ADVERTISEMENT

ಈಶ್ವರಪ್ಪ ಅವರನ್ನು ಗಾಂಜಾ ಪೆಡ್ಲರ್ ಎನ್ನಲು ಸಾಧ್ಯವೇ?: ಪ್ರಸನ್ನಕುಮಾರ್

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 13:52 IST
Last Updated 21 ಅಕ್ಟೋಬರ್ 2021, 13:52 IST
ಕೆ.ಬಿ.ಪ್ರಸನ್ನಕುಮಾರ್
ಕೆ.ಬಿ.ಪ್ರಸನ್ನಕುಮಾರ್   

ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರದಲ್ಲೇ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಹಾಗೆಂದು ಅವರನ್ನು ಗಾಂಜಾ ಪೆಡ್ಲರ್ ಎಂದು ಕರೆಯಲು ಸಾಧ್ಯವೇ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಛೇಡಿಸಿದರು.

ಬಿಜೆಪಿ ಮುಖಂಡರು ಕಾಂಗ್ರೆಸ್ ನಾಯಕರನ್ನು ಡ್ರಗ್ಸ್‌ ಪೆಡ್ಲರ್, ನಿಮ್ಹಾನ್ಸ್‌ಗೆ ಸೇರಿಸಿ ಎಂದು ಟೀಕಿಸುತ್ತಿದ್ದಾರೆ. ನಗರದಲ್ಲಿ ಗಾಂಜಾ ಮಾರಾಟ ಮಟ್ಟ ಹಾಕುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲವಾಗಿದ್ದಾರೆ. ಕಳೆದ ವಿಧಾನ ಸಭೆಯ ಚುನಾವಣೆಯ ನಂತರ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಮಿತಿ ಮೀರಿವೆ. ಇದರ ಬಗ್ಗೆ ಗೊತ್ತಿದ್ದರೂ ಕೂಡ ಈಶ್ವರಪ್ಪ ಅವರು ಯಾವುದೇ ಗಟ್ಟಿ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಸರ್ಕಾರದ ಯಾವುದೆ ಕಚೇರಿಗಳಲ್ಲೂ ಕೆಲಸಗಳು ಆಗುತ್ತಿಲ್ಲ. ಜನರು ದಿನನಿತ್ಯ ಅಲೆಯುತ್ತಿದ್ದಾರೆ. ಸ್ಮಾರ್ಟ್‌ಸಿಟಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಕಾಲಮಿತಿಯಲ್ಲಿ ಮುಗಿಯಬೇಕಾದ ಕೆಲಸಗಳು ವಿಳಂಬವಾಗಿವೆ. ಕಳಪೆ ಕಾಮಗಾರಿ ನಡೆಯುತ್ತಿದೆ. ಜೆನ್‌ನರ್ಮ್ ಯೋಜನೆಯಲ್ಲಿ 35 ನಗರ ಸಾರಿಗೆ ಬಸ್‌ಗಳನ್ನು ತರಲಾಗಿತ್ತು. ಇನ್ನೂ 30 ಬಸ್‌ಗಳನ್ನು ತರುವುದು ಬಾಕಿ ಇದೆ. ಬಂದಿರುವ ಒಂದೂ ಬಸ್‌ ನಗರದಲ್ಲಿ ಸಂಚಾರಿಸುತ್ತಿಲ್ಲ. ಅವು ಯಾವ ಮಾರ್ಗದಲ್ಲಿ ಓಡಾಡುತ್ತಿವೆ ಗೊತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಆರ್‌ಟಿಒ ಕಚೇರಿಯಲ್ಲಿ ಸಿಬ್ಬಂದಿ ಇಲ್ಲ. ಇರುವ ಸಿಬ್ಬಂದಿ ಮೂರು ಜಿಲ್ಲೆಗಳನ್ನು ನೋಡಿಕೊಳ್ಳುವ ಸ್ಥಿತಿ ಇದೆ. ತಾಲ್ಲೂಕು ಕಚೇರಿಯಲ್ಲೂ ಯಾವುದೆ ಕೆಲಸಗಳು ಆಗುತ್ತಿಲ್ಲ. ಇದೆಲ್ಲ ಸರಿಪಡಿಸಬೇಕಾದ ಸಚಿವರು ಕೇವಲ ರಾಜಕೀಯ ಪ್ರೇರಿತ ಟೀಕೆ ಮಾಡುವುದರಲ್ಲ್ಲೇ ನಿರತರಾಗಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಬೊಮ್ಮನಕಟ್ಟೆ ಮಂಜುನಾಥ್‌, ಎನ್.ಕೆ.ಶಾಮಸುಂದರ್, ಆರ್.ಕೆ.ಉಮೇಶ್, ದೀಪಕ್ ಸಿಂಗ್, ಶಾಮೀರ್ ಖಾನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.