ADVERTISEMENT

ತೀರ್ಥಹಳ್ಳಿ: ಕೆಲಸ ಮಾಡುವಲ್ಲಿಗೇ ಅಕ್ರಮ ಮದ್ಯ ಪೂರೈಕೆ

ತಾಲ್ಲೂಕಿನ ಗ್ರಾಮೀಣ ಭಾಗದ ಕೂಲಿ ಕಾರ್ಮಿಕರ ಜೀವಕ್ಕೆ ಕುತ್ತು

ಶಿವಾನಂದ ಕರ್ಕಿ
Published 3 ಫೆಬ್ರುವರಿ 2020, 10:18 IST
Last Updated 3 ಫೆಬ್ರುವರಿ 2020, 10:18 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ತೀರ್ಥಹಳ್ಳಿ: ಗ್ರಾಮೀಣ ಭಾಗದ ಜನರ ಪ್ರಾಣಕ್ಕೆ ಕುತ್ತು ತರುವ ಕಳಪೆ ದರ್ಜೆಯ ಅಕ್ರಮ ಮದ್ಯ ಮಾರಾಟ ಯಾವುದೇ ಅಡತಡೆ ಇಲ್ಲದೇ ತಾಲ್ಲೂಕಿನಲ್ಲಿ ನಿರಾತಂಕವಾಗಿ ನಡೆಯುತ್ತಿದೆ. ಕಳಪೆ ದರ್ಜೆ ಮದ್ಯ ಸೇವಿಸಿ ಹಲವರು ಜೀವ ತೆತ್ತಿದ್ದಾರೆ. ಕೆಲ ಕುಟುಂಬಗಳು ದುಡಿಯುವ ಕೈಗಳನ್ನೇ ಕಳೆದುಕೊಂಡು ಅನಾಥವಾಗಿವೆ.

ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿರುವ ಕುರಿತು ಖಚಿತ ಮಾಹಿತಿ ಇದ್ದರೂ ಸಂಬಂಧಪಟ್ಟ ಇಲಾಖೆಗಳು ಕ್ರಮ ತೆಗೆದುಕೊಳ್ಳದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

ಇದ್ದಲ್ಲಿಗೇ ಮದ್ಯ ಸರಬರಾಜು: ಹಳ್ಳಿಗಳಲ್ಲಿ ಕೆಲ ಆಯ್ದ ಮನೆಗಳು, ದಿನಸಿ ಅಂಗಡಿ, ಸಣ್ಣ ಪುಟ್ಟ ಹೋಟೆಲ್‌ ಮುಂತಾದೆಡೆ ಅಕ್ರಮ ಮದ್ಯ ಮಾರಾಟ ಜೋರಾಗಿದೆ. ಬಯಲುಸೀಮೆಯಿಂದ ಹೊಟ್ಟೆಪಾಡಿಗಾಗಿ ಮಲೆನಾಡಿನ ಅಡಿಕೆ ತೋಟದ ಬೇಸಾಯಕ್ಕೆ ಬಂದ ಕೂಲಿಕಾರ್ಮಿಕರಿಗೆ ಕೆಲಸ ಮಾಡುವ ಸ್ಥಳಕ್ಕೆ ಕಳಪೆ ದರ್ಜೆಯ ಅಕ್ರಮ ಮದ್ಯ ಸರಬರಾಜಾಗುತ್ತಿದೆ. ಹೆಚ್ಚು ಬೆಲೆಗೆ ಮಾರಾಟವಾಗುವ ಅಕ್ರಮ ಮದ್ಯ ಸೇವಿಸುವ ಬಡವರ ಬದುಕು ನರಕವಾಗುತ್ತಿದೆ. ದಲಿತ ಕೇರಿಗಳನ್ನು ಗುರಿಯಾಗಿಸಿಕೊಂಡು ಮಾರಾಟ ಮಾಡಲಾಗುತ್ತಿದೆ. ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು. ಬಡ ಕುಟುಂಬಗಳನ್ನು ಉಳಿಸಬೇಕು ಎನ್ನುತ್ತಾರೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಹಾರೋಗೊಳಿಗೆ ವಿಶ್ವನಾಥ್.

ADVERTISEMENT

ಪರವಾನಗಿ ಪಡೆದ ವೈನ್‌ಶಾಪ್‌, ಬಾರ್, ರೆಸ್ಟೋರೆಂಟ್‌ನ ಕೆಲ ಮಾಲೀಕರು ಅಕ್ರಮ ಮದ್ಯ ಪೂರೈಕೆ ಮಾಡುವುದನ್ನು ಹಳ್ಳಿಗಳಿಗೆ ವಿಸ್ತರಿಸಿಕೊಂಡಿದ್ದಾರೆ. ನಿರ್ದಿಷ್ಟ ಭಾಗಕ್ಕೆ ತಮ್ಮ ಕಡೆಯವರು ಮಾತ್ರ ಸರಬರಾಜು ಮಾಡಬೇಕು ಎಂಬ ಅಘೋಷಿತ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ. ನಿಗದಿಪಡಿಸಿದ ವಾಹನಗಳಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಪೂರೈಕೆಯಾಗುತ್ತಿದ್ದರೂ ಕಾನೂನು ಪಾಲನೆ ಮರೀಚಿಕೆಯಾಗಿದೆ ಎಂದು ದೂರುತ್ತಾರೆ ಅವರು.

ಕೆಲ ಪರಿಣತ ದಂಧೆಕೋರರು ಹಳ್ಳಿಗಳಿಗೆ ಸುಲಭವಾಗಿ ಬೈಕ್‌, ಕಾರಿನ ಮೂಲಕ ಅಕ್ರಮ ಮದ್ಯ ಸರಬರಾಜು ಮಾಡುತ್ತಿದ್ದಾರೆ. ಪರಿಣಾಮವಾಗಿ ವೃದ್ಧರು, ಯುವಕರು ಮದ್ಯದ ಚಟ ಅಂಟಿಸಿಕೊಂಡಿದ್ದಾರೆ. ಹಳ್ಳಿಯಿಂದ ಪೇಟೆಗೆ ಹೋಗುವುದಕ್ಕೆ ಹಣ ಖರ್ಚಾಗುತ್ತದೆ. ಸಂಜೆ ವೇಳೆ ಮನೆಗೆ ವಾಪಸ್‌ ಬರಲು ಬಸ್ಸಿನ ವ್ಯವಸ್ಥೆ ಇಲ್ಲ. ಹಾಗಾಗಿ ಸ್ಥಳೀಯವಾಗಿ ಸಿಗುವ ಮದ್ಯ ಸೇವಿಸುತ್ತಿರುವುದಾಗಿ ಹೆಸರು ಬಹಿರಂಗಪಡಿಸಲು ಇಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.