ADVERTISEMENT

ಅವಿಭಕ್ತ ಕುಟುಂಬದ ಮಾದರಿ ಕೃಷಿ: ಈಡೂರು ಗ್ರಾಮದ ಲಕ್ಷ್ಮಣಪ್ಪ ಕುಟುಂಬದ ಯಶೋಗಾಥೆ

ಈಡೂರು ಗ್ರಾಮದ ಲಕ್ಷ್ಮಣಪ್ಪ ಕುಟುಂಬದ ಯಶೋಗಾಥೆ

ರಾಘವೇಂದ್ರ ಟಿ.
Published 9 ನವೆಂಬರ್ 2022, 7:18 IST
Last Updated 9 ನವೆಂಬರ್ 2022, 7:18 IST
ಸೊರಬ ತಾಲ್ಲೂಕಿನ ಈಡೂರು ಗ್ರಾಮದ ಲಕ್ಷ್ಮಣಪ್ಪ ಸಹೋದರರು ಬೆಳೆದಿರುವ ಅಡಿಕೆ ಹಾಗೂ ಅನಾನಸ್ ಬೆಳೆ.
ಸೊರಬ ತಾಲ್ಲೂಕಿನ ಈಡೂರು ಗ್ರಾಮದ ಲಕ್ಷ್ಮಣಪ್ಪ ಸಹೋದರರು ಬೆಳೆದಿರುವ ಅಡಿಕೆ ಹಾಗೂ ಅನಾನಸ್ ಬೆಳೆ.   

ಸೊರಬ: ಒಗ್ಗಟ್ಟಿನ ದುಡಿಮೆ, ಕಠಿಣ ಪರಿಶ್ರಮ, ದೃಢ ನಿರ್ಧಾರ, ಕಾಲಕ್ಕೆ ಅನುಗುಣವಾಗಿ ತಾಂತ್ರಿಕತೆ ಅಳವಡಿಸಿಕೊಂಡರೆ ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು ಎನ್ನುವುದನ್ನು ಈಡೂರು ಗ್ರಾಮದ ಅವಿಭಕ್ತ ಕುಟುಂಬದ ಸದಸ್ಯರು ತೋರಿಸಿಕೊಟ್ಟಿದ್ದಾರೆ.

ಜಾಗತೀಕರಣ ಹಾಗೂ ನಗರೀಕರಣದ ಪ್ರಭಾವದಿಂದ ಇಂದು ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಬದಲಾಗಿವೆ. ಆದರೆ, ತಾಲ್ಲೂಕಿನ ಚಂದ್ರಗುತ್ತಿ ಹೋಬಳಿ ವ್ಯಾಪ್ತಿಯ ಈಡೂರು ಗ್ರಾಮದಲ್ಲಿ ಅವಿಭಕ್ತ ಕುಟುಂಬದ ಸದಸ್ಯರು ಒಟ್ಟಾಗಿ ಜೀವನ ನಡೆಸುವ ಜತೆಗೆ
ಕೃಷಿ ಕಾರ್ಯದಲ್ಲಿ ಒಗ್ಗಟ್ಟಿನಿಂದ ತೊಡಗಿಕೊಂಡಿರುವ ಪರಿಣಾಮ ಆರ್ಥಿಕ ಅಭಿವೃದ್ಧಿ ಕಾಣುತ್ತಿದ್ದಾರೆ.

42 ಜನ ಇರುವ ಕುಟುಂಬದಲ್ಲಿ ಪ್ರತಿಯೊಬ್ಬ ಸದಸ್ಯರ ನಡುವೆ ಪ್ರೀತಿ, ಸಹಬಾಳ್ವೆ ಇದೆ. ಸಹೋದರರಾದ ಹನುಮಂತಪ್ಪ, ಲಕ್ಷ್ಮಣಪ್ಪ, ಶಿವಾನಂದ, ಶೇಖರ, ಕೃಷ್ಣಪ್ಪ, ಪ್ರಭಾಕರ, ಜಗದೀಶ, ದಯಾನಂದ, ಪರಶುರಾಮ ಒಟ್ಟಿಗೆ ಕೃಷಿಯಲ್ಲಿ ತೊಡಗಿದ್ದಾರೆ. ಆ ಮೂಲಕ ಕೂಲಿಕಾರರ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ADVERTISEMENT

‘ಆಧುನಿಕ ಪದ್ಧತಿ ಅಳವಡಿಸಿದ್ದರಿಂದ ನಮ್ಮ ಕುಟುಂಬಕ್ಕೆ ಕೃಷಿ ಸರಳವೂ, ಸುಲಭವೂ, ಲಾಭದಾಯಕವೂ ಆಗಿದೆ’ ಎನ್ನುತ್ತಾರೆ ಲಕ್ಷ್ಮಣಪ್ಪ.

ಒಟ್ಟು 45 ಎಕರೆ ಜಮೀನಿನಲ್ಲಿ 10 ಎಕರೆ ಅಡಿಕೆ, 3 ಎಕರೆ ಶುಂಠಿ, 5 ಎಕರೆ ಪಪ್ಪಾಯ, 5 ಎಕರೆ ಬಾಳೆ, 1 ಎಕರೆ ಶೇಂಗಾ, 5 ಎಕರೆ ಜೋಳ, 5 ಎಕರೆ ಅನಾನಸ್, 1 ಎಕರೆ ತಾಳೆ ಹಾಗೂ ಉಳಿದ 15 ಎಕರೆ ಜಮೀನಿನಲ್ಲಿ ಭತ್ತ ಬೆಳೆಯುತ್ತಾರೆ. ಅಡಿಕೆ, ಶುಂಠಿ, ಬಾಳೆ ಮಧ್ಯೆದಲ್ಲಿ ತರಕಾರಿ, ಮೆಣಸು ಬೆಳೆಯುತ್ತಿದ್ದಾರೆ. ಕುಟುಂಬದ ಮಹಿಳೆಯರು ಬಿಡುವಿನ ಸಮಯದಲ್ಲಿ ತರಕಾರಿ, ವಿವಿಧ ಬಗೆಯ ಸೊಪ್ಪು ಬೆಳೆದು ಕೃಷಿಯಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿದ್ದಾರೆ.

ಅಡಿಕೆ ತೋಟದ ನಡುವೆ ಅನಾನಸ್, ಬಾಳೆ ನೆಟ್ಟು ಅಧಿಕ ಲಾಭ ತೆಗೆಯುವಲ್ಲಿ ಈ ಕುಟುಂಬ ಯಶಸ್ವಿಯಾಗಿದೆ.

ಹಸು, ಎಮ್ಮೆ ಸಾಕಾಣಿಕೆ ಮಾಡಲಾಗಿದ್ದು, ಡೇರಿಗೆ ಹಾಲನ್ನೂ ಹಾಕುತ್ತಾರೆ. ಸಗಣಿ ಗೊಬ್ಬರವನ್ನು ಎಲ್ಲ ಬೆಳೆಗೆ ಬಳಸು
ವುದರಿಂದ ಅಧಿಕ ಇಳುವರಿ ತೆಗೆಯಲು ಸಾಧ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.