ADVERTISEMENT

ಸಾಗರ: ಭತ್ತಕ್ಕೆ ಅಸಮರ್ಪಕ ಬೆಂಬಲ ಬೆಲೆ, ರೈತರಲ್ಲಿ ಅಸಮಾಧಾನ

ಎಂ.ರಾಘವೇಂದ್ರ
Published 28 ನವೆಂಬರ್ 2020, 19:31 IST
Last Updated 28 ನವೆಂಬರ್ 2020, 19:31 IST
ಸಾಗರ ತಾಲ್ಲೂಕಿನ ಗ್ರಾಮವೊಂದರಲ್ಲಿ ಭತ್ತ ಬೆಳೆದಿರುವುದು
ಸಾಗರ ತಾಲ್ಲೂಕಿನ ಗ್ರಾಮವೊಂದರಲ್ಲಿ ಭತ್ತ ಬೆಳೆದಿರುವುದು   

ಸಾಗರ:ಬೆಂಬಲ ಬೆಲೆ ಯೋಜನೆಯಡಿ ರಾಜ್ಯ ಸರ್ಕಾರ ಭತ್ತಕ್ಕೆ ಘೋಷಿಸಿರುವ ಭತ್ತ ಖರೀದಿಸಲು ನಿಗದಿಗೊಳಿಸಿರುವ ಬೆಲೆ ಅಸಮರ್ಪಕವಾಗಿದೆ ಎಂದು ಈ ಭಾಗದ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಈಗ ಘೋಷಿಸಿರುವಂತೆ ಸಾಮಾನ್ಯ ದರ್ಜೆಯ ಭತ್ತವನ್ನು ಕ್ವಿಂಟಲ್‌ಗೆ ₹ 1,868 ಹಾಗೂ ಉತ್ತಮ ದರ್ಜೆಯ ಭತ್ತವನ್ನು ಕ್ವಿಂಟಲ್‌ಗೆ ₹ 1,888ರ ದರದಲ್ಲಿ ಖರೀದಿಸಲಾಗುವುದು. ಆದರೆ ಭತ್ತದ ಬೆಳೆ ಬೆಳೆಯಲು ತಗಲುವ ಖರ್ಚಿನ ಪ್ರಮಾಣವನ್ನು ಗಮನಿಸಿದರೆ ಸರ್ಕಾರ ನಿಗದಿಪಡಿಸಿರುವ ದರ ನಿರಾಶಾದಾಯಕ ಎಂಬ ಅಭಿಪ್ರಾಯ ರೈತರದ್ದು.

ಭತ್ತದ ಬೀಜ ಖರೀದಿ, ಅಗೆ ಹಾಕುವುದು, ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ ಬಳಕೆ, ಟಿಲ್ಲರ್ ಹೂಟಿ, ಕೊಯ್ಲು, ಹೊರೆ ಕಟ್ಟುವುದು, ಭತ್ತ ಸಾಗಾಣಿಕೆ ಸೇರಿ ಹಲವು ಕೆಲಸಗಳಿಗೆ ಒಂದು ಎಕರೆಗೆ ಕನಿಷ್ಠ ₹ 25 ಸಾವಿರದಿಂದ ₹ 30 ಸಾವಿರದವರೆಗೂ ಖರ್ಚು ಬರುತ್ತದೆ.

ADVERTISEMENT

ಮಲೆನಾಡು ಪ್ರದೇಶದಲ್ಲಿ ಒಂದು ಎಕರೆಗೆ ಸರಾಸರಿ 15 ಕ್ವಿಂಟಲ್ ಭತ್ತ ಬೆಳೆಯಲಾಗುತ್ತಿದೆ. ಸರ್ಕಾರ ನಿಗದಿಪಡಿಸಿರುವ ದರದ ಪ್ರಮಾಣ ನೋಡಿದರೆ ‘ತೋಟ ಕಾದಿದ್ದಕ್ಕೂ ಬಾಳೆಹಣ್ಣು ತಿಂದಿದ್ದಕ್ಕೂ ಸಮ’ ಎನ್ನುವ ಗಾದೆ ನೆನಪಿಸುವಂತಿದೆ ಎನ್ನುತ್ತಾರೆ ಬೆಳೆಗಾರದಿವಾಕರ ಬಿಲ್ಕಂದೂರು.

ಬೆಂಬಲ ಬೆಲೆ ಯೋಜನೆಯಡಿ ರೈತರು ಭತ್ತವನ್ನು ಮಾರಾಟ ಮಾಡಲು ರೈತ ಸಂಪರ್ಕ ಕೇಂದ್ರದಲ್ಲಿ ಗುರುತಿನ ಚೀಟಿ ಮಾಡಿಸಿ ನಂತರ ಅದನ್ನು ಎಪಿಎಂಸಿ ಆವರಣದಲ್ಲಿರುವ ಆಹಾರ ಇಲಾಖೆಯ ಉಗ್ರಾಣಕ್ಕೆ ತಲುಪಿಸಿ ಹೆಸರು ನೋಂದಾಯಿಸಬೇಕು. ನಂತರ ಸರ್ಕಾರ ನಿಗದಿಪಡಿಸಿದ ರೈಸ್‌ಮಿಲ್‌ಗೆ ಭತ್ತವನ್ನು ತಲುಪಿಸಬೇಕು. ಇದೆಲ್ಲವನ್ನೂ ಗಮನಿಸಿದರೆ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡುವುದಕ್ಕಿಂತ ಖಾಸಗಿಯಾಗಿ ಮಾರಾಟ ಮಾಡುವುದೇ ಅನುಕೂಲ ಎಂಬುದು ರೈತರ ದೂರು.

ಈಗಾಗಲೇ ಮಲೆನಾಡಿನಲ್ಲಿ ಈಚಿನ ವರ್ಷಗಳಲ್ಲಿ ಭತ್ತ ಬೆಳೆಯುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ರೈತರ ಮಕ್ಕಳು ನಗರ ಪ್ರದೇಶಕ್ಕೆ ಮರಗೆತ್ತನೆ, ಗಾರೆ ಕೆಲಸ ಮೊದಲಾದ ವೃತ್ತಿಗಳಿಗೆ ವಲಸೆ ಹೋಗುತ್ತಿದ್ದಾರೆ. ಆರ್ಥಿಕವಾಗಿ ಅನುಕೂಲವುಳ್ಳವರು ಭತ್ತದ ಗದ್ದೆಗಳಲ್ಲಿ ವಾಣಿಜ್ಯ ಬೆಳೆ ಬೆಳೆಯಲು ಮುಂದಾಗಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಭತ್ತಕ್ಕೆ ಕ್ವಿಂಟಲ್‌ಗೆ ಕನಿಷ್ಠ ₹ 4 ಸಾವಿರ ದರ ನಿಗದಿಪಡಿಸಿದ್ದರೆ ಭತ್ತ ಬೆಳೆಯುವವರಿಗೆ ಪ್ರೋತ್ಸಾಹ ನೀಡಿದಂತಾಗುತ್ತಿತ್ತು ಎಂದು ಒತ್ತಾಯಿಸುತ್ತಾರೆ ಬೆಳೆಗಾರ ರಾಮಪ್ಪ ಮರ್ತೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.