ADVERTISEMENT

ಕಸಾಪ ಪದಾಧಿಕಾರಿಗಳ ಪಟ್ಟಿಗೆ ಅನುಮತಿ ವಿಳಂಬ: ಜೋಷಿ ವಿರುದ್ಧ ಮಂಜುನಾಥ್ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 15:08 IST
Last Updated 1 ಫೆಬ್ರುವರಿ 2022, 15:08 IST
ಡಿ.ಮಂಜುನಾಥ್
ಡಿ.ಮಂಜುನಾಥ್   

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್‌ಗೆ ಆಯ್ಕೆಯಾದ ನಂತರ ನಿಯಮದಂತೆ ಎರಡು ತಿಂಗಳ ಒಳಗಾಗಿ ಸಮಾಲೋಚನಾ ಸಭೆ ನಡೆಸಿ, ಸಮಿತಿ ರಚನೆ ಮಾಡಿ ಕೇಂದ್ರ ಪರಿಷತ್ತಿಗೆ ಕಳುಹಿಸಿಕೊಟ್ಟರೂ ಅನುಮೋದನೆ ನೀಡಿಲ್ಲ. ಈಗ ಹೊಸ ನಮೂನೆಯಲ್ಲಿ ಭರ್ತಿ ಮಾಡಲು ಸೂಚಿಸಿರುವುದು ಕಾಲಾಹರಣಕ್ಕೆ ದಾರಿಯಾಗಿದೆ ಎಂದು ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಷಿ ವಿರುದ್ಧ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಎಲ್ಲಾ ತಾಲ್ಲೂಕುಗಳಿಗೆ ಭೇಟಿ ನೀಡಿ ಸದಸ್ಯರ ಜತೆ ಸಮಾಲೋಚನಾ ಸಭೆ ಮಾಡಿ ಸಮಿತಿ ರಚಿಸಲಾಗಿದೆ. ನಿಯಮದಂತೆ ಪಟ್ಟಿ ಮಾಡಿ, ನಿಬಂಧನೆಯಂತೆ ಮೀಸಲಾತಿ ನೀಡಲಾಗಿದೆ. ಹೆಸರು, ವಿಳಾಸ, ಸದಸ್ಯತ್ವ ಸಂಖ್ಯೆ, ದೂರವಾಣಿ ಸಂಖ್ಯೆ ಎಲ್ಲವನ್ನೂ ನಮೂದಿಸಿದ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿಯ ಮಾಹಿತಿ ಒಳಗೊಂಡ ಪಟ್ಟಿ ಕಳುಹಿಸಲಾಗಿದೆ. ಜ. 5ಕ್ಕೆ ಕಳುಹಿಸಿದ ಪತ್ರಕ್ಕೆ ಇದುವರೆಗೂ ಉತ್ತರ ನೀಡಿಲ್ಲ. ಅನುಮತಿ ಪಡೆಯಲು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.

‘ನಿಬಂಧನೆಗಳನ್ನು ನಾವೂ ಓದಿದ್ದೇವೆ. ಚುನಾವಣೆ ನಡೆದು ಎರಡು ತಿಂಗಳ ಒಳಗೆ ಸಮಾಲೋಚನೆ ನಡೆಸಿ, ಸಮಿತಿ ರಚನೆಯ ನಂತರ ಕಾರ್ಯಚಟುವಟಿಕೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 21ರಂದು ಚುನಾವಣೆ ನಡೆದಿದೆ. ಜನವರಿ 21ಕ್ಕೆ ಎರಡು ತಿಂಗಳು ಮುಗಿದಿದೆ. ನಿಯಮದಂತೆ ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿಗಳು ಕಾರ್ಯಕಾರಿ ಸಭೆ ನಡೆಸಿವೆ. ಕಾರ್ಯಚಟುವಟಿಕೆ ಆರಂಭಿಸಲಾಗಿದೆ. ಇತ್ತೀಚೆಗೆ ಇವರು ಸೃಷ್ಟಿ ಮಾಡಿದ ನಮೂನೆ ಗೊಂದಲಕ್ಕೆ ಕಾರಣವಾಗಿದೆ. ಅನುಮತಿ ಪಡೆಯಲು ಪಟ್ಟಿಯಲ್ಲಿರುವ ಹೆಸರುಗಳನ್ನು ನಮೂನೆಯಲ್ಲಿ ತುಂಬಿ ಕಳುಹಿಸಲಾಗಿದೆ. ಆದರೂ ಅನುಮತಿ ನೀಡಿಲ್ಲ. ಕಸಾಪ ಕಚೇರಿ ವಿಧಾನ ಸೌಧದಂತಾದರೆ ಹೇಗೆ ಎಂದು ಕಿಡಿಕಾರಿದ್ದಾರೆ.

ADVERTISEMENT

ಮಾನ್ಯತೆ ಪಡೆಯಲೆಂದೇ ಜ.5ಕ್ಕೆ ಕಳುಹಿಸಿದ ಮಾಹಿತಿ ಉಪೇಕ್ಷೆ ಮಾಡಿದ್ದಾರೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದು ಸುದ್ದಿಗೋಷ್ಠಿ ನಡೆಸಿ ಅನುಮತಿ ಪಡೆದಿಲ್ಲ ಎಂದು ದೂರಿದ್ದಾರೆ. ಕಾಸಾಪ ಪದಾಧಿಕಾರಿಗಳ ಕುರಿತ ಅವರ ಭಾವನೆ, ಸದಸ್ಯರ ಕುರಿತ ಮನೋಭಾವ ಅರ್ಥಮಾಡಿಕೊಳ್ಳಲು ಮತ್ತೊಂದು ಪರೀಕ್ಷೆ ಅಗತ್ಯವಾಗಿದೆ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.