
ಶಿವಮೊಗ್ಗ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಫೆ.28 ರಿಂದ ಮಾರ್ಚ್ 17ರ ವರೆಗೆ ಜಿಲ್ಲೆಯ 41 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಪರೀಕ್ಷೆ ಸುಗಮವಾಗಿ ನಡೆಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗದಲ್ಲಿ 17, ಭದ್ರಾವತಿಯಲ್ಲಿ ಆರು, ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ತಲಾ ಮೂರು, ಸಾಗರ ಮತ್ತು ಶಿಕಾರಿಪುರದಲ್ಲಿ ತಲಾ ಐದು ಮತ್ತು ಸೊರಬದಲ್ಲಿ ಎರಡು ಪರೀಕ್ಷಾ ಕೇಂದ್ರಗಳು ಸೇರಿ ಜಿಲ್ಲೆಯಲ್ಲಿ ಒಟ್ಟು 41 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ.
19,009 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 7,188 ಬಾಲಕರು, 10,567 ಬಾಲಕಿಯರು ಸೇರಿದಂತೆ ಒಟ್ಟು 17,755 ರೆಗ್ಯೂಲರ್ ವಿದ್ಯಾರ್ಥಿಗಳು, 871 ಪುನರಾವರ್ತಿತ ಅಭ್ಯರ್ಥಿಗಳು, 383 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಎನ್.ಹೇಮಂತ್ ಮಾತನಾಡಿ, ಪೋಷಕರ ಕೋರಿಕೆಯ ಮೇರೆಗೆ ನಿತ್ಯ ಸಂಜೆ ವಿಶೇಷ ಕಲಿಕಾ ತರಗತಿ ನಡೆಸಲಾಗಿದೆ. ಜಿಲ್ಲೆಗೆ ಉತ್ತಮ ಫಲಿತಾಂಶ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಸಿಇಟಿ ತರಬೇತಿ ತರಗತಿಗಳ ನಡೆಸಲು ಉದ್ದೇಶಿಸಲಾಗಿದೆ. ಯಾವುದೇ ವಿದ್ಯಾರ್ಥಿ ಅನುತ್ತೀರ್ಣವಾಗದಂತೆ ನೋಡಿಕೊಳ್ಳುವ ಸದಾಶಯ ಹೊಂದಲಾಗಿದೆ ಎಂದರು.
ಸಭೆಯಲ್ಲಿ ಎಡಿಸಿ ವಿ.ಅಭಿಷೇಕ್, ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಉಪಸ್ಥಿತರಿದ್ದರು.
ಆತಂಕವಿಲ್ಲದೆ ಪರೀಕ್ಷೆ ಬರೆಯುವಂತೆ ಪೋಷಕರು ಮಕ್ಕಳನ್ನು ಪ್ರೇರೇಪಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗುವ ಪ್ರಶ್ನೆಪತ್ರಿಕೆಗಳು ನಕಲಿ ಹಾಗೂ ನಂಬಲರ್ಹವಲ್ಲ. ವಿದ್ಯಾರ್ಥಿಗಳು ವಿಚಲಿತರಾಗುವುದು ಬೇಡಎನ್.ಹೇಮಂತ್ ಜಿಲ್ಲಾ ಪಂಚಾಯಿತಿ ಸಿಇಒ
ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯ
ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಉಚಿತ ಬಸ್‌ಸೌಲಭ್ಯ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ಬಸ್ ಸಂಚರಿಸುವ ಮಾರ್ಗಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಕೇಂದ್ರದ ಪ್ರವೇಶ ಪತ್ರ ತೋರಿಸಿದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.