
ಹೊಳೆಹೊನ್ನೂರು: ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಒದಗಿಸುವ ಉದ್ದೇಶದಿಂದ ಪಟ್ಟಣದ ಗಾಂಧಿ ವೃತ್ತದಲ್ಲಿ ಇಂದಿರಾ ಕ್ಯಾಂಟೀನ್‌ಗಾಗಿ ಕಟ್ಟಡ ನಿರ್ಮಿಸಲಾಗಿದೆ. ಆದರೆ ಕ್ಯಾಂಟೀನ್ ಉದ್ಘಾಟನೆಯಾಗದ ಕಾರಣ ಕಾರ್ಯಾರಂಭ ಮಾಡಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಅದರ ಪ್ರಯೋಜನ ತಟ್ಟುತ್ತಿಲ್ಲ.
ಬಡ ಕೂಲಿ ಕಾರ್ಮಿಕರು, ಬಡ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಹೋಬಳಿ ಮಟ್ಟಕ್ಕೂ ಯೋಜನೆಯನ್ನು ವಿಸ್ತರಿಸಿತ್ತು. ಇದರಂತೆ ಪಟ್ಟಣದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಪಟ್ಟಣ ಪಂಚಾಯಿತಿಯಿಂದ ಈ ಕಟ್ಟಡಕ್ಕೆ ನೀರಿನ ಸೌಲಭ್ಯ ಹಾಗೂ ಕಾಂಪೌಂಡ್ ನಿರ್ಮಾಣಕ್ಕೆ ₹ 3 ಲಕ್ಷ ವ್ಯಯಿಸಲಾಗಿದೆ. ಆದರೆ, ಅದು ಆರಂಭವಾಗದೇ ಜನರ ಬಳಕೆಗೆ ಸಿಗುತ್ತಿಲ್ಲ ಎಂದು ಸ್ಥಳೀಯರಾದ ಶ್ರೀನಿವಾಸ್ ಎಂ. ದೂರಿದ್ದಾರೆ.
ಇಲ್ಲಿ ಹೆಚ್ಚಿನ ಜನಸಂದಣಿ ಇಲ್ಲದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಟ್ಟಡ ನಿರ್ಮಿಸಿರುವುದಕ್ಕೆ ಅಪಸ್ವರ ಕೇಳಿಬರುತ್ತಿದೆ. ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿರುವ ನೃಪತುಂಗ ವೃತ್ತದಲ್ಲಿ ನಿರ್ಮಿಸಬಹುದಿತ್ತು. ಗ್ರಾಮೀಣರು ಬಂದು ಹೋಗುವ ಸಂತೆ ಮಾರುಕಟ್ಟೆ ಇರುವ ಭಗೀರಥ ವೃತ್ತ ಅಥವಾ ಜನದಟ್ಟಣೆ ಹೆಚ್ಚಿರುವ ಬೈಪಾಸ್ ಬಳಿ ಕ್ಯಾಂಟೀನ್ ನಿರ್ಮಿಸಬೇಕಿತ್ತು. ಹೀಗೆ ಮಾಡಿದ್ದರೆ ಬಡವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿತ್ತು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಪಟ್ಟಣದಲ್ಲಿ ಕೂಲಿ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿದ್ದಾರೆ. ಬೆಳಿಗ್ಗೆ ಜಮೀನಿನ ಕೆಲಸಕ್ಕೆ ಹೋಗುವವರು ಹೋಟೆಲ್‌ಗಳಲ್ಲಿ ಹೆಚ್ಚಿನ ದರ ನೀಡಿ ಉಪಾಹಾರ ಮಾಡುವಷ್ಟು ಶಕ್ತರಿರುವುದಿಲ್ಲ. ಇಂದಿರಾ ಕ್ಯಾಂಟೀನ್ ಪ್ರಾರಂಭವಾದರೆ ಕಡಿಮೆ ಬೆಲೆಯಲ್ಲಿ ತಿಂಡಿ ಹಾಗೂ ಊಟ ದೊರೆಯುವುದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಸ್ಥಳೀಯರಾದ ಆರ್. ಮಾಲತೇಶ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯ ಸರ್ಕಾರ ಬಡವರಿಗಾಗಿ ಜಾರಿಗೊಳಿಸಿದ ಯೋಜನೆಯೊಂದು ಮೂರ್ನಾಲ್ಕು ತಿಂಗಳಿಂದ ನನೆಗುದಿಗೆ ಬಿದ್ದಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂಬುದು ಸಾರ್ವಜನಿಕರ ಕೋರಿಕೆಯಾಗಿದೆ.
ಸರ್ಕಾರ ಬಡವರಿಗೆ ಅನುಕೂಲವಾಗಲೆಂದು ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದಿದೆ. ಆದರೆ ಪಟ್ಟಣದಲ್ಲಿ ಕಟ್ಟಡ ನಿರ್ಮಾಣವಾಗಿ ನಾಲ್ಕೈದು ತಿಂಗಳು ಕಳೆದರೂ ಪ್ರಯೋಜವಾಗುತ್ತಿಲ್ಲಎ.ಕೆ. ರಮೇಶ್ ಸ್ಥಳೀಯ
ಕಾಮಗಾರಿ ಮುಕ್ತಾಯವಾಗಿದೆ. ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಉದ್ಘಾಟನೆ ದಿನಾಂಕ ನಿಗದಿ ಮಾಡಲಾಗುವುದು. ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು ಅವರ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗುವುದುಮಂಜುನಾಥ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಹೊಳೆಹೊನ್ನೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.