ADVERTISEMENT

ರೈತನ ಮಗನ ಐಎಎಸ್ ಸಾಧನೆ

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಪ್ರೇರಣೆಯಾದ ಮಿಥುನ್

ಶಿವಾನಂದ ಕರ್ಕಿ
Published 9 ಆಗಸ್ಟ್ 2020, 2:47 IST
Last Updated 9 ಆಗಸ್ಟ್ 2020, 2:47 IST
ಹನಸ ಗ್ರಾಮದ ಮಿಥುನ್ ಎಚ್.ಎನ್.
ಹನಸ ಗ್ರಾಮದ ಮಿಥುನ್ ಎಚ್.ಎನ್.   

ತೀರ್ಥಹಳ್ಳಿ: ಮುಳುಗಡೆ ಪ್ರದೇಶದ ರೈತನ ಮಗ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ.

2019ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ರಾಜ್ಯದ ಒಟ್ಟು 40 ಅಭ್ಯರ್ಥಿಗಳಲ್ಲಿ ತಾಲ್ಲೂಕಿನ ಮೆಗರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹನಸ ಗ್ರಾಮದ ಮಿಥುನ್ ಎಚ್.ಎನ್. 159ನೇ ರ‍್ಯಾಂಕ್‌ ಗಳಿಸುವ ಮೂಲಕ ರೈತರ ಮಕ್ಕಳು ಉನ್ನತ ಹುದ್ದೆ ಅಲಂಕರಿಸಬಹುದು ಎಂಬುದನ್ನು ತೋರಿಸಿದ್ದಾರೆ.

ವರಾಹಿ ವಿದ್ಯುತ್ ಯೋಜನೆಯಲ್ಲಿ ಹನಸ ಗ್ರಾಮದ ಕೆಲ ಭಾಗ ಮುಳುಗಡೆ ಯಾದ ನಂತರ ಮಿಥುನ್ ಅವರ ತಂದೆ ಎಂ.ಪಿ. ನಾಗರಾಜ್ ಹಾಗೂ ಗಾಯಿತ್ರಿ ದಂಪತಿ ತೀರ್ಥಹಳ್ಳಿ, ಕೊಪ್ಪ ತಾಲ್ಲೂಕಿನ ಗಡಿಭಾಗವಾದ ಭಂಡಿಗಡಿಯಲ್ಲಿ ಜಮೀನು ಖರೀದಿಸಿ ಕೃಷಿಯಲ್ಲಿ ಜೀವನ ಕಂಡುಕೊಂಡರು.

ADVERTISEMENT

ಪ್ರಾಥಮಿಕ ಶಿಕ್ಷಣವನ್ನು ಕೊಪ್ಪ ತಾಲ್ಲೂಕಿನ ಗ್ರಾಮೀಣ ಭಾಗದ ವೆಂಕಟೇಶ್ವರ ವಿದ್ಯಾಮಂದಿರ ಹುಲ್ಮಕ್ಕಿಯಲ್ಲಿ ಪಡೆದ ಮಿಥುನ್ ಅವರಿಗೆ 10ನೇ ತರಗತಿಯಲ್ಲಿರುವಾಗ ಮೇಗರವಳ್ಳಿ ಹಾಸ್ಟೆಲ್‌ ಮೇಲ್ವಿಚಾರಕ ರಾಗಿದ್ದ ತಿಪ್ಪೇಸ್ವಾಮಿ, ಪಾಪಣ್ಣ, ಈಗಿನ ಶಿವಮೊಗ್ಗ ನಗರಪಾಲಿಕೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ ಐಎಎಸ್ ಕನಸು ಬಿತ್ತಿದರು ಎಂಬುದನ್ನು ಅವರು ಸ್ಮರಿಸುತ್ತಾರೆ. ಆ ಕನಸು ಪ್ರಬಲವಾಗತೊಡಗಿ ಐಎಎಸ್‌ ತಮ್ಮ ಗುರಿಯಾಗಿಸಿಕೊಂಡರು.

ಪಿಯು ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದ ಮಿಥುನ್ ಬೆಂಗಳೂರಿನಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದರು. ಎರಡೂವರೆ ವರ್ಷ ವಾಣಿಜ್ಯ ತೆರಿಗೆ ಇಲಾಖೆ ಪರಿವೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಇದಕ್ಕೂ ಮುನ್ನ 2017ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ 14ನೇ ರ‍್ಯಾಂಕ್‌ ಪಡೆದು 2019ರಲ್ಲಿ ಡಿವೈಎಸ್‌ಪಿಯಾಗಿ ನೇಮಕವಾಗಿರುವ ಮಿಥುನ್ ಸದ್ಯ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

‘ನಾಲ್ಕು ಬಾರಿ ಪರೀಕ್ಷೆ ಬರೆದು ಸಂದರ್ಶನಕ್ಕೆ ಹಾಜರಾಗಿದ್ದರೂ ಯಶಸ್ಸು ಕಾಣಲಿಲ್ಲ. 5ನೇ ಬಾರಿಗೆ ಆಯ್ಕೆಯಾಗಿದ್ದೇನೆ. ಕೆಲಸದಲ್ಲಿ ಇರುವಾಗ ಓದಲು ಹೆಚ್ಚು ಸಮಯ ಸಿಗುತ್ತಿರಲಿಲ್ಲ. ಸಿಕ್ಕ ಸಮಯವನ್ನು ಬಳಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ರಜೆ ಹಾಕಿ ಓದುತ್ತಿದ್ದೆ. ಮನೆಯವರಿಗೆ ಐಎಎಸ್ ಬಗ್ಗೆ ಗೊತ್ತಿಲ್ಲದೇ ಇದ್ದರೂ ನನ್ನ ಓದಿಗೆ ತಂದೆ, ತಾಯಿ ಬೆಂಬಲವಾಗಿ ನಿಂತಿದ್ದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಕಾರದಿಂದ ದೆಹಲಿಯಲ್ಲಿ ತರಬೇತಿ ಪಡೆಯಲು ಸಾಧ್ಯವಾಯಿತು. ಪ್ರತಿನಿತ್ಯ 10ರಿಂದ 12 ಗಂಟೆ ಅಭ್ಯಾಸ ಮಾಡುತ್ತಿದ್ದೆ.ಅಂದು ಕಟ್ಟಿದ ಕನಸು ಇಂದು ನನಸಾಗಿದೆ’ ಎಂದು ಸಂತಸ ಹಂಚಿಕೊಂಡರು.

ಶ್ರದ್ಧೆ, ಪರಿಶ್ರಮವಿದ್ದರೆ ಗ್ರಾಮೀಣ ವಿದ್ಯಾರ್ಥಿಗಳೂ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.