
ಶಿವಮೊಗ್ಗ: ‘ಜೀವನದಲ್ಲಿ ಯಾವುದೇ ರೀತಿಯ ಸಂಶಯ, ಸಂದೇಹಗಳು ಎದುರಾದಲ್ಲಿ ಸಂವಿಧಾನ ಓದಿದರೆ ಉತ್ತರ ಸಿಗುತ್ತದೆ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ಜಿಲ್ಲಾಡಳಿತದಿಂದ ಬುಧವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಎಲ್ಲರನ್ನೂ ಸಮಾನತೆಯಿಂದ ಕಾಣಲು, ಎಲ್ಲ ರೀತಿಯ ನ್ಯಾಯ ಒದಗಿಸಲು ಮಾರ್ಗಸೂಚಿಯಾಗಿರುವ ನಮ್ಮ ಸಂವಿಧಾನವನ್ನು ಮಕ್ಕಳು ಸೇರಿದಂತೆ ಎಲ್ಲರೂ ಓದಿ, ತಿಳಿದುಕೊಳ್ಳಬೇಕು’ ಎಂದರು.
‘ಸಂವಿಧಾನಕ್ಕೆ ಸಾಕಷ್ಟು ಆಯಾಮಗಳಿದ್ದು, ಅದನ್ನು ಓದಿ ಅರ್ಥ ಮಾಡಿಕೊಳ್ಳಬೇಕು. ಅದರ ಮಹತ್ವ ತಿಳಿಯಲು ಸಾಕಷ್ಟು ಚಿಂತನೆ ನಡೆಸಬೇಕು. ಐಎಎಸ್ ಮಾಡುವಾಗ ಪ್ರತಿ ಸಲ ಸಂವಿಧಾನ ಓದಿದಾಗಲೂ ಹೊಸ ಅರ್ಥ ಮತ್ತು ಪ್ರೇರಣೆ ಲಭಿಸುತ್ತಿತ್ತು. ನಮ್ಮ ಮಕ್ಕಳು ಸಂವಿಧಾನದ ಮೂಲ ಉದ್ದೇಶ, ಅದು ನೀಡಿರುವ ಹಕ್ಕು, ಬಾಧ್ಯತೆಗಳ ತಿಳಿದುಕೊಳ್ಳಬೇಕು’ ಎಂದು ಹೇಳಿದರು.
ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಎಂ.ಬಸವರಾಜಪ್ಪ ವಿಶೇಷ ಉಪನ್ಯಾಸ ನೀಡಿ, 1930ರ ನ. 26 ರಂದು ದೇಶ ಪೂರ್ಣ ಸ್ವರಾಜ್ಯ ಘೋಷಿಸಿದ್ದು, ಇದರ ಸ್ಮರಣಾರ್ಥ 1949 ರ ನ. 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು.
ಸಮಾಜದ ಸ್ವಾಸ್ಥ್ಯ ಕಾಪಾಡಲು ನಮ್ಮ ಸರ್ಕಾರ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮ ಜಾರಿಗೊಳಿಸಿದೆ. ಸಂವಿಧಾನವನ್ನು ಅರ್ಥ ಮಾಡಿಕೊಂಡರೆ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡಂತೆ. ಪ್ರತಿ ಮನೆಗಳಲ್ಲಿ ಸಂವಿಧಾನ ಪುಸ್ತಕ ಇರಬೇಕು. ಮೂಲ ಸಂವಿಧಾನದ ಆಶಯಗಳನ್ನು ನಾವು ಬದುಕಬೇಕು ಎಂದರು.
ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮಾತನಾಡಿ, ‘ವೈವಿಧ್ಯಮಯವಾದ ದೇಶದಲ್ಲಿ ಶಾಂತಿ, ಸಾಮರಸ್ಯ, ಸಹಬಾಳ್ವೆ, ಭ್ರಾತೃತ್ವ, ಘನತೆಯಿಂದ ಬದುಕಲು ಅನುವು ಮಾಡಿಕೊಟ್ಟಿರುವ ಸಂವಿಧಾನವನ್ನು ಅಂಬೇಡ್ಕರ್‌ರವರು ನಮಗೆ ನೀಡಿದ್ದಾರೆ. ನಾವೆಲ್ಲರೂ ಒಂದೇ ಎಂದು ಸಾರಿದ್ದಾರೆ. ಎಲ್ಲರಿಗೂ ಒಂದೇ ಕಾನೂನು ನೀಡಿ ಪ್ರಪಂಚದ ಅತ್ಯಂತ ದೊಡ್ಡ ಮತ್ತು ಸಂಪೂರ್ಣವಾದ ಸಂವಿಧಾನ ನೀಡಿದ, ಇಡೀ ಜಗತ್ತೇ ನಿಬ್ಬೆರಗಾಗಿ ನೋಡಿದ ದಿನ ಇದಾಗಿದೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಬೋಧಿಸಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಹೇಮಂತ್ ಎನ್, ಡಿವೈಎಸ್‌ಪಿ ಬಾಬು ಅಂಜಿನಪ್ಪ, ಶಿವಮೊಗ್ಗ ಎಸಿ ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಿ.ಮಲ್ಲೇಶಪ್ಪ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್ ಹಾಜರಿದ್ದರು.
ಸಂವಿಧಾನವೇ ಧರ್ಮ ಗ್ರಂಥ; ಮೇಟಿ ಮಲ್ಲಿಕಾರ್ಜುನ
ಶಿವಮೊಗ್ಗ: ‘ಸಂವಿಧಾನವೇ ನಮ್ಮ ಧರ್ಮ ಗ್ರಂಥ ಅದುವೇ ಮಹಾಕಾವ್ಯ’ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ಮೇಟಿ ಮಲ್ಲಿಕಾರ್ಜುನ ಹೇಳಿದರು. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಂವಿಧಾನ ದಿನ ಆಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ‘ಸಂವಿಧಾನ ಎಂಬುದು ಮಂತ್ರದಂಡವಲ್ಲ ಅದು ನಮ್ಮನ್ನು ದಂಡಿಸಲು ಇಲ್ಲ ಬದಲು ರಕ್ಷಿಸಲು ಇದೆ. ಸಂವಿಧಾನವೇ ನಮ್ಮನ್ನು ಸದಾ ಕಾಪಾಡುತ್ತದೆ. ಅದು ನಮ್ಮನ್ನು ನಿಯಂತ್ರಿಸುವುದಿಲ್ಲ ನಿರ್ವಹಿಸುತ್ತದೆ. ಬದುಕಿನ ದಾರಿ ತೋರಿಸುತ್ತದೆ’ ಎಂದರು. ಧರ್ಮಗಳು ಪ್ರತ್ಯೇಕತೆಯನ್ನು ಸೂಚಿಸಿದರೆ ಸಂವಿಧಾನ ಅವೆಲ್ಲವನ್ನು ಒಗ್ಗೂಡಿಸುತ್ತದೆ. ಹಾಗಾಗಿ ಸಂವಿಧಾನ ಎನ್ನುವುದು ಶಿಕ್ಷೆಯ ಗ್ರಂಥವಲ್ಲ ಶಿಕ್ಷಣ ಗ್ರಂಥ ಅದು ಭಗವದ್ಗೀತೆ ಅಲ್ಲ ಕುರಾನ್ ಅಲ್ಲ ಬೈಬಲ್ ಅಲ್ಲ. ಆದರೆ ಅವೆಲ್ಲವನ್ನು ರಕ್ಷಿಸುವ ಗ್ರಂಥವಾಗಿದೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷ ಸೈಯದ್ ಅಫ್ರಿದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಹಿಳಾ ಕಾಂಗ್ರೆಸ್ಸಿನ ಶ್ವೇತಾಬಂಡಿ ಕಾರ್ಯಕ್ರಮದಲ್ಲಿ ಪ್ರಮುಖರಾದ ಸಿ.ಎಸ್. ಚಂದ್ರಭೂಪಲ್ ಎನ್. ರಮೇಶ್ ಎಸ್.ಟಿ. ಹಾಲಪ್ಪ ಜಿ.ಡಿ. ಮಂಜುನಾಥ್ ರಮೇಶ್ ಶಂಕರಘಟ್ಟ ಕಲೀಂ ಪಾಷಾ ಶಿವಕುಮಾರ್ ಯು. ಶಿವಾನಂದ್ ಕಲಗೋಡು ರತ್ನಾಕರ್ ಮಂಜುನಾಥ ಬಾಬು ಸ್ಟೆಲ್ಲಾ ಮಾರ್ಟಿನ್ ಹಲವರಿದ್ದರು.
ಬಿಜೆಪಿಯಿಂದ ಸಂವಿಧಾನ ಅಂಬೇಡ್ಕರ್ ಸ್ಮರಣೆ
ಶಿವಮೊಗ್ಗ: ಬಿಜೆಪಿ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಜಾಗೃತಿ ಸಪ್ತಾಹ ಮತ್ತು ಭೀಮ ಸ್ಮರಣೆ ಅಭಿಯಾನ ಕಾರ್ಯಕ್ರಮ ಮಂಗಳವಾರ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ಎಸ್.ಸಿ. ಮೋರ್ಚಾದ ಕಾರ್ಯದರ್ಶಿ ಸೀತಾರಾಮ ಭರಣಿ ಉದ್ಘಾಟಿಸಿ ದೇಶದ ಸಂವಿಧಾನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಅವರ ಸ್ಮರಣೆಯನ್ನು ನೆನಪು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ ‘ಅಂಬೇಡ್ಕರ್ ಅವರ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಯ ಜೀವನಕ್ಕೆ ಬೇಕಾದ ದೊಡ್ಡ ಸಂಗತಿಯಾಗಿದೆ. ಅಂಬೇಡ್ಕರ್ ಜೀವನಕ್ಕೂ ಸಂವಿಧಾನದಲ್ಲಿರುವ ಅಂಶಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ದೇಶದ ಪ್ರತಿಯೊಬ್ಬ ನಾಗರರಿಕನ ರೀತಿ- ರಿವಾಜುಗಳನ್ನು ಗಮನದಲ್ಲಿಟ್ಟುಕೊಂಡು ಸಂವಿಧಾನ ರಚನೆಯಾಗಿದೆ’ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಆರ್.ಕೆ. ಸಿದ್ದರಾಮಣ್ಣ ಕೆ.ಜಿ. ಕುಮಾರಸ್ವಾಮಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಎನ್. ಸುಧಾಕರ್ ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ರಾಮು ಕೋಹಳ್ಳಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹರೀಶ ನಾಯಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್ ಮಾಲತೇಶ್ ಸಿ.ಎಚ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.