ADVERTISEMENT

PV Web Exclusive: ಸಾವು ಇದೇ ಮೊದಲಲ್ಲ; ‘ಸೆಟಲ್ಮೆಂಟ್’ನಲ್ಲೇ ಎಲ್ಲ

ಚಂದ್ರಹಾಸ ಹಿರೇಮಳಲಿ
Published 22 ಜನವರಿ 2021, 12:40 IST
Last Updated 22 ಜನವರಿ 2021, 12:40 IST
ಶಿವಮೊಗ್ಗ ಸಮೀಪದ ಹುಣಸೋಡು ಬಳಿ ಸ್ಫೋಟದ ನಂತರದ ದೃಶ್ಯ
ಶಿವಮೊಗ್ಗ ಸಮೀಪದ ಹುಣಸೋಡು ಬಳಿ ಸ್ಫೋಟದ ನಂತರದ ದೃಶ್ಯ   

ಶಿವಮೊಗ್ಗ: ಅಬ್ಬಲಗೆರೆ–ಹುಣಸೋಡು ಮಧ್ಯದಲ್ಲಿನ ಎಸ್‌.ಎಸ್‌.ಕ್ರಷರ್ ಬಳಿ ನಡೆದ ಸ್ಫೋಟದಲ್ಲಿ ಐವರು ಮೃತಪಟ್ಟಿರುವುದು ದೃಢಪಟ್ಟಿದೆ. ವರ್ಷದ ಹಿಂದಷ್ಟೆ ಅದೇ ಪ್ರದೇಶದ ವ್ಯಾಪ್ತಿಯ ಗೆಜ್ಜೇನಹಳ್ಳಿ ಬಳಿ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಇಬ್ಬರು ಕಾರ್ಮಿಕರ ಮೇಲೆ ಕಲ್ಲು ಜರುಗಿ ಜೀವ ಕಳೆದುಕೊಂಡಿದ್ದರು.

ಕಲ್ಲುಕ್ವಾರಿ ಪ್ರದೇಶ, ಕ್ರಷರ್‌ ಘಟಕಗಳ ಬಳಿ ಇಂತಹ ಅವಘಡಗಳು ನಡೆಯುತ್ತಲೇ ಇರುತ್ತವೆ. ಯಂತ್ರಗಳ ವೈಫಲ್ಯ, ಸಿಡಿ ಮದ್ದು ಸ್ಫೋಟ, ಕಲ್ಲುಗಳ ಸಿಡಿತದಿಂದಾಗುವ ಅನಾಹುತ. ಮಿತಿ ಮೀರಿ ತೆಗೆದ ಆಳವಾದ ಗುಂಡಿಗಳಲ್ಲಿ ಅರಿವಿಲ್ಲದೆ ಇಳಿದು ಮುಳುಗಿ ಹೋದವರು. ವಿದ್ಯುತ್ ಅವಘಡ... ಹೀಗೆ ಪಟ್ಟಿ ಸಾವಿಗೆ ಕಾರಣಗಳ ಪಟ್ಟಿ ಬೆಳೆಯುತ್ತಲೇ ಇದೆ. ಹುಣಸೋಡು ಘಟನೆ ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ಅಷ್ಟೆ.

ಇಂತಹ ಅವಘಡಗಳಿಂದ ಸಂಭವಿಸಿದ ಸಾವುಗಳಲ್ಲಿ ಕೆಲವು ಬೆಳಕಿಗೆ ಬರುತ್ತವೆ. ಕೆಲವು ಹಣದ ‘ಸೆಟಲ್ಮೆಂಟ್’ಗಳ ಮೂಲಕ, ಕುಟುಂಬಸ್ಥರಿಗೆ ನೀಡುವ ಆಮಿಷಗಳಲ್ಲಿ ಮುಚ್ಚಿಹೋಗುತ್ತವೆ. ಅದಕ್ಕಾಗಿಯೇ ಸ್ಥಳೀಯರ ಬದಲು ಹೊರ ರಾಜ್ಯದ ಕಾರ್ಮಿಕರಿಗೆ ಮಣೆ ಹಾಕಲಾಗುತ್ತದೆ. ಸಾಮಾನ್ಯವಾಗಿ ಕ್ವಾರಿಗಳ ಒಡೆತನ ಹೊಂದಿರುವವರು ಜನಪ್ರತಿನಿಧಿಗಳು, ರಾಜಕೀಯ ಪಕ್ಷಗಳ ಮುಖಂಡರು. ಹಣ ಬಲದ ಪ್ರಭಾವಿಗಳ ಹಿಡಿತದಲ್ಲಿರುವ ಕಾರಣ ಎಷ್ಟೇ ಬಿಗಿ ಕಾನೂನು ಇದ್ದರೂ, ಪ್ರಭಾವಗಳ ಮುಂದೆ ಅವುಗಳೆಲ್ಲ ಗೌಣವೇ ಆಗಿವೆ.

ADVERTISEMENT

ಶಿವಮೊಗ್ಗ, ಭದ್ರಾವತಿ, ಹೊಸನಗರ ತಾಲ್ಲೂಕು ಸೇರಿ ಜಿಲ್ಲೆಯ ವಿವಿಧೆಡೆ 150ಕ್ಕೂ ಹೆಚ್ಚು ಕಲ್ಲು ಕ್ವಾರಿಗಳಿವೆ. ಅವುಗಳಲ್ಲಿ ಅರ್ಧದಷ್ಟು ಪರವಾನಗಿ ಪಡೆದ ಅಧಿಕೃತ ಕ್ವಾರಿಗಳು. ಉಳಿದವು ಅನಧಿಕೃತ. ಶಿವಮೊಗ್ಗ ಸಮೀಪದ ಗೆಜ್ಜೇನಹಳ್ಳಿ, ದೇವಕಾತಿಕೊಪ್ಪ, ಊರುಗಡೂರು, ಕಲ್ಲಗಂಗೂರು, ಮತ್ತೂರು, ಭದ್ರಾವತಿ ಭಾಗ, ಪಶ್ವಿಮ ಘಟ್ಟದ ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಕಲ್ಲುಗಣಿಗಾರಿಗೆ ನಿರಂತರವಾಗಿ ನಡೆಯುತ್ತಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ಕ್ವಾರಿಗಳಲ್ಲಿ ಭಾರಿ ಆಳದವರೆಗೆ ಕಲ್ಲುಗಳನ್ನು ತೆಗೆಯಲಾಗಿದೆ. ಒಂದೊಂದು ಕ್ವಾರಿಯೂ ನೂರಾರು ಅಡಿ ಆಳ, ಅಗಲದ ಕಂದಕಗಳಾಗಿವೆ.

ನೆಪಕಷ್ಟೆ ದಂಡದ ಅಸ್ತ್ರ: ಹಲವು ವರ್ಷಗಳಿಂದ ಅನಧಿಕೃತ ಕ್ವಾರಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಜರುಗಿಸುವ ಗೋಜಿಗೆ ಹೋಗಿಲ್ಲ. ವರ್ಷದ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಡ್ರೋನ್ ತಂತ್ರಜ್ಞಾನ ಬಳಸಿ ಜಿಲ್ಲೆಯ 55 ಕಲ್ಲು ಕ್ವಾರಿಗಳಲ್ಲಿ ಸರ್ವೆ ಕಾರ್ಯ ನಡೆಸಿದ್ದರು. ಆಗ ಹಲವು ಕ್ವಾರಿಗಳು ನಿಯಮ ಮೀರಿ ಕಾರ್ಯನಿರ್ವಹಿಸಿರುವುದು ದೃಢಪಟ್ಟಿತ್ತು.

ಅವಘಡಗಳು ನಡೆದಾಗ, ಸಾರ್ವಜನಿಕರ ಪ್ರತಿಭಟನೆ, ಒತ್ತಡಗಳು ಹೆಚ್ಚಾದಾಗ ಅಂತಹ ಕ್ವಾರಿಗಳ ಮೇಲೆ ದಾಳಿ ನಡೆಸಿ, ದಂಡ ವಿಧಿಸಲಾಗುತ್ತದೆ. ಕೆಲವರು ದಂಡ ಕಟ್ಟಿದರೆ, ಇನ್ನು ಕೆಲವರು ಸ್ಥಳೀಯ ಪ್ರಭಾವಿ ಜನಪ್ರತಿನಿಧಿಗಳ ಮೂಲಕ ಒತ್ತಡ ತಂದು ಅದರಲ್ಲೂ ವಿನಾಯಿತಿ ಪಡೆಯುತ್ತಾರೆ. ಇಲ್ಲವೇ, ವಿಳಂಬ ನೀತಿ ಅನುಸರಿಸುತ್ತಾರೆ. ಸ್ವಲ್ಪ ದಿನಗಳಲ್ಲೇ ಮತ್ತೆ ಕಾರ್ಯ ಆರಂಭವಾಗುತ್ತವೆ. ಇಂತಹ ದಂಡದ ಬಾಕಿ ಮೊತ್ತವೇ ಜಿಲ್ಲೆಯಲ್ಲಿ ಸುಮಾರು ₹ 200 ಕೋಟಿಯಷ್ಟಿದೆ.

ಸ್ಫೋಟನಡೆದ ಸ್ಥಳದ ಮಗ್ಗುಲಲ್ಲೇ ಇರುವ ಹೆಂಚಿನ ಶೆಡ್‌

ಅಧಿಕೃತ ಕ್ರಷರ್‌ ಬಳಿ ಅನಧಿಕ ಕ್ವಾರಿ: ಜಿಲ್ಲೆಯಲ್ಲಿರುವ ಬಹುತೇಕ ಕ್ರಷರ್‌ ಘಟಕಗಳಿಗೆ‌ ಕ್ವಾರಿಗಳೇ ಇಲ್ಲ. ದೂರದ ಕ್ವಾರಿಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಕ್ರಷರ್ ಮಾಲೀಕರು ನಂತರ ಅನಧಿಕೃತವಾಗಿ ತಾವೇ ಕ್ವಾರಿಗಳನ್ನು ನಿರ್ವಹಣೆ ಮಾಡುತ್ತಾರೆ. ಗುರುವಾರ ಸ್ಫೋಟ ನಡೆದ ಎಸ್‌.ಎಸ್‌.ಕ್ರಷರ್ ಅಧಿಕೃತ ಪರವಾನಗಿ ಹೊಂದಿದೆ. ಆದರೆ, ಅದೇ ಸ್ಥಳದ ಸುತ್ತಮುತ್ತ ಅನಧಿಕೃತವಾಗಿ ಆಳವಾದ ಗುಂಡಿಗಳನ್ನು ತೆಗೆದು ಕಲ್ಲುಗಳನ್ನು ಸ್ಫೋಟಿಸಲಾಗಿದೆ.

ಕ್ರಷರ್‌ಗಳಿಗೆ ಕಚ್ಚಾ ಸಾಮಗ್ರಿ ಪೂರೈಕೆ ಎಲ್ಲಿಂದ ಆಗುತ್ತದೆ, ಒಪ್ಪಂದಂತೆ ನಿಗದಿತ ಕ್ವಾರಿಗಳ ಕಲ್ಲನ್ನೇ ತೆಗೆಯುತ್ತಿದ್ದಾರೆಯೇ ಎಂಬ ಮಾಹಿತಿ ಪಡೆದು ಕ್ರಮ ಕೈಗೊಳ್ಳುವಲ್ಲೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಉದಾಸೀನ ತೋರುತ್ತಿದ್ದಾರೆ. ಇದೂ ಅಕ್ರಮ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಿದಂತಾಗಿದೆ.

ಟಿಪ್ಪರ್ ಮಾರ್ಗದಲ್ಲಿ ಇತರೆ ವಾಹನಗಳ ಸಾಲು: ಕ್ವಾರಿಗಳಿಂದ ಕ್ರಷರ್‌ಗಳಿಗೆ ಕಲ್ಲು ಸಾಗಿಸಲು, ನಂತರ ಕ್ರಷರ್‌ಗಳಿಂದ ಜಲ್ಲಿ ಸಾಗಿಸಲು ಪರವಾನಗಿ ಪಡೆಯುವ ಟಿಪ್ಪರ್‌ಗಳು ನಿಗದಿತ ಭಾರಕ್ಕಿಂತ ಹೆಚ್ಚು ತುಂಬಲಾಗುತ್ತದೆ. ಹಲವು ಬಾರಿ ದ್ವಿಚಕ್ರವಾಹನ ಸವಾರರು, ಪಾದಚಾರಿಗಳ ಮೇಲೆ ಜಲ್ಲಿ ಬಿದ್ದು ಅನಾಹುತಗಳಾಗಿವೆ. ಇದೇ ಮೊದಲ ಬಾರಿ ಇಡೀ ಜಿಲ್ಲೆಯ ಕ್ವಾರಿ, ಕ್ರಷರ್‌ಗಳು ಏಕ ಕಾಲಕ್ಕೆ ಬಂದ್‌ ಮಾಡಿಸಲಾಗಿದೆ. ಭಾರಿ ಟಿಪ್ಪರ್‌ಗಳು ಸಂಚರಿಸುತ್ತಿದ್ದ ರಸ್ತೆಯಲ್ಲಿ ರಾಜಕಾರಣಿಗಳು, ಜನಪ್ರತಿನಿಧಿಗಳು, ಪೊಲೀಸರ ವಾಹನಗಳ ಸಾಲು ಕಾಣಿಸುತ್ತಿದೆ.

ಹಣ ಕೊಟ್ಟರೆ ಎಲ್ಲಿಗಾದರೂ ವಿದ್ಯುತ್ ಸಂಪರ್ಕ: ಜಿಲ್ಲೆಯಲ್ಲಿ ಶೇ 50ರಷ್ಟು ಕ್ರಷರ್‌ಗಳು, ಕ್ವಾರಿಗಳು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ವರದಿ ಕೊಟ್ಟಿದ್ದಾರೆ. ಆಶ್ಚರ್ಯ ಎಂದರೆ ಈ ಎಲ್ಲ ಕ್ರಷರ್‌ಗಳಿಗೂ ಮೆಸ್ಕಾಂ ವಿದ್ಯುತ್ ಸಂಪರ್ಕ ಕಲ್ಪಿಸಿದೆ. ಹಣ ಕೊಟ್ಟರೆ ಎಲ್ಲಿಗಾದರೂ ಸಂಪರ್ಕ ಪಡೆಯಬಹುದು ಎನ್ನುವುದನ್ನು ಮೆಸ್ಕಾಂ ಅಧಿಕಾರಿಗಳು ಸಾಬೀತು ಮಾಡಿದ್ದಾರೆ.

ಸ್ಫೋಟಗೊಂಡ ಲಾರಿ ಅವಶೇಷ ವೀಕ್ಷಿಸಿದ ಸಚಿವ ಮುರುಗೇಶ್ ನಿರಾಣಿ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.