ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ | ಬಿಜೆಪಿ ಟೀಕೆಗೆ ಸೊಪ್ಪು ಹಾಕೊಲ್ಲ: ಸಚಿವ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2023, 8:45 IST
Last Updated 19 ಜೂನ್ 2023, 8:45 IST
ಮಧು ಬಂಗಾರಪ್ಪ 
ಮಧು ಬಂಗಾರಪ್ಪ    

ಶಿವಮೊಗ್ಗ: 'ಪಠ್ಯಪುಸ್ತಕ ತಿದ್ದುಪಡಿ ವಿಚಾರದಲ್ಲಿ ಬಿಜೆಪಿ ಟೀಕೆಗೆ ಸೊಪ್ಪು ಹಾಕೊಲ್ಲ. ತಿದ್ದುಪಡಿ ಮಾಡಿಯೇ ತೀರುತ್ತೇವೆ' ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕಾರ್ಯಕರ್ತರ ಸಮಲೋಚನ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳಿಗೆ ಸೂಕ್ತ ಶಿಕ್ಷಣದ ಅವಶ್ಯಕತೆ ಇದೆ. ಅದಕ್ಕೆ ಪೂರಕವಾಗಿ ಶಾಲಾ ಮಟ್ಟದಿಂದಲೇ ಸಂವಿಧಾನ ಓದು ಮಕ್ಕಳಿಗೆ ಮನದಟ್ಟಾಗ ಬೇಕು. ಆಗ ಸಂವಿಧಾನದ ಪರಿಕಲ್ಪನೆ ಮಕ್ಕಳ ಮನಸ್ಸಿನಲ್ಲಿ ಬೇರೂರುತ್ತದೆ ಎಂದ ಅವರು, ಈ ಎಲ್ಲಾ ವಿಚಾರಗಳಿಂದ ಪಠ್ಯ ಪುಸ್ತಕ ತಿದ್ದುಪಡಿ ಅವಶ್ಯಕ ಎಂದರು.

ADVERTISEMENT

ಬಿಜೆಪಿ ಸ್ವಾರ್ಥದ ರಾಜಕಾರಣದಿಂದ ತನ್ನ ಆಡಳಿದ ಅಂತ್ಯಕ್ಕೆ ನಾಂದಿ ಹಾಡಿಕೊಂಡಿದೆ‌. ಕೇವಲ ಹಿಂದುತ್ವ, ದ್ವೇಷದ ರಾಜಕಾರಣದಿಂದ ರಾಜ್ಯದಲ್ಲಿಚಿಂತನೆಯ ತನ್ನ ಅಸ್ತಿತ್ವ ಕಳೆದುಕೊಂಡಿದೆ‌.

ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ಬಗ್ಗೆ ಚಿಂತನೆ ಮಾಡುವುದನ್ನು ಬಿಟ್ಟು, 2024 ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಕುರ್ಚಿಯ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ಮಾಡಲಿ ಎಂದು ಸಲಹೆ ನೀಡಿದರು.

ಮಾಧ್ಯಮಗಳಲ್ಲಿ ಮಾತ್ರ ಬಿಜೆಪಿಯವರು ಬಾಲ ಬಿಚ್ಚುತ್ತಿದ್ದಾರೆ. ಬಡವರಿಗೆ ಸೇರಬೇಕಿರುವ ಅನ್ನ ಭಾಗ್ಯಕ್ಕೆ ಕೇಂದ್ರದ ಬಿಜೆಪಿ ಸರ್ಕಾರ ಕನ್ನ ಹಾಕುತ್ತಿದೆ. ಕೇಂದ್ರಕ್ಕೆ ತೆರಿಗೆ ಪಾವತಿಸುವಲ್ಲಿ ಕರ್ನಾಟಕ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದೆ ಎಂದ ಅವರು, ಹೃದಯ ಇಲ್ಲದವರು ಮಾತ್ರ ಈ ರೀತಿಯ ಯೋಜನೆಗಳನ್ನು ದ್ವೇಷ ಮಾಡಲು ಸಾಧ್ಯ ಎಂದರು. .

ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಕುರಿತು ಅಪಪ್ರಚಾರ ಮಾಡಿಅನುಕೂಲವಾಗುವಂತೆ ಜನರನ್ನು ದಿಕ್ಕು ತಪ್ಪಿಸಲು ಬಿಜೆಪಿ ಹೊರಟಿದೆ. ಜನರಿಗೆ ಅನುಕೂಲವಾಗುವಂತಹ ಕಾರ್ಯಗಳ ಅನುಷ್ಠಾನ ಮಾಡುವುದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಗುರಿ ಎಂದರು.

ಶಿಕ್ಷಣ ಇಲಾಖೆಯಲ್ಲಿಯೇ ಶೇ 40 ರಷ್ಟು ಸರ್ಕಾರಿ ನೌಕರರು ಇದ್ದಾರೆ. ಎಲ್ಲರನ್ನೂ ಉತ್ತಮ ಹಾದಿಯಲ್ಲಿ ಕೊಂಡೊಯ್ಯುವ ಜವಾಬ್ಧಾರಿ ನನ್ನ ಮೇಲಿದೆ ಎಂದ ಅವರು, ಖಾಸಗಿ ಶಾಲೆಗಳ ಭರಾಟೆಯ ಮಧ್ಯೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುವ ಅವಶ್ಯಕತೆ ಇದೆ. ಅದು ಈ ಸರ್ಕಾರದ ಅವಧಿಯಲ್ಲಿ ನೆರವೇರುತ್ತದೆ ಎಂದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.