ADVERTISEMENT

ಪಿಯು ಫಲಿತಾಂಶ: ಮರು ಎಣಿಕೆ ವೇಳೆಯೂ ಎಡವಟ್ಟು, ವಿದ್ಯಾರ್ಥಿನಿಗೆ 11 ಅಂಕ ಕಡಿಮೆ

1 ಅಂಕ ಕಡಿಮೆಯಾಗಿದೆ ಎಂದು ಮರು ಎಣಿಕೆ ಮನವಿ ಮಾಡಿದ್ದಕ್ಕೆ 11 ಅಂಕ ಕಡಿತ ಮಾಡಿದ್ರು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 10:21 IST
Last Updated 30 ಸೆಪ್ಟೆಂಬರ್ 2020, 10:21 IST
ವಿದ್ಯಾರ್ಥಿನಿ ಧಾರಿಣಿ
ವಿದ್ಯಾರ್ಥಿನಿ ಧಾರಿಣಿ   

ಶಿವಮೊಗ್ಗ: ಪಿಯು ಪರೀಕ್ಷೆಯ ಸಂಖ್ಯಾಶಾಸ್ತ್ರದಲ್ಲಿ ಒಂದು ಅಂಕ ಕಡಿಮೆ ಬಂದಿದೆ ಎಂದು ಮರು ಎಣಿಕೆಗೆ ಹಾಕಿದ್ದ ವಿದ್ಯಾರ್ಥಿನಿಯೊಬ್ಬರು ಮತ್ತೆ 11 ಅಂಕ ಕಳೆದುಕೊಂಡಿದ್ದಾರೆ.

ಹೊಸನಗರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿನಿ ಧಾರಿಣಿ ತಾಲ್ಲೂಕು ಹನಿಯಾ ಗ್ರಾಮದವರು. ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ 96 ಅಂಕ ಗಳಿಸಿದ್ದರು. ಸಂಖ್ಯಾಶಾಸ್ತ್ರ ವಿಷಯದಲ್ಲಿ 99 ಅಂಕಗಳು ಲಭಿಸಿದ್ದವು. ಉತ್ತರ ಪತ್ರಿಕೆಯ ಫೋಟೊ ಪ್ರತಿ ತರಿಸಿದ ನಂತರ ಎಣಿಕೆ ವೇಳೆ 12ರ ಬದಲು 11 ಅಂಕ ನೀಡಿರುವುದು ಖಚಿತವಾಗಿತ್ತು. ಹಾಗಾಗಿ, ಉಪನ್ಯಾಸಕರ ಸಲಹೆಯಂತೆ ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಈಗ ಮರು ಎಣಿಕೆಯ ಫಲಿತಾಂಶ ಬಂದಿದ್ದು ಮೊದಲಿನ 99 ಅಂಕದ ಬದಲು 88 ಅಂಕ ನೀಡಲಾಗಿದೆ.

ಈ ಕುರಿತು ಪದವಿ ಪೂರ್ವ ಶಿಕ್ಷಣ ಮಂಡಳಿಗೆ ಭೇಟಿ ನೀಡಿ ಮನವಿ ಮಾಡಿದರೂ ಸ್ಪಂದಿಸಿಲ್ಲ. ಮೂವರು ತಜ್ಞರು ಸೇರಿ ಕೊಟ್ಟಿರುವ ಫಲಿತಾಂಶ ತಪ್ಪಾಗಿದ್ದರೂ, ವ್ಯತ್ಯಾಸ ಮಾಡಲು ಸಾಧ್ಯವಿಲ್ಲ ಎಂದು ಮಂಡಳಿ ಪ್ರತಿಕ್ರಿಯಿಸಿದೆ ಎಂದು ವಿದ್ಯಾರ್ಥಿನಿಯ ತಂದೆ ಹನಿಯಾ ರವಿ ದೂರಿದರು.

ADVERTISEMENT

‘ಉತ್ತರ ಪತ್ರಿಕೆಯ ಫೋಟೊ ಪ್ರತಿಯಲ್ಲಿ ಗಳಿಸಿದ ಅಂಕಗಳು ಸ್ಪಷ್ಟವಾಗಿವೆ. ಎಣಿಕೆಯಲ್ಲಿ ಒಂದು ಅಂಕ ಕಡಿಮೆ ಬಂದಿದೆ. ಸರಿಪಡಿಸಲು ಕೋರಿದರೆ ಮತ್ತೆ 11 ಅಂಕ ಕಡಿಮೆ ಮಾಡಿದ್ದಾರೆ. ಇಂತಹ ನಿಯಮಗಳಿಂದ ಹಲವು ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಸಚಿವರ ಗಮನಕ್ಕೆ ತಂದರೂ ನ್ಯಾಯ ದೊರಕಿಲ್ಲ. ಹಾಗಾಗಿ, ಹೈಕೋರ್ಟ್‌ ಮೆಟ್ಟಲು ಹತ್ತುತ್ತಿದ್ದೇನೆ’ ಎಂದು ರವಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೌಶಲ ಇರುವ ಉಪನ್ಯಾಸಕರನ್ನು ಪರೀಕ್ಷಾ ಕಾರ್ಯಕ್ಕೆ ನೇಮಿಸಬೇಕು. ಇಂತಹ ಪ್ರಮಾದಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುತ್ತವೆ. ಮಾನಸಿಕ ಹಿಂಸೆ ಅನುಭವಿಸಬೇಕಾಗುತ್ತದೆ ಎಂದು ವಿದ್ಯಾರ್ಥಿನಿ ಧಾರಿಣಿ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.