ADVERTISEMENT

ಶಿಕಾರಿಪುರ | ತ್ಯಾಜ್ಯ ವಸ್ತುಗಳಿಂದ ಮಲಿನವಾಗುತ್ತಿರುವ ಹುಚ್ಚರಾಯನ ಕೆರೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2023, 5:11 IST
Last Updated 7 ಡಿಸೆಂಬರ್ 2023, 5:11 IST
ಶಿಕಾರಿಪುರದ ಹುಚ್ಚರಾಯನ ಕೆರೆಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವಸ್ತುಗಳ ದೃಶ್ಯ
ಶಿಕಾರಿಪುರದ ಹುಚ್ಚರಾಯನ ಕೆರೆಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವಸ್ತುಗಳ ದೃಶ್ಯ   

ಶಿಕಾರಿಪುರ: ಇಲ್ಲಿನ ಹುಚ್ಚರಾಯಸ್ವಾಮಿ ದೇವಸ್ಥಾನ ಸಮೀಪವಿರುವ ಹುಚ್ಚರಾಯನ ಕೆರೆ ತ್ಯಾಜ್ಯ ವಸ್ತು ತುಂಬಿ ಮಲಿನವಾಗಿದ್ದು, ಪಕ್ಕದಲ್ಲಿನ  ಭ್ರಾಂತೇಶ ಉದ್ಯಾನ ನಿರ್ವಹಣೆ ಇಲ್ಲದೇ ನಲುಗುತ್ತಿದೆ.

2011ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಹುಚ್ಚರಾಯನ ಕೆರೆ ಅಭಿವೃದ್ಧಿಗೆ ಕ್ರಮ ಕೈಗೊಂಡು, ಭ್ರಾಂತೇಶ ಉದ್ಯಾನ ಹಾಗೂ ಯಾತ್ರಿನಿವಾಸ ನಿರ್ಮಿಸಲಾಗಿತ್ತು.

ಅಂಜನಾಪುರ ಜಲಾಶಯದ ನಾಲೆಯಿಂದ ಹರಿದು ಬರುವ ನೀರಿನ ಮೂಲಕ ನೂರಾರು ಪ್ಲಾಸ್ಟಿಕ್ ಬಾಟಲಿಗಳು ಹುಚ್ಚರಾಯನಕೆರೆಗೆ ಬಂದು ಸೇರುತ್ತಿವೆ. ಇದರಿಂದ ಕೆರೆಯ ಸೌಂದರ್ಯ ಹಾಳಾಗುತ್ತಿದೆ. 

ADVERTISEMENT

ಪ್ಲಾಸ್ಟಿಕ್ ಬಾಟಲಿಗಳ ಜತೆ ಕೆಲವು ಬಡಾವಣೆಗಳ ಚರಂಡಿ ನೀರು ಹಾಗೂ ತ್ಯಾಜ್ಯ ವಸ್ತುಗಳು ಕೆರೆಯನ್ನು ಸೇರುತ್ತಿದೆ. ಪಟ್ಟಣದ ನಾಗರಿಕರು ಪೂಜಾ ವಸ್ತುಗಳನ್ನು ಕೆರೆಗೆ ಬಿಡುತ್ತಿದ್ದು, ತ್ಯಾಜ್ಯವಾಗಿ ಮಾರ್ಪಟ್ಟಿವೆ. ಕೆರೆಯ ದಡದ ಸಮೀಪ ಸಂಪೂರ್ಣ ಹೂಳು ತುಂಬಿಕೊಂಡಿದೆ. ಮಲಿನಗೊಂಡ ಕೆರೆ ನೀರಿನಲ್ಲಿಯೇ ಪ್ರತಿನಿತ್ಯ ಸಾರ್ವಜನಿಕರು ಈಜಾಡುತ್ತಿದ್ದಾರೆ.

ಕೆರೆಯ ಸುತ್ತಲೂ ವಾಯುವಿಹಾರಿಗಳಿಗೆ ಮಾರ್ಗ ನಿರ್ಮಿಸಿದ್ದು, ಪಟ್ಟಣದ ಬಹುತೇಕ ಜನ ವಾಯುವಿಹಾರಕ್ಕೆ ಮುಂಜಾನೆ ಹಾಗೂ ಸಂಜೆ ಆಗಮಿಸುತ್ತಾರೆ. ಆದರೆ, ವಾಯುವಿಹಾರಿಗಳ ಅನುಕೂಲಕ್ಕಾಗಿ ನಿರ್ಮಿಸಿದ್ದ ಶೌಚಾಲಯಗಳು ನಿರ್ವಹಣೆ ಇಲ್ಲದೇ ದುಃಸ್ಥಿತಿಯಲ್ಲಿದ್ದು, ವಾಯುವಿಹಾರಿಗಳು ಶೌಚಾಲಯಕ್ಕೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾತ್ರಿ ನಿವಾಸ

ಹುಚ್ಚರಾಯಸ್ವಾಮಿ ಕೆರೆ ಹಾಗೂ ಉದ್ಯಾನಕ್ಕೆ ಹೊಂದಿಕೊಂಡಂತೆ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸಲಾಗಿದ್ದು, ನೂರಾರು ಜನರು ತಂಗಲು ವ್ಯವಸ್ಥೆ ಇತ್ತು. ಅಲ್ಲೂ ಸಮರ್ಪಕ ನಿರ್ವಹಣೆ ಇಲ್ಲದೇ ಅಕ್ರಮ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಯಾತ್ರಿ ನಿವಾಸ ಬಾಗಿಲು ಮುರಿದಿದ್ದು ಮದ್ಯಪಾನಿಗಳ, ಧೂಮಪಾನಿಗಳ ಕೇಂದ್ರವಾಗಿ ಮಾರ್ಪಟ್ಟಿದೆ.

ಸಂಗೀತ ಕಾರಂಜಿ ಪ್ರದರ್ಶನ ಸ್ಥಗಿತ

ಹುಚ್ಚರಾಯನ ಕೆರೆ ಅಭಿವೃದ್ಧಿ ಸಂದರ್ಭದಲ್ಲಿ ಭ್ರಾಂತೇಶ ಉದ್ಯಾನ ನಿರ್ಮಿಸಲಾಗಿತ್ತು. ಉದ್ಯಾನದಲ್ಲಿ ಬೃಹದಾಕಾರದ ಶಿವನ ಮೂರ್ತಿ ಹಾಗೂ ಸಂಗೀತ ಕಾರಂಜಿ ಹಾಗೂ ಮಕ್ಕಳಿಗೆ ಆಟಿಕೆ ವಸ್ತುಗಳನ್ನು ನಿರ್ಮಿಸಲಾಗಿತ್ತು. ಉದ್ಯಾನ ಆರಂಭದ ಕೆಲವು ವರ್ಷಗಳ ಕಾಲ ವಾರಾಂತ್ಯದ ರಡು ದಿನ ಮಾತ್ರ ಸಂಗೀತ ಕಾರಂಜಿಯ ಪ್ರದರ್ಶನ ನಡೆಯುತ್ತಿತ್ತು. ಈಗ ಸ್ಥಗಿತಗೊಂಡಿದ್ದು ಉದ್ಯಾನದಲ್ಲಿರುವ ವಿವಿಧ ಆಟಿಕೆ ವಸ್ತುಗಳು ಹಾಳಾಗಿವೆ.

ಯಾತ್ರಿ ನಿವಾಸದ ದುರಸ್ತಿ ಕಾರ್ಯ ನಡೆಸುವ ಮೂಲಕ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಲಾಗುವುದು. ಯಾತ್ರಿ ನಿವಾಸವನ್ನು ವಿದ್ಯಾರ್ಥಿ ನಿಲಯವನ್ನಾಗಿ ಪರಿವರ್ತಿಸುವ ಬಗ್ಗೆ ಚರ್ಚೆ ನಡೆದಿದೆ.
ಮಲ್ಲೇಶಪ್ಪ ಬಿ. ಪೂಜಾರ್, ತಹಶೀಲ್ದಾರ್
ಉದ್ಯಾನ ಯಾತ್ರಿ ನಿವಾಸ ಹುಚ್ಚರಾಯನಕೆರೆ ನಿರ್ವಹಣೆ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು
ಹುಲಿಗಿ ಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಯಕರ್ನಾಟಕ ಜನಪರ ವೇದಿಕೆ
ನಿತ್ಯವೂ ಪ್ಲಾಸ್ಟಿಕ್ ಬಾಟಲಿಗಳು ಹುಚ್ಚರಾಯನ ಕೆರೆ ನೀರನ್ನು ಸೇರುತ್ತಿದ್ದು ನೀರು ಮಲಿನವಾಗುತ್ತಿದೆ. ಮಲಿನವಾದ ನೀರಿನಲ್ಲಿಯೇ ಜನರು ಈಜಾಡುವ ಸ್ಥಿತಿ ನಿರ್ಮಾಣವಾಗಿದೆ.
ಜೀವನ್, ಈಜುಪಟು
ಶಿಕಾರಿಪುರ ಭ್ರಾಂತೇಶ ಉದ್ಯಾನದಲ್ಲಿರುವ ಜಾರುಬಂಡಿ ಹಾಳಾಗಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.