ADVERTISEMENT

ಕೆ.ಜಿ. ಹಳ್ಳಿ ಪ್ರಕರಣದ ನ್ಯಾಯಾಂಗ ತನಿಖೆಗೆ ವೈ.ಎಸ್.ವಿ.ದತ್ತಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 12:38 IST
Last Updated 19 ಆಗಸ್ಟ್ 2020, 12:38 IST
ವೈ.ಎಸ್.ವಿ ದತ್ತಾ
ವೈ.ಎಸ್.ವಿ ದತ್ತಾ   

ಶಿವಮೊಗ್ಗ:ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿಯ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ಆಗ್ರಹಿಸಿದರು.

ಗಲಭೆಗೆ ಏನೇ ಕಾರಣವಿರಲಿ, ಗಲಭೆಯನ್ನು ಯಾರೇ ಮಾಡಿರಲಿ, ಅವರಿಗೆ ದಾಕ್ಷಿಣ್ಯ ತೋರದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಎಪಿಎಂಸಿ ಕಾಯ್ದೆಗೆ ವಿರೋಧ

ADVERTISEMENT

ಎಪಿಎಂಸಿ ಕಾಯ್ದೆ ರೈತರಿಗೆ ವಿರುದ್ಧವಾಗಿದೆ. ಕಾಫಿ, ಅಡಿಕೆ, ಮೆಕ್ಕೆಜೋಳ, ಮೆಣಸು ಮುಂತಾದ ಬೆಳೆಗಾರರು ಇದರಿಂದ ಕಂಗಾಲಾಗುತ್ತಾರೆ. ಖಾಸಗಿ ಖರೀದಿದಾರರಿಗೆ ಮಣೆ ಹಾಕುವ ಹುನ್ನಾರವಿದು.ರಾಜ್ಯ ಸರ್ಕಾರ ಸುಗ್ರಿವಾಜ್ಞೆಯ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆಯಿಂದ ಬಂಡವಾಳದಾರರು ಭೂಮಿಯ ಒಡೆಯರಾಗುತ್ತಾ ಇಡೀ ಕೃಷಿಯನ್ನೇ ಧ್ವಂಸ ಮಾಡುತ್ತಾರೆ. ಇಂತಹ ಕಾಯ್ದೆಯನ್ನು ವಿರೋಧಿಸದೇ ಹೋದರೆ ಮುಂದೆ ಆಪತ್ತು ಖಚಿತ ಎಂದು ಅವರು ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ ಮತ್ತು ರಾಜ್ಯ ಸರ್ಕಾರದ ಆನ್‍ಲೈನ್ ಶಿಕ್ಷಣ ಇವುಗಳು ಕೂಡ ಭಯ ಹುಟ್ಟಿಸುತ್ತಿವೆ. ಶೇ 35ರಷ್ಟು ಪಠ್ಯಗಳನ್ನು ಕಡಿತ ಮಾಡುವ ನೆಪವನ್ನಿಟ್ಟುಕೊಂಡು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಭಾವನೆಗಳನ್ನು ಕೆರಳಿಸುವ ಪಠ್ಯಗಳನ್ನು ಕಡಿಮೆ ಮಾಡುವ ಹುನ್ನಾರ ಇದರಲ್ಲಿ ಅಡಗಿದೆ ಎಂದರು.

ದಿಕ್ಕುತ್ತಪುತ್ತಿರುವ ಹೋರಾಟಗಳು

ಜೆಡಿಎಸ್ ಪಕ್ಷವೂ ಸೇರಿ ರಾಜಕೀಯ ಪಕ್ಷಗಳು ಧ್ವನಿಯನ್ನೇ ಕಳೆದುಕೊಳ್ಳುತ್ತಿವೆ. ಕೇವಲ ಮತ ಬ್ಯಾಂಕ್, ಅಧಿಕಾರ ಹಿಡಿಯುವುದೇ ರಾಜಕೀಯವಾಗಿದೆ. ಆದರ್ಶಗಳು ಸುಟ್ಟುಹೋಗಿ, ಆಡಳಿತವೂ ಕೆಟ್ಟುನಿಂತಿವೆ. ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರುವ ರಾಜಕೀಯ ಬೆಳೆದು ನಿಂತಿದೆ ಎಂದರು.

ಸಂಘಟನೆಗಳು, ಹೋರಾಟಗಾರರು ಬಹಳ ಮುಖ್ಯವಾಗಿ ಸಾಹಿತಿಗಳು, ಪ್ರಗತಿಪರರು ಎನಿಸಿಕೊಂಡಿರುವವರು ಕೂಡ ಧ್ವನಿ ಕಳೆದುಕೊಂಡಿದ್ದಾರೆ. ಹೋರಾಟಗಳು ದಿಕ್ಕುತಪ್ಪುತ್ತಿವೆ. ಸಾಹಿತಿಗಳ ವಿಷಯಗಳು ಕಳಚಿಬೀಳತೊಡಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿಎಂ. ಶ್ರೀಕಾಂತ್, ತ್ಯಾಗರಾಜ್, ರಾಮಕೃಷ್ಣ, ಗೋಪಾಲಗೌಡ, ಸಿದ್ದಪ್ಪ, ರವಿಕುಮಾರ್, ಜಾವಿದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.