋಗವಾಗುತ್ತಿಲ್ಲ. ಅಲ್ಲದೇ ಇಷ್ಟೊಂದು ವಿಶಾಲವಾದ ಮೈದಾನ ಪಟ್ಟಣದ ಸುತ್ತಮುತ್ತ ಎಲ್ಲಿಯೂ ಇಲ್ಲದೇ ಇರುವುದರಿಂದ ಈ ಸ್ಥಳದ ಅವಶ್ಯಕತೆ ಪಟ್ಟಣಕ್ಕೆ ಇದೆ. ಮಾರುಕಟ್ಟೆಯ ಮುಖ್ಯ ಗೇಟ್ ಬಳಿ ವಾರಕ್ಕೊಮ್ಮೆ ಸಂತೆ ನಡೆಯುತ್ತಿರುವುದೇ ಉತ್ತಮ ಸಂಗತಿಯಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಆಡಳಿತ ಮಂಡಳಿಯ ಧೋರಣೆಯಿಂದಾಗಿ ಮಾರುಕಟ್ಟೆ ಪ್ರಾರಂಭ ಸಾಧ್ಯವಾಗಿಲ್ಲ. ಉಪ ಮಾರುಕಟ್ಟೆಯನ್ನು ಆದಷ್ಟು ಬೇಗ ಪ್ರಾರಂಭ ಮಾಡಲಿ ಎಂಬುದು ರೈತರ ಒತ್ತಾಯ.

ಎಚ್.ಆರ್. ಬಸವರಾಜಪ್ಪ
ಎಪಿಎಂಸಿಯಿಂದ ಸಾಕಷ್ಟು ಬಂಡವಾಳ ಹಾಕಿ ಅಭಿವೃದ್ಧಿಪಡಿಸಲಾಗಿದೆ. ಉಪ ಮಾರುಕಟ್ಟೆಯ ಬಗ್ಗೆ ಆಸಕ್ತಿ ಇಲ್ಲದಂತಾಗಿದೆ. ರೈತರಿಗೆ ಹಾಗೂ ವರ್ತಕರಿಗೆ ಅನುಕೂಲವಾಗುವಂತೆ ಮಾಡಿದರೆ ವ್ಯಾಪಾರ ವಹಿವಾಟು ಸಾಧ್ಯ
ಎಚ್.ಆರ್. ಬಸವರಾಜಪ್ಪ ಅಧ್ಯಕ್ಷರು ರಾಜ್ಯ ರೈತ ಸಂಘ
ಟ್ರೇಡರ್ಸ್‌ಗಳಿಗೆ ಟೆಂಡರ್‌ ಹಾಗೂ ಮಳಿಗೆಗಳನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುವುದು. ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಲಾಗುವುದು
ಉಷಾರಾಣಿ ಕಾರ್ಯದರ್ಶಿ ಎಪಿಎಂಸಿ ಭದ್ರಾವತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.