ಶಿವಮೊಗ್ಗ: ‘ಬಿಜೆಪಿ ಪಕ್ಷವೀಗ ಸರ್ಜಿ ಗುಂಡು ಪಾರ್ಟಿ ಆಗಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದರು.
ನೈರುತ್ಯ ಪದವೀಧರರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಅವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನೈರುತ್ಯ ಪದವೀಧರರ ಕ್ಷೇತ್ರದ ಮತದಾರಿಗೆ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಅವರು ಗುಂಡು ಪಾರ್ಟಿ ಕೊಡಿಸುತ್ತಿದ್ದಾರೆ. ಮತದಾರರನ್ನು ವ್ಯಸನಿಗಳನ್ನಾಗಿ ಮಾಡುತ್ತಿದ್ದಾರೆ. 40 ವರ್ಷಗಳ ರಾಜಕೀಯದಲ್ಲಿ ನಾನು ಎಂದಿಗೂ ಗುಂಡು ಪಾರ್ಟಿ ಕೊಡಿಸಿಲ್ಲ. ನಾನು ಕಟ್ಟಿ ಬೆಳೆಸಿದ ಪಕ್ಷಕ್ಕೆ ಇಂತಹ ಸ್ಥಿತಿ ಬಂದಿರುವುದು ಮನಸ್ಸಿಗೆ ನೋವಾಗುತ್ತಿದೆ’ ಎಂದರು.
‘ಗುಂಡು ಪಾರ್ಟಿಗೆ ಮತದಾರರನ್ನು ಒತ್ತಾಯಪೂರ್ವಕವಾಗಿ ಕರೆಯುತ್ತಿದ್ದಾರೆ. ಪಾರ್ಟಿಗೆ ಹೋಗಿ ಬಂದವರು ನಾವು ಸರ್ಜಿಗೆ ಮತ ಹಾಕುವುದಿಲ್ಲ. ಬದಲಾಗಿ ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಅವರಿಗೆ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ. ಪದವೀಧರರನ್ನು ಸರ್ಜಿ ಅವರು ದಾರಿ ತಪ್ಪಿಸುವಂತಹ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಶಿವಮೊಗ್ಗದಲ್ಲಿ ಹರ್ಷನ ಕೊಲೆಯಾದಾಗ ನಮ್ಮ ರಕ್ತ ಕುದಿಯುತ್ತಿತ್ತು. ಆದರೆ ಸರ್ಜಿ ಅವರು ಕೆಲವರನ್ನು ಕರೆದುಕೊಂಡು ಶಾಂತಿಗಾಗಿ ನಡಿಗೆ ಮಾಡಿದರು. ಚುನಾವಣೆಗಾಗಿ ಮಾಡಿದ ಗಿಮಿಕ್ ಇದಾಗಿದೆ. ಚಿಂತಕರ ಚಾವಡಿಗೆ ಹೋಗುವ ವ್ಯಕ್ತಿಯ ಹಿನ್ನೆಲೆಯನ್ನು ಮತದಾರರು ಗಮನಿಸುವ ಅಗತ್ಯವಿದೆ’ ಎಂದು ಹೇಳಿದರು.
‘ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರಾಮ– ಲಕ್ಷ್ಮಣ ಇದ್ದಂತೆ ಇದ್ದಾರೆ. ಬಿಜೆಪಿಯಲ್ಲಿ ಗುಂಡು ಪಾರ್ಟಿ ಸಂಸ್ಕೃತಿ ತಂದು ಅವಮಾನ ಮಾಡುತ್ತಿದ್ದಾರೆ. ಮತದಾರರು ಈ ಬಾರಿ ಹಿಂದುತ್ವಕ್ಕೆ ಅವಕಾಶ ನೀಡಲಿದ್ದಾರೆ. ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಗೆಲ್ಲುವುದು ಶತಸಿದ್ಧ’ ಎಂದು ಹೇಳಿದರು.
ಸ್ವತಂತ್ರ ಅಭ್ಯರ್ಥಿ ರಘುಪತಿ ಭಟ್ ಮಾತನಾಡಿ, ‘ರಾಷ್ಟ್ರ ಭಕ್ತರ ಬಳಗದ ಸಂಪೂರ್ಣ ಬೆಂಬಲದಿಂದ ಶಕ್ತಿ ಇಮ್ಮಡಿಗೊಂಡಿದೆ. ವ್ಯವಸ್ಥೆಗೆ ತಕ್ಕಪಾಠ ಕಲಿಸಲು ಚುನಾವಣೆಗೆ ಸ್ಪರ್ಧಿಸಿದ್ದೇನೆ. ನನ್ನ ಸ್ಪರ್ಧೆಯಿಂದ ರಾಜ್ಯ ಬಿಜೆಪಿಯಲ್ಲಿ ಬದಲಾವಣೆಯ ಗಾಳಿ ಬೀಸಲಿದೆ’ ಎಂದರು.
‘ನಾನು ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ. ಆಗ ಬಿಜೆಪಿ ಹೈಕಮಾಂಡ್ ಜಗದೀಶ ಶೆಟ್ಟರ್ ಅವರಿಗೆ ರತ್ನಗಂಬಳಿ ಹಾಸಿ ಕರೆದಂತೆ ನನಗೂ ಕರೆಯಲಿದೆ. ನನಗೆ ನೋಟಿಸ್ ತಲುಪುವ ಮುನ್ನವೇ ಉಚ್ಚಾಟನೆ ಮಾಡಲಾಗಿದೆ. ಇದೀಗ ನನ್ನ ಬೆಂಬಲಿಗರನ್ನು ಪಕ್ಷದಿಂದ ಹೊರ ಹಾಕಲು ಷಡ್ಯಂತ್ರ ನಡೆಯುತ್ತಿದೆ’ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಂ. ಶಂಕರ್, ವಾಗೀಶ್, ಹಾ.ಮ. ಪ್ರಕಾಶ್, ನಾರಾಯಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.