ಕಾರ್ಗಲ್: ಜೋಗದ ಮುಖ್ಯ ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿರುವ ಜೋಗ ನಿರ್ವಹಣಾ ಪ್ರಾಧಿಕಾರ ಪ್ರವಾಸೋದ್ಯಮ ಇಲಾಖೆಯ ಮಯೂರ ಹೋಟೆಲ್‌ನಲ್ಲಿ ಆನ್‌ಲೈನ್ ಬುಕ್ಕಿಂಗ್ ಮಾಡಿದವರಿಗೆ ಪ್ರಧಾನ ದ್ವಾರದಲ್ಲಿ ಪ್ರವೇಶ ನೀಡುವ ಮೂಲಕ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಜೋಗ–ಕಾರ್ಗಲ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಲ್. ರಾಜಕುಮಾರ್ ದೂರಿದ್ದಾರೆ.
‘ಜೋಗ ಜಲಪಾತ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರ ಜ.1ರಿಂದ ಮಾರ್ಚ್ 15ರವರೆಗೆ ಜಲಪಾತ ವೀಕ್ಷಣೆಗೆ ಪ್ರಧಾನ ಪ್ರವೇಶ ದ್ವಾರದಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಆದರೆ ಜೋಗ ಜಲಪಾತದ ಮೈಸೂರು ಬಂಗಲೆ ಪ್ರದೇಶದ ಒಳಭಾಗದಲ್ಲಿರುವ ಮಯೂರ ಹೋಟೆಲ್ ಮೂಲಕ ಬುಕ್ಕಿಂಗ್ ಮಾಡಿಕೊಂಡವರಿಗೆ ಮಾತ್ರ ವಾಹನ ಸಮೇತ ಪ್ರವೇಶ ನೀಡುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಮಯೂರ ಹೋಟೆಲ್‌ನಲ್ಲಿ ನಿರಂತರವಾಗಿ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಪ್ರವಾಸೋದ್ಯಮ ಇಲಾಖೆಯ ವಾಹನಗಳಲ್ಲಿ ಬರುವ ಪ್ರವಾಸಿಗರಿಗೆ ಪ್ರಧಾನ ದ್ವಾರದಲ್ಲೇ ಪ್ರವೇಶ ನೀಡುವ ಜತೆಗೆ ಊಟದ ವ್ಯವಸ್ಥೆಯನ್ನೂ ಮಾಡಿಕೊಡಲಾಗುತ್ತಿದೆ. ಆದರೆ ಪ್ರತಿದಿನ ಜೋಗ ವೀಕ್ಷಣೆಗೆ ಬರುವ ಸಾವಿರಾರು ಪ್ರವಾಸಿಗರಿಗೆ ಪ್ರಧಾನ ದ್ವಾರದಲ್ಲಿ ಪ್ರವೇಶ ನೀಡುತ್ತಿಲ್ಲ. ಇದು ಖಂಡನೀಯ’ ಎಂದು ಹೇಳಿದ್ದಾರೆ.
‘ಪ್ರಧಾನ ದ್ವಾರದಲ್ಲಿ ಸ್ಥಳೀಯರಿಗೂ ಪ್ರವೇಶ ನೀಡುತ್ತಿಲ್ಲ. ಭದ್ರತಾ ಸಿಬ್ಬಂದಿ ಸ್ಥಳೀಯರನ್ನು ಅವಮಾನಿಸುತ್ತಿದ್ದಾರೆ. ಪ್ರಾಧಿಕಾರದ ಈ ತಾರತಮ್ಯ ನೀತಿ ಮುಂದುವರಿದರೆ ಪ್ರತಿಭಟನೆ ನಡೆಸಲಾಗುವುದು’ ಎಂದು ಛಾಯಾಗ್ರಾಹಕ ಎನ್. ನಾಗರಾಜ್ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.