ಆನವಟ್ಟಿ: ಹೋಬಳಿಯಲ್ಲಿ ಮಳೆ ಕೊಂಚ ತಗ್ಗಿದೆ. ಆದರೆ ವಾರದಿಂದ ಸುರಿದ ಮಳೆಯಿಂದಾಗಿ ದಂಡಾವತಿ-ವರದಾನದಿ ಸಂಗಮ ಕ್ಷೇತ್ರ ಬಂಕಸಾಣದಲ್ಲಿ ವರದಾ ನದಿ ಮೈದುಂಬಿ ಹರಿಯುತ್ತಿದೆ. ಇದರಿಂದ ಜಮೀನು ಜಲಾವೃತವಾಗಿವೆ.
ಐತಿಹಾಸಿಕ ಹೊಳೆಲಿಂಗೇಶ್ವರ ದೇವಸ್ಥಾನ ಸಂಪೂರ್ಣ ಜಲಾವೃತವಾಗಿದೆ. ಆನವಟ್ಟಿ-ಜಡೆ ಮಾರ್ಗದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ನೂರಾರು ಎಕರೆ ಕೃಷಿ ಜಮೀನು ನೆರೆ ಹಾವಳಿಗೆ ತುತ್ತಾಗಿವೆ.
ಎರಡು ದಿನದಿಂದ ವರದಾ ನದಿಯ ಪ್ರವಾಹ ಹೆಚ್ಚುತ್ತಿದೆ. ಬಂಕಸಾಣ ಸೇತುವೆ ಬಹಳ ಹಳೆದಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹಾಕಿದ್ದು, ಪ್ರವಾಹ ತಗ್ಗುವವರೆಗೂ ವಾಹನ ಸಂಚಾರ ಸ್ಥಗಿತವಾಗಿದೆ.
ದಂಡಾವತಿ- ವರದಾ ನದಿಗಳ ಅಚ್ಚುಕಟ್ಟು ಪ್ರದೇಶದ ಬೆನ್ನೂರು, ಕಾತುವಳ್ಳಿ, ಲಕ್ಕವಳ್ಳಿ, ದ್ವಾರಳ್ಳಿ, ಮೂಗುರು, ಶಕುನವಳ್ಳಿ, ಸಾಬಾರ, ಅಗಸನಹಳ್ಳಿ, ತೊರವಂದ, ಮೂಡಿ, ನೆಲ್ಲಿಕೊಪ್ಪ ಸೇರಿದಂತೆ ಹಲವು ಹಳ್ಳಿಗಳ ಅಡಿಕೆ ತೋಟ, ಬಾಳೆ, ಶುಂಠಿ, ಭತ್ತ, ಜೋಳದ ಜಮೀನುಗಳು ಜಲಾವೃತವಾಗಿವೆ.
ಪ್ರತಿ ವರ್ಷ ಮಳೆ ಬಂದಾಗ ನದಿಯ ಅಚ್ಚುಕಟ್ಟು ಪ್ರದೇಶ, ಪ್ರವಾಹದ ನೆರೆ ಹಾವಳಿ ಸಾಕಷ್ಟು ಬೆಳೆ ನಾಶವಾಗುತ್ತದೆ. ರೈತರಿಗೆ ಬಹಳ ನಷ್ಟವಾಗುತ್ತದೆ. ನೆರೆ ಹಾವಳಿ ಮುಗಿದ ಮೇಲೆ ಬಂದ ಅಧಿಕಾರಿಗಳು ಕೆಲವು ಜಮೀನುಗಳಿಗೆ ನೆರೆ ಪರಿಹಾರಕ್ಕೆ ಸೂಚಿಸಿ, ಹೆಚ್ಚಿನ ನಷ್ಟವಾಗಿಲ್ಲ ಎಂದು ವರದಿ ನೀಡುತ್ತಾರೆ. ಇದರಿಂದ ರೈತರಿಗೆ ಪರಿಹಾರವೇ ಸಿಗುವುದಿಲ್ಲ. ಹಾಗಾಗಿ ಸರ್ಕಾರ ದಂಡಾವತಿ ಮತ್ತು ವರದಾ ನದಿಯ ಅಚ್ಚುಕಟ್ಟು ಪ್ರದೇಶವನ್ನು ಶಾಶ್ವತ ನೆರೆ ಪ್ರದೇಶವೆಂದು ಗುರುತಿಸಬೇಕು. ಬೆಳೆ ಕಳೆದುಕೊಂಡ ಎಲ್ಲ ರೈತರಿಗೂ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಗತಿಪರ ರೈತರಾದ ಉಜ್ಜೆನೇಶ್ವರ್ ಲಕ್ಕವಳ್ಳಿ, ಶಂಕರಪ್ಪ ದ್ವಾರಳ್ಳಿ ಮನವಿ ಮಾಡಿದರು.
ಬಂಕಸಾಣ, ಗೊಂದಿ ಸೇರಿದಂತೆ ವರದಾ ಮತ್ತು ದಂಡಾವತಿ ನದಿಗಳು ಹರಿದು ಹೋಗಿರುವ ಪ್ರದೇಶಗಳಲ್ಲಿ ಅಪಾಯಮಟ್ಟ ಮೀರಿ ಹರಿಯುತ್ತಿವೆ. ಯುವಕರು ಸೇರಿದಂತೆ ಯಾರು ಕೂಡ ನದಿಯ ನೀರಿನಲ್ಲಿ ಇಳಿಯಬಾರದು ಎಂದು ಪಿಎಸ್‌ಐ ರಾಜು ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.