ADVERTISEMENT

ಶಿವಮೊಗ್ಗದಲ್ಲಿ ಕಂಠೀರವ ಸ್ಟುಡಿಯೋಗೆ ಸಿದ್ಧತೆ

25ಎಕರೆ ಭೂಮಿ ಮಂಜೂರಾತಿಗೆ ಜಿಲ್ಲಾಡಳಿತಕ್ಕೆ ಮನವಿ: ಮೊಹಬೂಬ್ ಭಾಷಾ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 4:34 IST
Last Updated 24 ನವೆಂಬರ್ 2025, 4:34 IST
ಮೆಹಬೂಬ್ ಭಾಷಾ
ಮೆಹಬೂಬ್ ಭಾಷಾ   

ಶಿವಮೊಗ್ಗ: ಶಿವಮೊಗ್ಗ ಸಿನಿಮಾ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡುತ್ತಿದೆ. ಹೀಗಾಗಿ ಇಲ್ಲಿ ಕಂಠೀರವ ಸ್ಟುಡಿಯೊ ನಿರ್ಮಾಣ ಮಾಡಲು ರೂಪರೇಷೆ ಸಿದ್ಧಪಡಿಸಲಾಗುತ್ತಿದೆ ಎಂದು ಕಂಠೀರವ ಸ್ಟುಡಿಯೋ ನಿಗಮದ ಅಧ್ಯಕ್ಷ ಮೊಹಬೂಬ್ ಭಾಷಾ ತಿಳಿಸಿದರು.

ನಗರದಲ್ಲಿ ಭಾನುವಾರ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಂಠೀರವ ಸ್ಟುಡಿಯೊವನ್ನು ರಾಜ್ಯದ ವಿವಿಧೆಡೆಗೆ ವಿಸ್ತರಣೆ ಮಾಡುವ ಉದ್ದೇಶವನ್ನು ನಿಗಮ ಹೊಂದಿದೆ. ಇದಕ್ಕೆ ಬೇರೆ ಬೇರೆ ಜಿಲ್ಲೆಗಳಿಂದ ಬಹಳಷ್ಟು ಬೇಡಿಕೆಯೂ ಇದೆ. ಹಾಗಾಗಿ ಶಿವಮೊಗ್ಗ ನಗರವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದಕ್ಕೆ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿ ಪಕ್ಕದಲ್ಲಿ 25 ಎಕರೆ ಭೂಮಿ ಮಂಜೂರಾತಿ ಮಾಡುವಂತೆ ಜಿಲ್ಲಾಡಳಿತಕ್ಕೆ ಕೋರಿದ್ದೇವೆ’ ಎಂದು ಹೇಳಿದರು.

‘ಶಿವಮೊಗ್ಗದಲ್ಲಿ ನಡೆಯುವ ಹೊರಾಂಗಣ ಮತ್ತು ಒಳಾಂಗಣ ಸಿನಿಮಾ ಚಿತ್ರೀಕರಣಕ್ಕೆ ಈ ಸ್ಟುಡಿಯೊ ಬಹಳಷ್ಟು ಅನುಕೂಲವಾಗಲಿದೆ. ಇದರಿಂದ ಭಾಷೆ ಉಳಿಯುತ್ತದೆ ಹಾಗೂ ಪ್ರತಿಭೆಗಳು ಬೆಳೆಯುತ್ತವೆ. ಉದ್ಯೋಗ ಕೂಡ ಸೃಷ್ಟಿಯಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ಶಿವಮೊಗ್ಗ ಮಾತ್ರವಲ್ಲದೇ ಮಧ್ಯ ಕರ್ನಾಟಕದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ವಿಜಯನಗರ ಜಿಲ್ಲೆಗಳಲ್ಲಿ ಸ್ಟುಡಿಯೋ ನಿರ್ಮಿಸುವ ಯೋಜನೆ ಮಾಡಲಾಗಿದೆ. ಸರ್ಕಾರ ಇದಕ್ಕಾಗಿ ಈಗಾಗಲೇ ಬಜೆಟ್‌ನಲ್ಲಿ ₹5 ಕೋಟಿ ಅನುದಾನ ನೀಡಿದೆ. ರಾಮೋಜಿ ಫೀಲ್ಮಿ ಸಿಟಿ ಮಾದರಿಯಲ್ಲಿ ವಾರ್ತಾ ಇಲಾಖೆಯಿಂದ ಮೈಸೂರಿನಲ್ಲಿ 160 ಎಕರೆಯಲ್ಲಿ ಫಿಲ್ಮಿಸಿಟಿ ನಿರ್ಮಾಣ ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕನ್ನಡದಲ್ಲಿ ಓಟಿಟಿ ಪ್ರಾರಂಭ ಮಾಡಲು ನಿಗಮದಿಂದ ಈಗಾಗಲೇ ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ಕನ್ನಡದ ಕಿರುತೆರೆ, ಬೆಳ್ಳಿ ಪರದೆಗೆ ಹಾಗೂ ಅವುಗಳ ಕಾರ್ಯಗಳಿಗೆ ಓಟಿಟಿ ನಿರ್ಮಾಣ ಮಾಡಲು ಸರ್ಕಾರ 2025ರ ಅಯವ್ಯಯದಲ್ಲಿ ಅನುದಾನ ನೀಡಲು ಮುಂದಾಗಿದೆ’ ಎಂದು ತಿಳಿಸಿದರು.

‘ಕನ್ನಡ ಓಟಿಟಿ ಸರ್ಕಾರದ ಕಾರ್ಯಕ್ರಮವಾಗಿದೆ. ಅದಕ್ಕೆಂದು ಸಮಿತಿ ರಚನೆ ಮಾಡಲಾಗಿದೆ. ಈಗಾಗಲೇ ಇದಕ್ಕೆ ಸಂಬಂಧಪಟ್ಟಂತೆ ಎರಡು ಸಭೆಗಳನ್ನು ನಡೆಸಿದ್ದು, ಓಟಿಟಿ ನಿರ್ಮಾಣಕ್ಕೆ ಬೇಕಾದ ಎಲ್ಲಾ ರೂಪರೇಷೆ ತಯಾರಿಸಲಾಗಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.