ಶಿವಮೊಗ್ಗ: ‘ರಾಜ್ಯದಲ್ಲಿ ₹ 3,000 ಕೋಟಿ ವೆಚ್ಚದಲ್ಲಿ ಆರಂಭಿಸಲಿರುವ 800 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಿಗೆ ಮುಖ್ಯಮಂತ್ರಿ ನವೆಂಬರ್ ಎರಡನೇ ವಾರ ಶಿವಮೊಗ್ಗದಲ್ಲಿ ಚಾಲನೆ ನೀಡಲಿದ್ದಾರೆ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಎಸ್.ಬಂಗಾರಪ್ಪ ಇಲ್ಲಿ ತಿಳಿಸಿದರು.
‘ಈ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಮನೆಯಿಂದ ಕರೆತರಲು, ಬಿಟ್ಟುಬರಲು ಇಲಾಖೆಯಿಂದಲೇ ಉಚಿತವಾಗಿ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಮಕ್ಕಳು ಶಾಲೆ ಬಿಡುವುದನ್ನು ತಪ್ಪಿಸಲು ಈ ಕ್ರಮಕ್ಕೆ ಇಲಾಖೆ ಮುಂದಾಗಿದೆ. ಆಯಾ ಶಾಲೆಯ ಆಡಳಿತ ಮಂಡಳಿಗಳೇ ಬಸ್‌ನ ನಿರ್ವಹಣೆ ಮಾಡಲಿವೆ’ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದವಿಪೂರ್ವ ಕಾಲೇಜಿನ 800, ಸರ್ಕಾರಿ ಶಾಲೆಗಳ 13,000 ಹಾಗೂ ಅನುದಾನಿತ ಶಾಲೆಗಳ 6,000 ಶಿಕ್ಷಕರ ನೇಮಕಾತಿಗೆ ಶೀಘ್ರ ಅಧಿಸೂಚನೆ ಹೊರಡಿಸಲಾಗುತ್ತಿದೆ ಎಂದು ಹೇಳಿದರು.
ಡಿ.7ಕ್ಕೆ ಟಿಇಟಿ: ಅದಕ್ಕೆ ಪೂರ್ವಭಾವಿಯಾಗಿ ಡಿ.7ಕ್ಕೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ನಡೆಯಲಿದೆ. ಅಕ್ಟೋಬರ್ 23ರಂದು ಅಧಿಸೂಚನೆ ಪ್ರಕಟಿಸಲಾಗುತ್ತದೆ. ಪರೀಕ್ಷೆಗೆ ಹಾಜರಾಗುವವರು ನವೆಂಬರ್ 9ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಿಸಿದರು.
ಬಿಜೆಪಿ ಆಡಳಿತದ 3.5 ವರ್ಷದ ಅವಧಿಯಲ್ಲಿ ಕೇವಲ 4700 ಶಿಕ್ಷಕರ ನೇಮಕವಾಗಿತ್ತು. ಕಾಂಗ್ರೆಸ್ ಆಡಳಿತಕ್ಕೆ ಬಂದು 2.5 ವರ್ಷದ ಅವಧಿಯಲ್ಲಿಯೇ ಒಟ್ಟು 30000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿ ಪೂರ್ಣಗೊಳಿಸಿ ಟೀಕಾಕಾರರಿಗೆ ಉತ್ತರ ಕೊಡಲಾಗುವುದುಮಧು ಎಸ್.ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.