ಸಾಗರ: ನಗರದ ಸಾಗರ್ ಹೋಟೆಲ್ ವೃತ್ತದಲ್ಲಿ ರಂಗಪಂಚಮಿ ಉತ್ಸವ ಸಮಿತಿ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಂಗಪಂಚಮಿ ಉತ್ಸವದಲ್ಲಿ ಸಾರ್ವಜನಿಕರು ಪರಸ್ಪರ ಬಣ್ಣ ಎರೆಚುವ ಮೂಲಕ ಓಕಳಿಯಾಟದಲ್ಲಿ ಭಾಗಿಯಾಗಿದ್ದರು.
ಪುರುಷರು, ಮಹಿಳೆಯರು, ಮಕ್ಕಳು, ವೃದ್ಧರು ಎಂಬ ಭೇದವಿಲ್ಲದೇ ಎಲ್ಲಾ ವಯೋಮಾನದವರೂ ಓಕುಳಿಯಾಟದಲ್ಲಿ ಮಿಂದೆದ್ದು ಸಂಭ್ರಮಿಸಿದರು. ಬ್ಯಾರಿಕೇಡ್ ನಿರ್ಮಿಸುವ ಮೂಲಕ ಉತ್ಸವ ಆಚರಣೆಗೆ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು. ಡಿಜೆ ಸಂಗೀತಕ್ಕೆ ಯುವಕ, ಯುವತಿಯರು ಹೆಜ್ಜೆ ಹಾಕಿದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ಆರಂಭದಲ್ಲಿ ಉತ್ಸವವನ್ನು ಉದ್ಘಾಟಿಸಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ, ‘ಇಂತಹ ಉತ್ಸವಗಳು ಮನುಷ್ಯನನ್ನು ಮಾನಸಿಕ ಒತ್ತಡದಿಂದ ಹೊರತರುತ್ತವೆ. ಪರಸ್ಪರ ಬೆರೆತು ಆಚರಿಸುವ ಉತ್ಸವಗಳಿಂದ ಸಮಾಜದಲ್ಲಿ ಸಾಮರಸ್ಯ, ಸೌಹಾರ್ದ ಮೂಡುತ್ತದೆ’ ಎಂದರು.
‘ರಂಗಪಂಚಮಿ ಉತ್ಸವ ಆಚರಣೆಗೆ ವಿಶೇಷ ಮಹತ್ವವಿದೆ. ಜಾತಿ, ಪಂಥಗಳನ್ನು ಮೀರಿ ಆಚರಿಸುವ ಹಲವು ಆಚರಣೆಗಳಲ್ಲಿ ಇದು ಕೂಡ ಒಂದಾಗಿದೆ’ ಎಂದು ಎಬಿವಿಪಿ ಮುಖಂಡ ಅಭಿಷೇಕ್ ಹೇಳಿದರು.
ಪ್ರಮುಖರಾದ ಯಶವಂತ ಫಣಿ, ಕಿರಣ್ ಎಂ.ಶೇಟ್, ಸತೀಶ್ ಗಾಯ್ಕವಾಡ್, ರವಿ, ರಾಜು, ಪ್ರಶಾಂತ್ ರಾಯ್ಕರ್, ಸಂದೇಶ್, ರವಿಚಂದನ್, ಗಣೇಶ್ ವಿ.ಶೇಟ್, ಪವನ್, ಜೀವನ್, ರಾಮು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.