ADVERTISEMENT

ತಾಳಗುಂದದಲ್ಲಿದೆ ಕರುನಾಡಿನ ಮೊದಲ ಶಿವಾಲಯ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 6:18 IST
Last Updated 29 ನವೆಂಬರ್ 2022, 6:18 IST
ಶಿರಾಳಕೊಪ್ಪ ಸಮೀಪದ ತಾಳಗುಂದದ ಉತ್ಖನನದಲ್ಲಿ ಲಭಿಸಿದ ಗಜಪೃಷ್ಠಾಕಾರದ ನೆಲಪಾಯ (ಎಡಚಿತ್ರ). ಕರ್ನಾಟಕದ ಮೊದಲ ಶಿವಾಲಯದ ನವೀಕರಣ ಸಂದರ್ಭ
ಶಿರಾಳಕೊಪ್ಪ ಸಮೀಪದ ತಾಳಗುಂದದ ಉತ್ಖನನದಲ್ಲಿ ಲಭಿಸಿದ ಗಜಪೃಷ್ಠಾಕಾರದ ನೆಲಪಾಯ (ಎಡಚಿತ್ರ). ಕರ್ನಾಟಕದ ಮೊದಲ ಶಿವಾಲಯದ ನವೀಕರಣ ಸಂದರ್ಭ   

ಶಿರಾಳಕೊಪ್ಪ:ಐತಿಹಾಸಿಕ ತಾಳಗುಂದ ಗ್ರಾಮದ ಚರಿತ್ರೆಯನ್ನು ಕೆದಕುತ್ತಾ ಸಾಗಿದಂತೆಲ್ಲಾ ಕರುನಾಡಿನ ಇತಿಹಾಸದ ಪುಟಗಳು ತೆರೆದುಕೊಳ್ಳುತ್ತವೆ. ಈ ಸಾಲಿಗೆ ಸೇರುವ ಮತ್ತೊಂದು ಪ್ರಾಚೀನ ಕುರುಹು ‘ಶಿವಲಿಂಗ’. ಉಪಲಬ್ಧ ಮಾಹಿತಿ ಪ್ರಕಾರ ಕರ್ನಾಟಕದ ಮೊದಲ ಶಿವಾಲಯ ಇದು.

ಶಾತವಾಹನ ದೊರೆಗಳು ಪೂಜಿಸಿ ಆರಾಧಿಸಿದ ‘ಮಹಾದೇವ’ನನ್ನು ಕಾಲಾನಂತರ ‘ಪ್ರಣವೇಶ್ವರ’ ಎಂದು ಕರೆಯಲಾಗಿದೆ. ಈ ದೇವಸ್ಥಾನವನ್ನು ‘ಹಿರಣ್ಯಗರ್ಭ ಬ್ರಹ್ಮ’ ಸ್ಥಾಪಿಸಿದ್ದಾನೆ ಎಂದು ಶಾಸನಗಳಲ್ಲಿ ಉಲ್ಲೇಖಿಸಲಾಗಿದೆ. ಈ ಶಿವಲಿಂಗವು ತಳದಿಂದ 12 ಅಡಿಗಿಂತ ಹೆಚ್ಚು ಎತ್ತರ ಇದ್ದು, 45 ಸೆಂ.ಮೀ ವ್ಯಾಸವುಳ್ಳದ್ದಾಗಿದೆ. ಈ ಶಿವಲಿಂಗವನ್ನು 1933 ಹಾಗೂ 1966ರಲ್ಲಿ ಎರಡು ಬಾರಿ ಧ್ವಂಸ ಮಾಡಲು ಪ್ರಯತ್ನಿಸಿದ ಬಗ್ಗೆ ಉಲ್ಲೇಖವಿದೆ.

ದೇವಸ್ಥಾನವನ್ನು ಶಾತವಾಹನರ ಕಾಲದಲ್ಲಿ ಗಜಪೃಷ್ಠಾಕಾರದ ಮಾದರಿಯಲ್ಲಿ ನಿರ್ಮಿಸಲಾಗಿದೆ. ಸುಟ್ಟ ಇಟ್ಟಿಗೆಯ ತಳಪಾಯ ಇದೆ.

ADVERTISEMENT

ರಾಜನಾದ ನಂತರ ಕದಂಬರ ಮಯೂರ ವರ್ಮ ತಾಳಗುಂದಕ್ಕೆ ಮೊದಲ ಬಾರಿ ಬಂದಾಗ ಹಾಳಾಗಿದ್ದ ದೇವಸ್ಥಾನವನ್ನು ನೋಡಿ, ಮರುಕಪಟ್ಟು, ಜೀರ್ಣೋದ್ಧಾರ ಮಾಡುತ್ತಾನೆ. ಇದಕ್ಕೆ ಪೂರಕವಾದ ಕೆಲವೊಂದು ಮಹತ್ವಪೂರ್ಣ ಮಾಹಿತಿಗಳು 2013-14ರ ಉತ್ಖನನದಿಂದ ದೊರೆತಿವೆ. ಇದರಿಂದಾಗಿ ಈ ಸ್ಥಳ ಪ್ರಸಿದ್ಧ ಘಟಿಕಾ ಸ್ಥಳವಾಗಿಯೂ ಬೆಳೆಯಿತು.

ಅಂದಿನ ಕಾಲಕ್ಕೆ ಸ್ಥಾಣಕುಂದೂರು (ತಾಳಗುಂದ) ವ್ಯಾಸಂಗಕ್ಕೆ ಪ್ರಸಿದ್ಧವಾದ ಒಂದು ಘಟಿಕಾ ಕೇಂದ್ರವಾಗಿತ್ತೆಂಬುದನ್ನು ‘ತಾಳಗುಂದದ ಪ್ರಣವೇಶ್ವರ ದೇವಾಲಯ’ ಎಂಬ ತಮ್ಮ ಲೇಖನದಲ್ಲಿ ಎಚ್.ಆರ್. ರಘುನಾಥಭಟ್ಟರು ಚಿತ್ರಿಸಿದ್ದಾರೆ.

ಯಜ್ಞ ಮಾಡುವಾಗ ಬೆಂಕಿಯಿಂದ ತೊಂದರೆ ಆಗದಂತೆ ಕೆಂಡ ಸರಿಮಾಡಿಕೊಳ್ಳುವ ಸುಟ್ಟ ಮಣ್ಣಿನ ಹಸ್ತರಕ್ಷಕಗಳು (ಬೆರಳಿನ ಗುರುತಿರುವ) ಶಾತವಾಹನ- ಕದಂಬಕಾಲೀನ ಸ್ತರದಲ್ಲಿ ದೊರೆತಿವೆ. ಇವುಗಳನ್ನು ವಿಶೇಷವಾಗಿ ಮಣಿಕಟ್ಟಿನ ಅಳತೆಯಲ್ಲಿ ಕೈಗೆ ಕಟ್ಟಿಕೊಳ್ಳಲು ಅನುವಾಗುವಂತೆ ರಂಧ್ರಗಳನ್ನು ಕೊರೆಯಲಾಗಿದೆ. ಈ ಮಾದರಿಯ ಹಸ್ತ ರಕ್ಷಕಗಳು ಇಲ್ಲಿ ಮಾತ್ರ ದೊರೆತಿದ್ದು ಕರ್ನಾಟಕದ ಇತರೆ ಸ್ಥಳಗಳಲ್ಲಿ ದೊರೆತಿಲ್ಲ. ಇಂತಹ ಹಸ್ತರಕ್ಷಕಗಳು ಸಿಂಧೂ-ಸರಸ್ವತಿ ನದಿಗಳ ನಾಗರಿಕತೆಯ ನೆಲೆಗಳಲ್ಲಿ ಮಾತ್ರವೇ ದೊರೆತಿದೆ ಎಂದು ಪುರಾತತ್ವ ವಿದ್ವಾಂಸರಾದ ಡಾ.ಎಸ್. ನಾಗರಾಜು ಅವರು ಹೇಳಿರುವುದು ಗಮನಾರ್ಹ ಎಂದು ಸಂಶೋಧಕ ಟಿ.ಎಂ. ಕೇಶವ ಹೇಳುತ್ತಾರೆ.

ತಾಳಗುಂದದ ಪ್ರಣವೇಶ್ವರ ದೇವಾಲಯದ ಆವರಣದ ಉತ್ಖನನ ಸಂದರ್ಭದಲ್ಲಿ ಅನೇಕ ಅಮೂಲ್ಯ ಪುರಾತತ್ವ ಆಕರಗಳು ದೊರೆತಿವೆ. ಅವುಗಳಲ್ಲಿ ಬಹುಮುಖ್ಯವಾದುದು ಕದಂಬ ಸ್ತರದಲ್ಲಿ ದೊರೆತಿರುವ ಶೈವ ಶಿಲ್ಪ. ಇದು 4-5ನೇ ಶತಮಾನದ್ದಾಗಿದ್ದು, ಇದರ ರಚನೆ ಅದೇ ಕಾಲದ ಕರ್ನಾಟಕ ಶೈಲಿಯ ಇತರ ಶಿಲ್ಪಗಳಿಗಿಂತ ತುಸು ವಿಭಿನ್ನವಾಗಿದೆ.

ಶುಂಗ- ಗುಪ್ತರ ಕಾಲದಲ್ಲೂ ಈ ರೀತಿಯ ಶಿಲ್ಪಗಳನ್ನು ನೋಡಬಹುದು. ಹೆಚ್ಚಾಗಿ ಮೃತ್- ಫಲಕಗಳಲ್ಲಿ, ಕೆಂಪು ಮರಳುಕಲ್ಲಿನ ಫಲಕಗಳಲ್ಲಿ ಇವನ್ನು ನೋಡಬಹುದು. ಇಲ್ಲಿ ದೊರೆತಿರುವ ಶಿಲ್ಪದ ಶೈಲಿಯು ಅಹಿಃಛತ್ರದ ಉತ್ಖನನದಲ್ಲಿ ದೊರೆತಿರುವ 3-4ನೇ ಶತಮಾನದ ಮೃತ್-ಫಲಕಗಳಲ್ಲಿನ ಚಿತ್ರಣದಂತೆಯೇ ಇದೆ.

ಅಹಿಃಛತ್ರದಿಂದ ಬಂದವರು ಈ ಮೂರ್ತಿ ಫಲಕವನ್ನು ತಂದಿರಬಹುದು ಎನ್ನುವ ಅಂಶವನ್ನು ಇತಿಹಾಸ ಸಂಶೋಧಕರು ಆಲೋಚಿಸುವಂತೆ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.