ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು...
ಭದ್ರಾವತಿ: ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಿರುವ ಕಮಾನು ಸೇತುವೆಗೆ ‘ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ’ ಹೆಸರು ನಾಮಕರಣಗೊಳಿಸಿದ್ದು, ವಿಶ್ವಕರ್ಮ ಸಮಾಜದವರಲ್ಲಿ ಸಂತಸ ಮನೆ ಮಾಡಿದೆ.
ಬುಧವಾರ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಸೇತುವೆ ಕಮಾನುಗಳ ಮೇಲೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು.
ಕಳೆದ ಒಂದು ವರ್ಷದ ಹಿಂದೆ ಅಮರಶಿಲ್ಪಿ ಜಕಣಾಚಾರಿ ಜನ್ಮದಿನದಂದು ಸೇತುವೆಗೆ ಅವರ ಹೆಸರನ್ನು ನಾಮಕರಣಗೊಳಿಸುವಂತೆ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು.
ನಗರಸಭೆ ಸಾಮಾನ್ಯಸಭೆಯಲ್ಲಿ ಈ ಸಂಬಂಧ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗೆ ಸದಸ್ಯರು ಪಕ್ಷಬೇಧ ಮರೆತು ಒಮ್ಮತ ಸೂಚಿಸಿ ಸರ್ಕಾರಕ್ಕೆ ನಿರ್ಣಯ ಕಳುಹಿಸಲಾಗಿತ್ತು. ಸರ್ಕಾರ ಅನುಮೋದನೆ ನೀಡಿದ್ದು, ಈ ಹಿನ್ನಲೆಯಲ್ಲಿ ಕಳೆದ 3 ದಿನಗಳ ಹಿಂದೆ ಸೇತುವೆ ಎರಡು ಬದಿ ಕಮಾನುಗಳ ಮೇಲೆ ಬೃಹತ್ ನಾಮಫಲಕ ಜೆಸಿಬಿ ಯಂತ್ರ ಬಳಸಿ ಅಳವಡಿಸಲಾಗಿತ್ತು. ನಗರಸಭೆ ಅಭಿಯಂತರ ಪ್ರಸಾದ್, ಕಲಾವಿದ ಭದ್ರಾವತಿ ಗುರು, ರಾಮಕೃಷ್ಣ, ಗೋವರ್ಧನರಾವ್, ತಿಪ್ಪೇಸ್ವಾಮಿ, ಶಿವರುದ್ರಪ್ಪ ಸೇರಿದಂತೆ ಇನ್ನಿತರರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
2018ರಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ. ಎಚ್.ಸಿ ಮಹಾದೇವಪ್ಪ 2018ರಲ್ಲಿ ಸೇತುವೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ಅಂದಾಜು 21.34 ಕೋ. ರು. ವೆಚ್ಚದಲ್ಲಿ 240.5 ಮೀಟರ್ ಉದ್ದದ ಸೇತುವೆ ನಿರ್ಮಿಸಲಾಗಿದೆ. ಮೆ/ಎಸ್‌ಪಿಎಲ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್, ಚೆನ್ನೈ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ನಿರ್ವಹಣಾ ಸಲಹೆಗಾರರಾಗಿ ಮೆ/ ಸತ್ರ ಇನ್ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಇವರನ್ನು ನೇಮಕಗೊಳಿಸಲಾಗಿದೆ. 5 ವರ್ಷಗಳವರೆಗೆ ಸೇತುವೆ ನಿರ್ವಹಣಾ ಜವಾಬ್ದಾರಿಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ.
155 ವರ್ಷಗಳ `ಭದ್ರಾ ಸೇತುವೆ'(ಹಳೇ ಸೇತುವೆ) : 155 ವರ್ಷಗಳ ಹಿಂದೆ ಮೈಸೂರು ರಾಜ್ಯದ ಪಿಡಬ್ಲ್ಯೂಡಿ ಇಲಾಖೆಯ ಮುಖ್ಯ ಆಯುಕ್ತರಾಗಿದ್ದ ಬ್ರಿಟಿಷ್ ಅಧಿಕಾರಿ ಕಬ್ಬನ್ ಅಂದಿನ ಬೆಂಕಿಪುರ(ಭದ್ರಾವತಿ)ದಲ್ಲಿ 74,997 ರು. ವೆಚ್ಚದಲ್ಲಿ ಭದ್ರಾ ಸೇತುವೆ ನಿರ್ಮಿಸಿದ್ದರು. ಈ ಸೇತುವೆ ಇಂದಿಗೂ ಬಲಿಷ್ಠವಾಗಿದ್ದು, ನಗರದಲ್ಲಿ ವಾಹನ ದಟ್ಟಣೆ ಅಧಿಕಗೊಂಡ ಹಿನ್ನಲೆಯಲ್ಲಿ ಕಳೆದ ಸುಮಾರು ೨ ದಶಕಗಳಿಂದ ಸೇತುವೆ ಸುರಕ್ಷತೆಗೆ ಒತ್ತಾಯಿಸಿಕೊಂಡು ಬಂದ ಹಿನ್ನಲೆಯಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರ ಅನುಮೋದನೆ ನೀಡಿತ್ತು.
ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ನಾಮಫಲಕ ಅನಾವರಣ :
ಅಮರಶಿಲ್ಪಿ ಜಕಣಾಚಾರಿಯವರ ಹೆಸರನ್ನು ನೂತನ ಸೇತುವೆಗೆ ನಾಮಕರಣಗೊಳಿಸುತ್ತಿರುವುದು ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ.
ಈ ನಡುವೆ ಸಮಾಜ ಬಾಂಧವರು ವಿಶ್ವಕರ್ಮ ಜಯಂತಿ ದಿನದಂದು ನೂತನ ಕಮಾನು ಸೇತುವೆಗೆ ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲು ಶ್ರಮಿಸಿರುವ ಕರ್ನಾಟಕ ರಾಜ್ಯ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ಹಾಗು ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.
ಈ ನಡುವೆ ಮಧ್ಯಾಹ್ನ 1.40ರ ಸಮಯದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಸೇತುವೆಗೆ ಅಳವಡಿಸಲಾಗಿರುವ ನಾಮಫಲಕ ಅನಾವರಣಗೊಳಿಸಿದರು. ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಪೌರಾಯುಕ್ತ ಎನ್.ಕೆ ಹೇಮಂತ್, ಸದಸ್ಯರಾದ ವಿ. ಕದಿರೇಶ್, ಬಿ.ಎಂ ಮಂಜುನಾಥ, ಸುದೀಪ್‌ಕುಮಾರ್, ಅನುಪಮ ಚನ್ನೇಶ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಬಿ.ಎಸ್ ಗೋಪಾಲ್, ಸರ್ಕಾರ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ಅಭಿಯಂತರ ಬಿ.ಬಿ ಶಿವಪ್ರಸಾದ್, ಲೆಕ್ಕಾಧಿಕಾರಿ ಎಲ್.ಎಸ್ ಗಿರಿರಾಜ್, ಎಸ್. ಪವನ್ ಕುಮಾರ್, ಮಹಮದ್ ಗೌಸ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್, ಗೌರವಾಧ್ಯಕ್ಷರಾದ ಬಿ.ಎಲ್ ನಾಗರಾಜ್, ಪಿ. ವೆಂಕಟರಮಣ ಶೇಟ್, ಕಾರ್ಯಾಧ್ಯಕ್ಷ ಸಿ. ರಾಮಾಚಾರಿ, ದಿನಪತ್ರಿಕೆ ವಿತರಕ, ಸಮಾಜದ ಮುಖಂಡ ಕೃಷ್ಣಮೂರ್ತಿ ಸೇರಿದಂತೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.
ನಗರದ ಹೃದಯ ಭಾಗದಲ್ಲಿ ಭದ್ರಾ ನದಿಗೆ ಬಿ.ಎಚ್ ರಸ್ತೆ (ಡಾ. ರಾಜಕುಮಾರ್ ರಸ್ತೆ)ಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕಮಾನು ಸೇತುವೆಗೆ `ಶ್ರಿ ವಿಶ್ವಕರ್ಮಶಿಲ್ಪಿ ಅಮರಶಿಲ್ಪಿ ಜಕಣಾಚಾರಿ ಸೇತುವೆ' ಹೆಸರು ನಾಮಕರಣಗೊಳಿಸಲಾಗಿದ್ದು, ವಿಶ್ವಕರ್ಮ ಸಮಾಜ ಬಾಂಧವರಲ್ಲಿ ಸಂತಸ ಮನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.