ADVERTISEMENT

31ಕ್ಕೆ ಹೊಸನಗರ ಎಪಿಎಂಸಿ ಉಳಿವಿಗೆ ಪಾದಯಾತ್ರೆ

ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ ಮಾಹಿತಿ

​ಪ್ರಜಾವಾಣಿ ವಾರ್ತೆ
Published 27 ಮೇ 2022, 5:20 IST
Last Updated 27 ಮೇ 2022, 5:20 IST
ಹೊಸನಗರ ಎಪಿಎಂಸಿಯನ್ನು ಸಾಗರಕ್ಕೆ ವಿಲೀನಗೊಳಿಸುವುದನ್ನು ವಿರೋಧಿಸಿ ಮೇ 31ರಂದು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಇಲ್ಲಿನ ಸಹಕಾರಿ ಧುರೀಣರು ಸಂಕಲ್ಪ ತೊಟ್ಟರು.
ಹೊಸನಗರ ಎಪಿಎಂಸಿಯನ್ನು ಸಾಗರಕ್ಕೆ ವಿಲೀನಗೊಳಿಸುವುದನ್ನು ವಿರೋಧಿಸಿ ಮೇ 31ರಂದು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಯಶಸ್ವಿಗೊಳಿಸಲು ಇಲ್ಲಿನ ಸಹಕಾರಿ ಧುರೀಣರು ಸಂಕಲ್ಪ ತೊಟ್ಟರು.   

ಹೊಸನಗರ: ಹೊಸನಗರ ಎಪಿಎಂಸಿ ವಿಲೀನ ವಿರೋಧಿಸಿ ಹೋರಾಟ ತೀವ್ರಗೊಳಿಸುವ ಅಗತ್ಯವಿದ್ದು, ಮೇ 31ರಂದು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರಿ ಯೂನಿಯನ್ ನಿರ್ದೇಶಕ ವಾಟಗೋಡು ಸುರೇಶ ತಿಳಿಸಿದ್ದಾರೆ.

ಪಟ್ಟಣದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರ್ಕಾರವನ್ನು ಎಚ್ಚರಿಸಲು ತಾಲ್ಲೂಕು ಕೇಂದ್ರದ ನಾಲ್ಕೂ ದಿಕ್ಕುಗಳಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ರಿಪ್ಪನ್‌ಪೇಟೆ, ನಗರ, ಬಟ್ಟೆಮಲ್ಲಪ್ಪ, ಹುಂಚಾ ಕಡೆಯಿಂದ ತಾಲ್ಲೂಕು ಕೇಂದ್ರದವರೆಗೆ ಪಾದಯಾತ್ರೆ ನಡೆಯಲಿದೆ. ಎಲ್ಲರೂ ಪಟ್ಟಣದಲ್ಲಿ ಒಟ್ಟಾಗಿ ತಾಲ್ಲೂಕು ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು’ ಎಂದು ವಿವರಿಸಿದರು.

ರಾಜ್ಯದಲ್ಲಿ 160ಕ್ಕೂ ಹೆಚ್ಚು ಎಪಿಎಂಸಿಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಹೊಸನಗರ ಎಪಿಎಂಸಿಗೆ ಮಾತ್ರ ಈ ವಿಲೀನ ಪ್ರಕ್ರಿಯೆ ಏಕೆ? ಬೇರೆ ಎಪಿಎಂಸಿಗಳಿಗಿಂತ ಹೊಸನಗರ ಎಪಿಎಂಸಿ ನಷ್ಟದಲ್ಲಿದ್ದರೆ ಬೇರೆ ಮಾತು. ಹೊಸನಗರ ಎಪಿಎಂಸಿ ಉತ್ತಮವಾಗಿದೆ. ರೈತರಿಗೆ ವರವಾಗಿದೆ. ‘ವಿಲೀನ ಪ್ರಕ್ರಿಯೆಗೆ ಪೂರಕವಾಗಿ ಸರ್ಕಾರ ನೀಡಿರುವ ನೋಟಿಸ್‌ ಅನ್ನು ಕೂಡಲೇ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಎಪಿಎಂಸಿ ತಾಲ್ಲೂಕಿನ ರೈತರ ಜೀವನಾಡಿಯಾಗಿದೆ. ರಾಜಕೀಯ ಹಿತಾಸಕ್ತಿಗಾಗಿ ವಿಲೀನಕ್ಕೆ ಮುಂದಾಗಿರುವುದು ಸರಿಯಲ್ಲ.
ಪಾದಯಾತ್ರೆಯು ಪಕ್ಷಾತೀತವಾಗಿ ನಡೆಯಲಿದ್ದು, ತಾಲ್ಲೂಕಿನ ಎಲ್ಲಾ ಸಹಕಾರಿಗಳು, ಸಹಕಾರಿ ಸಂಸ್ಥೆಗಳು, ರೈತರು, ರೈತ ಸಂಘಟನೆಗಳು, ಸಾಮಾಜಿಕ ಸಂಘಟನೆಗಳು ಸೇರಿ ತಾಲ್ಲೂಕಿನ ಇಡೀ ಜನಸಮೂಹ ಪಾಲ್ಗೊಳ್ಳಬೇಕು. ಈ ಮೂಲಕ ತಾಲ್ಲೂಕಿನ ಏಕತೆಯನ್ನು ಸಾರಬೇಕು. ಒಟ್ಟು ನಾಲ್ಕು ತಂಡಗಳನ್ನು ರಚಿಸಿಕೊಂಡು ಹೋರಾಟ ಯಶಸ್ವಿಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ’ ಎಂದು ಹೇಳಿದರು.

‘ಮೊದಲಿಗೆ ವಿಧಾನಸಭಾ ಕ್ಷೇತ್ರವನ್ನು ಇಲ್ಲವಾಗಿಸಲಾಯಿತು. ಇಂದು ಎಪಿಎಂಸಿಯನ್ನು ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಇದು ಹೀಗೆಯೇ ಮುಂದುವರಿದರೆ ತಾಲ್ಲೂಕು ಕೇಂದ್ರವನ್ನು ಕಳೆದುಕೊಳ್ಳುವ ಸಮಯ ದೂರವಿಲ್ಲ. ಹೀಗಾಗಿ ತಾಲ್ಲೂಕಿನ ಜನರು ಸಂಘಟಿತರಾಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕು’ ಎಂದರು.

ಶಾಸಕರ ಮೌನದ ಮರ್ಮವೇನು ?: ಹೊಸನಗರ ಎಪಿಎಂಸಿ ವಿಲೀನ ವಿಚಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಸಾಗರ ಶಾಸಕ ಹಾಲಪ್ಪ ಹರತಾಳು ಅವರು ಏಕೆ ಮೌನವಾಗಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಅವರ ಮೌನ ವಿಲೀನ ಪ್ರಕ್ರಿಯೆಗೆ ಸಹಮತ ಸೂಚಿಸಿದಂತಾಗುತ್ತದೆ. ಈ ಬಗ್ಗೆ ಅವರು ಕೂಡಲೇ ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕು. ಎಪಿಎಂಸಿ ರಚನೆಯಾಗುವ ಹೊತ್ತಿನಲ್ಲಿ ಆರಗ ಜ್ಞಾನೇಂದ್ರ ಅವರ ಪಾತ್ರ ಕೂಡ ಇತ್ತು. ಹೀಗಾಗಿ ವಿಲೀನ ಪ್ರಕರಣದ ವಿರೋಧಕ್ಕೆ ಹೆಚ್ಚು ಮುತುವರ್ಜಿ ತೋರಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಕಾರಿಗಳಾದ ಎಂ.ಎಂ. ಪರಮೇಶ್, ಹಾಲಗದ್ದೆ ಉಮೇಶ್, ಡಿ.ಆರ್. ವಿನಯ್‌ಗೌಡ, ಗುರುಶಕ್ತಿ ವಿದ್ಯಾಧರ ರಾವ್, ಲೇಖನಮೂರ್ತಿ, ವಾಸುದೇವ, ಶಶಿಧರ ಹರತಾಳು, ಶ್ರೀಧರ ಭಟ್, ಚಂದ್ರಶೇಖರ, ಬಾಲಚಂದ್ರ, ಉಮೇಶಗೌಡ, ಈಶ್ವರಗೌಡ, ಈಶ್ವರಪ್ಪ ತಡಗೋಡು, ಶ್ರೀಜಯ ಸುಬ್ಬರಾವ್, ವಿಶಾಲ ರಾಜೇಂದ್ರ ಅವರೂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.