
ಶಿವಮೊಗ್ಗ: ಶಿವಮೊಗ್ಗ ಹೊರವಲಯ ಹಾಗೂ ತಾಲ್ಲೂಕುಗಳಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ನೀರು, ವಿದ್ಯುತ್, ರಸ್ತೆ, ಬೀದಿದೀಪ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ಕ್ರಮಗಳ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕೈಗಾರಿಕಾ ಸ್ಪಂದನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈಗಾರಿಕೋದ್ಯಮಿಗಳ ಸಮಸ್ಯೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ಶೀಘ್ರದಲ್ಲಿ ದಿನಾಂಕ ನಿಗದಿಗೊಳಿಸಿ, ಸಭೆ ಆಯೋಜಿಸಲಾಗುವುದು ಎಂದರು.
ಕೈಗಾರಿಕಾ ವಸಾಹತು ಪ್ರದೇಶಗಳಲ್ಲಿ ಶೌಚಾಲಯ, ಸ್ವಚ್ಛತೆ, ನೀರು ಸರಬರಾಜು ಮತ್ತಿತರ ಅಗತ್ಯ ವಿಷಯಗಳಿಗಾಗಿ ಮಹಾನಗರಪಾಲಿಕೆ ಆಯುಕ್ತರು ಕ್ರಮ ಕೈಗೊಳ್ಳಲಿ ಎಂದರು. ಮಂಡ್ಲಿ ಕೈಗಾರಿಕಾ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಪಾಲಿಕೆಯಿಂದ ಈ ಹಿಂದೆ ನಡೆಸಿದ್ದ ಇ-ಖಾತಾ ಅಭಿಯಾನವನ್ನು ಮತ್ತೊಮ್ಮೆ ಆಯೋಜಿಸುವಂತೆಯೂ ಸೂಚಿಸಿದರು.
ಸೋಗಾನೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲು ಹಾಗೂ ಅತಿಕ್ರಮಣ ತೆರವುಗೊಳಿಸಲು ಅಗತ್ಯ ಸಹಕಾರ ನೀಡುವಂತೆ ಹಾಗೂ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ತ್ವರಿತವಾಗಿ ಸಭೆ ನಡೆಸಿ, ಕೈಗೊಂಡ ನಿರ್ಣಯದ ವರದಿ ಕೂಡಲೇ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಾಗರ ರಸ್ತೆಯಲ್ಲಿರುವ ಕೆ.ಎಸ್.ಎಸ್.ಐ.ಡಿ.ಸಿ ಕೈಗಾರಿಕಾ ವಸಾಹತುವಿನಲ್ಲಿ ಜನದಟ್ಟಣೆ ದಿನೇದಿನೇ ಹೆಚ್ಚುತ್ತಿದೆ. ಅಲ್ಲದೇ ವಾಹನಗಳ ದಟ್ಟಣೆ ಹೆಚ್ಚಿ ಸಂಚಾರಕ್ಕೆ ತೀವ್ರ ಅಡಚಣೆ ಆಗುತ್ತಿದೆ. ಅದನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸರಿಪಡಿಸಲಾಗುವುದು ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಶಿಲ್ಪಾ ಮಾತನಾಡಿ, ಫೌಂಡ್ರಿಗಳಿಂದ ಉತ್ಪತ್ತಿ ಆಗುವ ಮರಳಿನ ತ್ಯಾಜ್ಯವನ್ನು ಜಲಮೂಲಗಳಲ್ಲಿ ಎಸೆಯುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಆಗುತ್ತಿದೆ. ಅದನ್ನು ಪುನರ್‌ಬಳಕೆ ಮಾಡಿಕೊಳ್ಳಬಹುದಾಗಿದೆ. ಇಲ್ಲವೇ ಇಟ್ಟಿಗೆ ತಯಾರಿಕೆಯಲ್ಲಿ, ರಸ್ತೆ ನಿರ್ಮಾಣದ ಮಿಶ್ರಣಗಳಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಸುರೇಶ್, ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಮಲ್ಲಿಕಾರ್ಜುನ, ರಾಮಾಚಾರ್, ವಿಶ್ವೇಶ್ವರಯ್ಯ, ಬೆನಕಪ್ಪ ಉಪಸ್ಥಿತರಿದ್ದರು.
ಮಂಡ್ಲಿ-ಕಲ್ಲೂರು ಮತ್ತು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ. ಅದಕ್ಕೆ ಭೂಮಿ ಲಭ್ಯವಿದ್ದು ಅಲ್ಲಿ ವಿದ್ಯುತ್ ಪ್ರಸರಣ ಉಪಕೇಂದ್ರ ಜೊತೆಗೆ ಇ.ಎಸ್.ಐ ಚಿಕಿತ್ಸಾಲಯ ತೆರೆಯಲಿಗೋಪಿನಾಥ್ ಕೈಗಾರಿಕೋದ್ಯಮಿ ಶಿವಮೊಗ್ಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.