ADVERTISEMENT

BR ಪಾಟೀಲ ಆರೋಪ ನಿಜವಾಗಿದ್ದಲ್ಲಿ ಸಚಿವ ಜಮೀರ್ ರಾಜೀನಾಮೆ ಕೊಡಲಿ: ಶಾಸಕ ಬೇಳೂರು

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 8:16 IST
Last Updated 23 ಜೂನ್ 2025, 8:16 IST
   

ಶಿವಮೊಗ್ಗ: 'ಮನೆ ಹಂಚಿಕೆಗೆ ಲಂಚ ನೀಡಬೇಕಿದೆ ಎಂದು ಹಿರಿಯ ಶಾಸಕ ಬಿ.ಆರ್.ಪಾಟೀಲ್ ಮಾಡಿರುವ ಆರೋಪ ನಿಜವಾಗಿದ್ದರೆ ವಸತಿ ಸಚಿವ ಜಮೀರ್ ಅಹಮದ್ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನಿರ್ದೋಷಿ ಎಂದು ಸಾಬೀತಾದಲ್ಲಿ ಮತ್ತೆ ಸಚಿವರಾಗಿ ಮುಂದುವರೆಯಲಿ' ಎಂದು ಸಾಗರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಸತಿ ಯೋಜನೆಯಲ್ಲಿನ ಲಂಚದ ಬಗ್ಗೆ ಹಿರಿಯ ಸದಸ್ಯರೊಬ್ಬರು ಧ್ವನಿಯೆತ್ತಿದ್ದಾರೆ. ಹಾಗಾಗಿ ಸಂಬಂಧಪಟ್ಟ ಸಚಿವರು ತನಿಖೆಗೆ ಒಳಪಡಬೇಕು. ಅಲ್ಲಿಯವರೆಗೂ ರಾಜೀನಾಮೆ ನೀಡುವುದು ಒಳ್ಳೆಯದು ಎಂದರು.

ತನಿಖೆ ಮುಗಿದ ಬಳಿಕ ಜಮೀರ್ ಅಹಮದ್ ಖಾನ್ ಬೇಕಾದರೆ ಮತ್ತೆ ಮಂತ್ರಿ ಆಗಲಿ. ಬೇರೆ ಬೇರೆ ಹಗರಣಗಳಲ್ಲೂ ಕೂಡ ಹಲವರು ರಾಜೀನಾಮೆ ಕೊಟ್ಟಿರುವ ನಿದರ್ಶನವಿದೆ ಎಂದರು.

ADVERTISEMENT

ಜಮೀರ್ ತಪ್ಪಿತಸ್ಥರು ಅಲ್ಲ ಎಂದ ತಕ್ಷಣ ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳುವ ಅವಕಾಶವೂ ಇದೆ ಎಂದರು.

ವಿಜಯೇಂದ್ರ ಮೌನವೇಕೆ?: ಹಾಲು, ವಿದ್ಯುತ್ ದರ ಎರಡು ರೂಪಾಯಿ ಹೆಚ್ಚಾದರೆ ಬೀದಿಗಿಳಿದು ಹೋರಾಟ ಮಾಡುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಈಗ ರಸಗೊಬ್ಬರದ ದರ ಹೆಚ್ಚಳವಾಗಿದ್ದರೂ ಮೌನ ವಹಿಸಿರುವುದೇಕೆ ಎಂದು ಬೇಳೂರು ಪ್ರಶ್ನಿಸಿದರು.

ಕೇಂದ್ರ ಸರ್ಕಾರ ರಸಗೊಬ್ಬರದ ದರವನ್ನು ಪ್ರತೀ ಚೀಲಕ್ಕೆ ₹180 ರಿಂದ ₹200 ಹೆಚ್ಚಳಗೊಳಿಸಿದೆ. ಅದರಿಂದ ಸಂಕಷ್ಟ ಅನುಭವಿಸುವ ರೈತರು ಬಿಜೆಪಿಗೆ ಸಂಬಂಧವಿಲ್ಲವೇ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.