ADVERTISEMENT

ಅಂಗವಿಕಲರಿಗೆ ಒಂದು ವಾರದೊಳಗೆ ಕೋವಿಡ್19 ಲಸಿಕೆ ನೀಡಲು ಸೂಚನೆ

ಶಿವಮೊಗ್ಗ ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2021, 11:30 IST
Last Updated 7 ಜೂನ್ 2021, 11:30 IST
ಅಂಗವಿಕಲಳಿಗೆ ಲಸಿಕೆ ವಿತರಣೆ, ಸಾಂದರ್ಭಿಕ ಚಿತ್ರ
ಅಂಗವಿಕಲಳಿಗೆ ಲಸಿಕೆ ವಿತರಣೆ, ಸಾಂದರ್ಭಿಕ ಚಿತ್ರ   

ಶಿವಮೊಗ್ಗ: ಜಿಲ್ಲೆಯ ಎಲ್ಲಾ ಅಂಗವಿಕಲರಿಗೂ ಒಂದು ವಾರದ ಒಳಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಆದ್ಯತಾ ವಲಯದ ಲಸಿಕೆ ಕಾರ್ಯಕ್ರಮದ ಪ್ರಗತಿ ಪರಿಶೀಲನೆ ನಡೆಸಿದರು.

ಸರ್ಕಾರ ಈಗಾಗಲೇ ಗುರುತಿಸಿರುವ 23 ಆದ್ಯತಾ ವಲಯಗಳ ಫಲಾನುಭವಿಗಳಿಗೆ ನಿಗದಿತ ಅವಧಿಯ ಒಳಗಾಗಿ ಕೋವಿಡ್ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸಬೇಕು. ಬೀದಿಬದಿ ವ್ಯಾಪಾರಿಗಳಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಬೇಕು. ಇದೇ ರೀತಿ ಪರವಾನಗಿ ಪಡೆದಿರುವ ರಿಕ್ಷಾ ಮತ್ತು ಕ್ಯಾಬ್ ಚಾಲಕರು, ಕಟ್ಟಡ ಕಾರ್ಮಿಕರು, ಪೆಟ್ರೋಲ್ ಬಂಕ್ ಮತ್ತು ಗ್ಯಾಸ್ ಏಜೆನ್ಸಿ ಸಿಬ್ಬಂದಿ, ಕೈಗಾರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸೇರಿದಂತೆ ಆದ್ಯತಾ ವಲಯದ ಎಲ್ಲರಿಗೂ ಲಸಿಕೆ ಹಾಕಲು ಕ್ರಮ ಕೈಗೊಳ್ಳಬೇಕು. ಕಟ್ಟಡ ಕಾರ್ಮಿಕರನ್ನು ವಾರ್ಡ್‍ವಾರು ಗುರುತಿಸಿ, ಸ್ಥಳೀಯವಾಗಿ ಲಸಿಕಾ ಶಿಬಿರ ಆಯೋಜಿಸಬೇಕು. ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಮೊದಲು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಬೇಕು. ನಂತರ ಲಸಿಕೆ ಅಭಿಯಾನದ ನೋಡಲ್ ಅಧಿಕಾರಿಗೆ ನೀಡಬೇಕು. ಕನಿಷ್ಠ 150 ಫಲಾನುಭವಿಗಳ ಪಟ್ ಸಿದ್ಧಪಡಿಸಿದರೆ ನಿಗದಿತ ಸ್ಥಳದಲ್ಲೇ ಲಸಿಕಾ ಶಿಬಿರ ಆಯೋಜಿಸಲಾಗುವುದು. ಫಲಾನುಭವಿಗಳಲ್ಲದವರಿಗೆ ಲಸಿಕೆ ನೀಡಲು ಪ್ರಮಾಣೀಕರಿಸಿದರೆ ಅಂತಹ ನೋಡಲ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ತಜ್ಞರ ಸಮಿತಿ ಸಭೆ: ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳಿಗೆ ಕೊರೊನಾ ಹರಡುವುದನ್ನು ಎದುರಿಸಲು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಜ್ಞರ ಜತೆ ಸಮಾಲೋಚನೆ ನಡೆಸಿದರು.

ಮಕ್ಕಳ ಕರೋನಾ ನಿರ್ವಹಣೆಗೆ ಅನುಕೂಲವಾಗುವಂತೆ ಗ್ರಾಮೀಣ ಮಟ್ಟದ ಆರೋಗ್ಯ ಕಾರ್ಯಕರ್ತರು, ಶುಶ್ರೂಷಕರು, ವೈದ್ಯರು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಸಿದ್ಧಪಡಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಕೊರೊನಾ ನಿರ್ವಹಣೆಗೆ ಅಗತ್ಯವಿರುವ ಯಂತ್ರೋಪಕರಣಗಳು, ಪ್ರಯೋಗ ಸಾಮಾಗ್ರಿಗಳು, ಔಷಧಗಳ ಪಟ್ಟಿ ಸಲ್ಲಿಸಬೇಕು. ಈಗಾಗಲೇ ಆರೋಗ್ಯ ಸಮಸ್ಯೆ ಇರುವ ಮಕ್ಕಳ ತಾಲ್ಲೂಕುವಾರು ಮಾಹಿತಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ, ಡಾ.ನಾಗರಾಜ ನಾಯಕ್, ಡಾ.ಧನಂಜಯ ಸರ್ಜಿ, ಡಾ.ಎಚ್.ಆರ್.ಪಾಟೀಲ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.