ADVERTISEMENT

ಕನ್ನಡಿಗರ ಅಸ್ಮಿತೆಯ ಕಾರಣ ಪುರುಷ ಮಯೂರವರ್ಮ

ಕರ್ನಾಟಕ ಸಂಘದ ಗೌರವ ಸದಸ್ಯತ್ವ ಸ್ವೀಕರಿಸಿದ ಎಂ. ಚಿದಾನಂದಮೂರ್ತಿ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 15:44 IST
Last Updated 9 ಡಿಸೆಂಬರ್ 2018, 15:44 IST
ಕರ್ನಾಟಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಶೋಧಕ ಎಂ. ಚಿದಾನಂದ ಮೂರ್ತಿ ಅವರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು.
ಕರ್ನಾಟಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಶೋಧಕ ಎಂ. ಚಿದಾನಂದ ಮೂರ್ತಿ ಅವರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡಲಾಯಿತು.   

ಶಿವಮೊಗ್ಗ: ಕನ್ನಡಿಗರ ಅಸ್ಮಿತೆಯ ಮೂಲ ಕಾರಣ ಪುರುಷ ಕದಂಬ ವಂಶ ಸ್ಥಾಪಕ ಮಯೂರವರ್ಮ ಎಂದು ಸಂಶೊಧಕ ಎಂ. ಚಿದಾನಂದಮೂರ್ತಿ ಶ್ಲಾಘಿಸಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಘದ ಗೌರವ ಸದಸ್ಯತ್ವ ಸ್ವೀಕರಿಸಿ ಅವರು ಮಾತನಾಡಿದರು.

ಕನ್ನಡಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಪ್ರಪಂಚದಲ್ಲಿ ಎರಡು ರೀತಿಯ ಭಾಷೆಗಳನ್ನು ಕಾಣಬಹುದು. ಕೆಲವು ಲಿಪಿ ಇಲ್ಲದ ಆಡು ಭಾಷೆಗಳು. ಕೆಲವು ಗ್ರಾಂಥಿಕ ಭಾಷೆಗಳು. ಆದರೆ, ಕನ್ನಡ ಎರಡೂ ಪ್ರಕಾರಗಳ ಸಮ್ಮಿಳಿತದ ಭಾಷೆ. ಬರವಣಿಗೆ, ಮಾತು ಎರಡೂ ಇವೆಎಂದರು.

ADVERTISEMENT

ಶಾತವಾಹನರಿಂದ ಬ್ರಿಟಿಷರವರೆಗೂ ಕರ್ನಾಟಕವನ್ನು ಹಲವು ರಾಜವಂಶಗಳು ಆಳಿವೆ. ಕನ್ನಡವನ್ನು ಮನೆ ಹಾಗೂ ಆಡಳಿತ ಭಾಷೆಯಾಗಿ ಮೊದಲು ಆಳ್ವಿಕೆ ನಡೆಸಿದ್ದು ಕದಂಬರು. ಪಲ್ಲವರ ಆಸ್ತಾನದಲ್ಲಿ ಕನ್ನಡ ಮಾತನಾಡಿದ ಕಾರಣಕ್ಕೆ ಅಪಮಾನಕ್ಕೆ ಒಳಗಾದ ಮಯೂರ ಶರ್ಮ ಅವರ ವಿರುದ್ಧ ಬಂಡೆದ್ದು ಕದಂಬ ಸಾಮ್ರಾಜ್ಯವನ್ನೇ ಕಟ್ಟಿದ. ಗುಡ್ಡಗಾಡು ಜನರನ್ನು ಒಗ್ಗೂಡಿಸಿ ಪಲ್ಲವರನ್ನು ಸೋಲಿಸಿದ. ಶರ್ಮ ವರ್ಮನಾಗಿ ಬದಲಾದ ಎಂದು ಇತಿಹಾಸ ಮೆಲುಕು ಹಾಕಿದರು.

ಕದಂಬರ ಆಳ್ವಿಕೆಯಲ್ಲಿ ಕನ್ನಡ ಆಡಳಿತ ಭಾಷೆಯಾಗಿ ಬೆಳವಣಿಗೆ ಹೊಂದಿತು. ಕನ್ನಡಕ್ಕೂ ರಾಜಾಶ್ರಯ ದೊರಕಿತು. ಮುಂದೆ ರನ್ನ, ಜನ್ನ, ಪಂಪಮೊದಲಾದವರು ಕನ್ನಡ ಸಾಹಿತ್ಯ ಸಮೃದ್ಧಗೊಳಿಸಿದರು. 12ನೇ ಶತಮಾನದಲ್ಲಿ ವಚನ ಸಾಹಿತ್ಯ ಕ್ರಾಂತಿಯನ್ನೇ ಮಾಡಿತು. ಸೂಳೆ ಸಂಕವ್ವ ‘ನಿರ್ಲಜ್ಜೇಶ್ವರ’ ಎಂಬ ಅಂಕಿತದಲ್ಲೇ ವಚನ ಸಾಹಿತ್ಯ ಸೃಷ್ಟಿಸಿದರು. ಇದೆಲ್ಲದರ ಪರಿಣಾಮ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನ ದೊರಕಲು ದಾರಿಯಾಯಿತು ಎಂದರು.

ಪ್ರಾಸ್ತಾವಿಕ ಮಾತನಾಡಿದ ಸಾಹಿತಿ ತೀ.ನಂ. ಶಂಕರನಾರಾಯಣ, ಆಳವಾದ ಸಂಶೋಧನೆ ನಡೆಸುತ್ತಲೇ ಕನ್ನಡದ ಉಳಿವಿಗಾಗಿ ಬೀದಿಗಿಳಿದು ಹೋರಾಟ ನಡೆಸಿದವರಲ್ಲಿ ಚಿದಾನಂದ ಮೂರ್ತಿ ಅವರು ಅಗ್ರಗಣ್ಯರು. ಕ್ಷೇತ್ರ ಕಾರ್ಯದ ಮೂಲಕವೇ ಮಹತ್ವದ ಸಂಶೋಧನೆ ನಡೆಸಿದರು. ಅವರ ಶಿಸ್ತು, ನಿಖರತೆ, ಖಚಿತನಿಲುವುಗಳನ್ನು ಅವರ ಸಂಶೋಧನಾ ಬರಹಗಳಲ್ಲಿ ಕಾಣಬಹುದು ಎಂದು ವಿಶ್ಲೇಷಿಸಿದರು.

ಹಿಂದೂ ಧರ್ಮ ಮತ್ತು ಇತರೆ ಧರ್ಮಗಳು, ಲಿಂಗಾಯತ ಮತ್ತು ವೀರಶೈವ ವಿಚಾರದಲ್ಲಿ ಖಚಿತ ಅಭಿಪ್ರಾಯ ಮಂಡಿಸಿದ್ದರು. ಹಲವರ ಟೀಕೆ ಎದುರಿಸಿದರೂ ಸತ್ಯ ಬಿಡಲಿಲ್ಲ. ಅಡ್ಡಗೋಡೆ ಮೇಲೆ ದೀಪ ಇಡಲಿಲ್ಲ. ಖಚಿತ ನಿಲುವಿಗೆ ಬದ್ಧರಾಗಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಭಿನಂದನಾ ನುಡಿ ಆಡಿದ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎಸ್. ಅಂಗಡಿ, ಚಿದಾನಂದಮೂರ್ತಿ ಅವರು ಹಳಗನ್ನಡದ ಕ್ಲಿಷ್ಟ ಪದ್ಯಗಳನ್ನು ಸರಳಗೊಳಿಸಿದರು. ಶಬ್ದಮಣಿ ದರ್ಪಣವನ್ನು ಆಧುನಿಕ ಶೈಲಿಯಲ್ಲಿ ವಿಶ್ಲೇಷಿಸಿದರು. ವಚನ ಸಾಹಿತ್ಯಗಳಿಗೆ ಹೊಸ ಆಯಾಮ ನೀಡಿದರು. ಅವರ ಬರಹಗಳಲ್ಲಿ ಅಲಕ್ಷಿತ ಸಮುದಾಯಗಳಿಗೆ ಆದ್ಯತೆ ನೀಡಿದ್ದಾರೆ. ಅವರೊಬ್ಬ ಪ್ರಗತಿಪರ ಚಿಂತಕ ಎಂದು ಬಣ್ಣಿಸಿದರು.

ಸಂಘದ ಕಾರ್ಯದರ್ಶಿ ಎಚ್‌.ಎಸ್. ನಾಗಭೂಷಣ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೆ. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.