ADVERTISEMENT

ಹೊಸನಗರಕ್ಕೆ ಹೊಸಬೆಳಕು ಚೆಲ್ಲಲಿ: ಮೂಲೆಗದ್ದೆ ಸ್ವಾಮೀಜಿ

ವಿಧಾನಸಭಾ ಕ್ಷೇತ್ರದ ಹೋರಾಟ ಸಮಿತಿಯ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 5:53 IST
Last Updated 13 ಫೆಬ್ರುವರಿ 2026, 5:53 IST
ಹೊಸನಗರದಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಒತ್ತಾಯಿಸಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಲೋಗೊ ಬಿಡುಗಡೆ ಮಾಡಲಾಯಿತು
ಹೊಸನಗರದಲ್ಲಿ ನಡೆದ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಒತ್ತಾಯಿಸಿ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ ಲೋಗೊ ಬಿಡುಗಡೆ ಮಾಡಲಾಯಿತು   

ಹೊಸನಗರ: ‘ಮುಳುಗಡೆ ಕೂಪದಲ್ಲಿ‌ ನಲುಗುತ್ತಿರುವ ಹೊಸನಗರಕ್ಕೆ ಹೊಸಬೆಳಕು ಚೆಲ್ಲಬೇಕಾಗಿದೆ. ಜಾತಿ ಮತ, ಪಂಥ, ಧರ್ಮ, ರಾಜಕಾರಣ ಮೀರಿದ ಹೋರಾಟ ಬೇಕಾಗಿದೆ’ ಎಂದು ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ವಿಧಾನಸಭಾ ಕ್ಷೇತ್ರದ ಹೋರಾಟ ಸಮಿತಿಯ ಪೂರ್ವಭಾವಿ ಸಭೆಯಲ್ಲಿ‌ ಅವರು ಮಾತನಾಡಿದರು.

‘ಇಂದಿನ ಸಭೆಯಲ್ಲಿ ಪಕ್ಷಭೇದ ಮರೆತು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಕ್ಷೇತ್ರದ ಮರುಸೃಷ್ಟಿಯ ಬಗ್ಗೆ ಹೊಸ ಭರವಸೆ ಮೂಡಿಸಿದೆ. ಇದೇ ಹುಮ್ಮಸ್ಸು ಹೋರಾಟದ ಮನೋಭಾವ ನಿರಂತರವಾಗಿರಬೇಕು’ ಎಂದರು.

ADVERTISEMENT

‘ಹೊಸನಗರ ತಾಲ್ಲೂಕು ಅವಕೃಪೆಗೆ ಒಳಗಾಗುತ್ತಿರುವುದು ಸತ್ಯ. ಇದಕ್ಕೆ ಸರ್ಕಾರ ಮಟ್ಟದಲ್ಲಿ ತನ್ನ ಪ್ರಭಾವ ಬಳಸಿ ಯೋಜನೆಯನ್ನು ತರಬಲ್ಲ ನಾಯಕತ್ವ ಕೊರತೆಯೇ ಕಾರಣ. ಇಂದಿನ ಯುವಕರು ಮುಂಚೂಣಿಗೆ ಬರಬೇಕಿದೆ‌ ನಮ್ಮ ಭವಿಷ್ಯಕ್ಕೆ ಕ್ಷೇತ್ರ ಬೇಕಾಗಿದೆ. ಹಿರಿಯ ರಾಜಕಾರಣಿ ಬಿ‌.ಸ್ವಾಮಿರಾವ್ ನೇತೃತ್ವದಲ್ಲಿ‌ ಜಿಲ್ಲಾ ಕೇಂದ್ರಕ್ಕೆ ಪಾದಯಾತ್ರೆಯ ದಿನಾಂಕವನ್ನು ಶೀಘ್ರವೇ ನಿಗದಿ ಮಾಡಲಾಗುವುದು’ ಎಂದು ಹೇಳಿದರು.

‘ಸಾಗರದ ಒಂದು ಭಾಗವಾಗಿ ಹೊಸನಗರವನ್ನು ಎರಡನೇ ಬಾರಿಗೆ ಪ್ರತಿನಿಧಿಸುತ್ತಿದ್ದೇನೆ. ಹೋರಾಟದಲ್ಲಿ ಭಾಗಿಯಾಗುವುದಷ್ಟೇ ಅಲ್ಲ, ಹೋರಾಟಕ್ಕೆ ಹಣದ ನೆರವು ಕೂಡ ನೀಡುತ್ತೇನೆ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಭರವಸೆ ನೀಡಿದರು.

‘ಹೊಸನಗರ ತಾಲ್ಲೂಕು ಎಲ್ಲಾ ರೀತಿಯಿಂದಲೂ ಅನ್ಯಾಯಕ್ಕೆ ಒಳಗಾಗಿದೆ. ಕ್ಷೇತ್ರದ ಹೋರಾಟಕ್ಕೆ ಎಲ್ಲಾ ರೀತಿಯಲ್ಲೂ ಸಹಕಾರ ನೀಡುತ್ತೇನೆ’ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

‘ಪಶ್ಚಿಮಘಟ್ಟ ಪ್ರದೇಶದ ಶಾಸಕರು, ಸಂಸದರು, ಸ್ವಾಮೀಜಿಗಳ ಸಹಕಾರ ಪಡೆಯಲು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ‌ ಹೋರಾಟ ರೂಪಿಸಲು ಮೂರು ಹಂತದ ಸಮಿತಿ ರಚಿಸುವುದು ಸೂಕ್ತ’ ಎಂದು ಮಾಜಿ ಶಾಸಕ ಹರತಾಳು ಹಾಲಪ್ಪ ಸಲಹೆ ನೀಡಿದರು.

ಮತದಾನ ಬಹಿಷ್ಕಾರ ಮಾಡಿ: ಹೊಸನಗರ ಯಾರಿಗೂ ಬೇಡವಾಗಿದೆ. ಇದಕ್ಕೆ ಮತದಾನ ಬಹಿಷ್ಕಾರ ಮಾಡುವುದೇ ಉತ್ತಮ ಎಂದು ಸುಪ್ರದೀಪ್ ನವೀನ್ ಆಕ್ರೋಶ ವ್ಯಕ್ತಪಡಿಸಿದಾಗ ಇಡೀ ಸಭೆ ಅನುಮೋದನೆ ಮಾಡಿತು. ಹೊಸನಗರ ಮಾಡಿದ ತ್ಯಾಗದ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿ ನಾಲ್ಕು ಹೋಬಳಿ ಒಳಗೊಂಡ ಹೊಸನಗರ ತಾಲ್ಲೂಕನ್ನೇ ಕ್ಷೇತ್ರವಾಗಿಸಿ ಮಾನ್ಯತೆ ನೀಡಬೇಕು ಎಂಬ ಒಕ್ಕೊರಲ ಒತ್ತಾಯ ಕೇಳಿ ಬಂತು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಪ್ರಾಸ್ತಾವಿಕವಾಗಿ‌ ಮಾತನಾಡಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿ.ಡಿ.ನಾರಾಯಣಪ್ಪ ಪ್ರಮುಖರಾದ ತೀನಾ ಶ್ರೀನಿವಾಸ್, ಚಿದಂಬರ ಹೂವಿನಕೋಣೆ, ಹಿರಿಯ ವಕೀಲ ಕೆ.ಜಿ.ಪ್ರಶಾಂತ್, ಬಂಡಿ ರಾಮಚಂದ್ರ, ಎನ್.ಆರ್.ದೇವಾನಂದ್, ಆಲವಳ್ಳಿ ವೀರೇಶ್, ಈಶ್ವರಪ್ಪ ಗೌಡ, ಬಿ.ಜಿ.ಚಂದ್ರಮೌಳಿ, ಸುಬ್ರಹ್ಮಣ್ಯ ಮಾಸ್ತಿಕಟ್ಟೆ, ಹಾಲಗದ್ದೆ ಉಮೇಶ್, ಅಮೀರ್ ಹಂಜಾ ರಿಪ್ಪನ್‌ಪೇಟೆ, ಕರುಣಾಕರ ಶೆಟ್ಟಿ, ವರ್ತೇಶ್ ರಿಪ್ಪನ್‌ಪೇಟೆ, ಎಂ.ಎನ್.ಸುಧಾಕರ್, ಸುಧೀಂದ್ರ ಪಂಡಿತ್ ವಿವಿಧ ಪಕ್ಷದ ಪ್ರಮುಖರು, ಹೋರಾಟಗಾರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.