ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತ ತಾಣದಲ್ಲಿ ನಿರ್ವಹಣಾ ಪ್ರಾಧಿಕಾರದ ನೂತನ ಮಹಾದ್ವಾರ ಅತ್ಯಾಕರ್ಷಕವಾಗಿ ರೂಪುಗೊಳ್ಳುತ್ತಿದ್ದು, ಪ್ರವಾಸಿಗರ ಕುತೂಹಲವನ್ನು ಹೆಚ್ಚಿಸುತ್ತಿದೆ.
ಈ ಮಹಾದ್ವಾರ ನಿರ್ಮಾಣ ಕಾರ್ಯಕ್ಕಾಗಿ ಜನವರಿ 1 ರಿಂದ ಏಪ್ರಿಲ್ 30 ರವರೆಗೆ ಪ್ರವಾಸಿಗರಿಗೆ ಮೈಸೂರು ಬಂಗಲೆ ಪ್ರದೇಶಕ್ಕೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಪ್ರವಾಸಿಗರ ಸುರಕ್ಷತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿಷೇಧ ವಿಧಿಸಲಾಗಿತ್ತು. ನಿಷೇಧ ಹೇರಿದ್ದ ಅವಧಿಯಲ್ಲಿ ಕಾಮಗಾರಿಯ ವೇಗವೂ ಹೆಚ್ಚಿತ್ತು.
ಸುದೀರ್ಘ 120 ದಿನಗಳ ಅವಧಿಯಲ್ಲಿ ಉದ್ದೇಶಿತ ಪ್ರಧಾನ ದ್ವಾರ ನಿರ್ಮಾಣ ಕಾರ್ಯ ಶೇ 60ರಷ್ಟು ಮಾತ್ರ ಮುಗಿದಿದೆ. ಹೊರ ರಾಜ್ಯಗಳಿಂದ ಆಗಮಿಸಿರುವ ನುರಿತ ಕಾರ್ಮಿಕ ವರ್ಗ ಸಮರೋಪಾದಿಯಲ್ಲಿ ಕೆಲಸಗಳನ್ನು ನಿರ್ವಹಿಸುತ್ತಿದ್ದರೂ, ಉದ್ದೇಶಿತ ಗುರಿಯನ್ನು ನಿಗದಿತ ಅವಧಿಯೊಳಗೆ ತಲುಪಲು ಸಾಧ್ಯವಾಗಿಲ್ಲ.
ಈ ಮಧ್ಯೆ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕೆ.ವಿ. ರಾಜೇಂದ್ರ ಅವರು ಜೋಗ ಜಲಪಾತ ಪ್ರದೇಶದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿದ್ದರು. ಜೋಗ ನಿರ್ವಹಣಾ ಪ್ರಾಧಿಕಾರ, ಕೆಪಿಸಿ ಮತ್ತು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರವಾಸಿಗರಿಗೆ ವಿಧಿಸಿರುವ ನಿಷೇಧವನ್ನು ತೆರವುಗೊಳಿಸಲು ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಮೇ 1 ರಿಂದ ಪ್ರವಾಸಿಗರಿಗೆ ಜೋಗ ಜಲಪಾತ ಪ್ರದೇಶದ ವಿವಿಧ ತಾಣಗಳಿಂದ ಪ್ರಕೃತಿಯ ಸೊಬಗನ್ನು ಸವಿಯಲು ಮುಕ್ತ ಅವಕಾಶ ದೊರಕುತ್ತಿದೆ.
ದೂರದ ಊರುಗಳಿಂದ ಆಗಮಿಸುವ ಪ್ರವಾಸಿಗರಿಗೆ ಜೋಗ ಜಲಪಾತದ ಸಂಪೂರ್ಣ ದರ್ಶನ ದೊರಯದೇ, ನಿಷೇಧದ ಕಾರಣ ನಿರಾಸೆಯಿಂದ ತೆರಳುವಂತಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರಿಗೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮುಕ್ತವಾಗಿ ಜಲಪಾತದ ಸೌಂದರ್ಯ ಸವಿಯಲು ಪೂರಕವಾಗಿ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಮುಖ್ಯಮಂತ್ರಿಗಳನ್ನು ಕರೆಸಿ ಜೋಗದ ಸಮಗ್ರ ಅಭಿವೃದ್ಧಿ ಕಾರ್ಯಗಳನ್ನು ಲೋಕಾರ್ಪಣೆ ಮಾಡಲಾಗುವುದುಗೋಪಾಲ ಕೃಷ್ಣ ಬೇಳೂರು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.