
ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ ಹುಂಚದಕಟ್ಟೆ ಗ್ರಾಮದ ಮಾರಿಕಾಂಬ ದೇವಿಯ ಎರಡು ದಿನಗಳ ಜಾತ್ರಾ ಮಹೋತ್ಸವವು ಗುರುವಾರ ವಿವಿಧ ಜಾನಪದ ಕಲಾ ಪ್ರಕಾರಗಳ ರಾಜಬೀದಿ ಉತ್ಸವದೊಂದಿಗೆ ದೇವಿಯನ್ನು ವನಕ್ಕೆ ಕಳಿಸುವ ಮೂಲಕ ಸಂಪನ್ನಗೊಂಡಿತು.
ಗುರುವಾರ ಸಂಜೆ ನಡೆದ ಹೊತ್ತು ಮಾರಿಯಮ್ಮನ (ಗಡಿ ಮಾರಮ್ಮ) ದೇವಿಯ ಉತ್ಸವಮೂರ್ತಿ ವಿದ್ಯುದ್ದೀಪಾಲಂಕೃತ ‘ಅಲಂಕೃತ ಸಾರೂಟ್’ ನಲ್ಲಿ ಕೂರಿಸಿ ಶೋಭಾಯಾತ್ರೆಗೆ ಅಣಿಯಾಗುತ್ತಿದ್ದಂತೆಯೇ, ನೆರೆದ ಭಕ್ತ ಸಮೂಹದ ಜಯಕಾರ, ಘೋಷಣೆ ಮುಗಿಲು ಮುಟ್ಟಿದ್ದವು. ಸ್ಥಳೀಯ ಕಲಾವಿದರಿಂದ ‘ಭಜನೆ’ ವಾದ್ಯ ವೃಂದ ಮತ್ತು ವಿವಿಧ ತಂಡಗಳಿಂದ ಚಂಡೆ, ತಾಳ, ತಟ್ಟಿರಾಯ, ಹುಲಿಕುಣಿತ, ಡೊಳ್ಳುಕುಣಿತ ಮುಂತಾದ ಜಾನಪದ ಕಲಾ ಪ್ರಕಾರ ಮೆರವಣಿಗೆಗೆ ಮೆರುಗು ನೀಡಿದವು.
ದೇವಿ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಹೆಣ್ಣು ಮಕ್ಕಳು ಪೂಜೆ ಸಲ್ಲಿಸಿದರು. ನೆನೆಬಸ್ತಿ ಗ್ರಾಮದಲ್ಲಿ ದೇವಿಯ ಉತ್ಸವ ಮೂರ್ತಿ ವಿಸರ್ಜನೆ ಮಾಡಲಾಯಿತು.
ನಂತರ ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಆರ್ಕೆಸ್ಟ್ರಾ ಏರ್ಪಡಿಸಲಾಗಿತ್ತು. ಗ್ರಾಮದ ತುಂಬೆಲ್ಲ ವಿದ್ಯುತ್ ದ್ವೀಪಗಳಿಂದ ಅಲಂಕೃತಗೊಳಿಸಿ, ಹಬ್ಬದ ಸಂಭ್ರಮ ನೆಲೆಸಿತ್ತು. ಬುಧವಾರ ಮುಂಜಾನೆ ಉತ್ಸವ ದೇವಿ ಮೂರ್ತಿಯನ್ನು ದೇವಸ್ಥಾನದ ಆವರಣಕ್ಕೆ ತಂದು ಅಮ್ಮನವರ ಗದ್ದುಗೆಯಲ್ಲಿ ಆರೋಹಣ ಮಾಡಲಾಗಿತ್ತು. ನಂತರ ಗುರುವಾರ ಮಧ್ಯಾಹ್ನದವರೆಗೂ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಬಂದ ಭಕ್ತರಿಂದ, ದರ್ಶನ, ಹರಕೆ ಸೇವೆ, ಪೂಜಾ ಸೇವಾ ಕೈಂಕರ್ಯ ಜರುಗಿದವು. ತೀರ್ಥಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.
ಹೊತ್ತು ಮಾರಿಯ ಹಿನ್ನೆಲೆ..
ಪೂರ್ವಜರು ರಿಪ್ಪನ್‌ಪೇಟೆ ಸಮೀಪದ ಕೆಂಚನಾಲದ ಮಾರಿಕಾಂಬೆ ಆರಾಧಿಸುತ್ತಿದ್ದರು. ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುತ್ತಿತ್ತು. ಎತ್ತಿನ ಬಂಡಿ ಅಥವಾ ಕಾಲ್ನಡಿಗೆಯಲ್ಲಿ ಬುತ್ತಿ ಕಟ್ಟಿಕೊಂಡು ಕುಟುಂಬ ಪರಿವಾರ ಸಮೇತರಾಗಿ 25 ಕಿ. ಮೀ ದೂರದ ಜಾತ್ರೆಗೆ ಹೋಗಿ ಬರುವುದು ಕಷ್ಟವಾದಾಗ ಗ್ರಾಮಸ್ಥರು ಒಟ್ಟುಗೂಡಿ ಹಿರಿಯರಾದ ದೊಡ್ಡ ಸುಬ್ಬಾಯ ಭಟ್ಟರ ಬಳಿ ಅಸಹಾಯಕತೆ ತೋಡಿಕೊಂಡಿದ್ದರು. ಅದರ ಪರಿಣಾಮ ಜಾತ್ರಾ ಸಮಯದಲ್ಲಿ ದೇವಿಯ ಅಪ್ಪಣೆ ಪಡೆದು ತಂಗಿಯ ಕರೆದುಕೊಂಡು ಬಂದು ಇಲ್ಲಿ ಜಾತ್ರೆ ಆರಂಭಿಸಿದರು ಎಂದು ಊರಿನ ಹಿರಿಯರಾದ ಬಿ.ಗೋಪಾಲಪ್ಪ ಹೇಳುತ್ತಾರೆ. ಮೂಲದಲ್ಲಿ ಕೊಟ್ಟಣ್ಣ ನಂತರ ಹಾಲಪ್ಪಣ್ಣ ಚಂದ್ರಪ್ಪ ಮಾಲತೇಶ್ ದೇವಿಯ ಹೊತ್ತು ಮೆರವಣಿಗೆಯಲ್ಲಿ ಸಾಗುತ್ತಿದ್ದದ್ದು ವಿಶೇಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.