
ತೀರ್ಥಹಳ್ಳಿ : ನಾನೊಬ್ಬ ಸಾಹಿತ್ಯ ಓದುಗ. ಬರವಣಿಗೆ, ಸಾಹಿತ್ಯ ರಚನೆಯ ಬಗ್ಗೆ ಅನುಭವ ಇಲ್ಲ. ಪ್ರೌಢ ಶಿಕ್ಷಣವ ಪೂರೈಸದಿದ್ದ ನಾನು ನೆಂಪೆ ದೇವರಾಜ್ ಪ್ರೇರಣೆಯಿಂದ “ಕವಲೊಡೆದ ಕಣ್ಮಣಿ” ಪುಸ್ತಕ ರಚಿಸಿದ್ದೇನೆ ಎಂದು ಲೇಖಕ ಸಿ.ರವಿ ಹೇಳಿದರು.
ಪ್ರೀತಿ, ಪ್ರೇಮ, ಬೇಸರ, ವೇದನೆ, ತೊಳಲಾಟಗಳನ್ನು ಇಟ್ಟುಕೊಂಡು ರಚಿಸಿರುವ ಕವಲೊಡೆದ ಕಣ್ಮಣಿ ಪುಸ್ತಕ ಫೆಬ್ರವರಿ 18ರ ಬುಧವಾರ ಸಂಜೆ 5 ಗಂಟೆಗೆ ಮೇಲಿನಕುರುವಳ್ಳಿಯ ಕಲ್ಲುಕುಟಿಕರ ಸಹಕಾರ ಸಂಘದ ಸಭಾಂಗಣದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಶುಕ್ರವಾರ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳು ಪ್ರಕಾಶ್, ತಾಲ್ಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಬೆರಗು ಪ್ರಕಾಶನದ ರಮೇಶ್ ಕತ್ತಿ ಭಾಗವಹಿಸಲಿದ್ದಾರೆ. ಪುಸ್ತಕದ ಕುರಿತು ನಿವೃತ್ತ ಪ್ರಾಂಶುಪಾಲ ಗಣಪತಿ ಉತ್ತುಂಗ ಮಾತನಾಡಲಿದ್ದಾರೆ. ಸಮಾಜ ಸೇವಕ ಕಣ್ಣನ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
“ಕೃಷಿಕ, ಕಲ್ಲು ಕುಟಿಕರಾಗಿರುವ ರವಿ ಪ್ರಯತ್ನ ಶ್ಲಾಘನೀಯ. ಸಾಹಿತ್ಯ ಬಲ್ಲವರಿಗೆ ಮಾತ್ರ ಬರವಣಿಗೆ ಸೀಮಿತವಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಬಡತನ, ಶ್ರೀಮಂತಿಕೆಯ ನಡುವೆ ಪ್ರೇಮದ ಹಂದರವನ್ನು ಬಿಡಿಸುವ ಕಾದಂಬರಿಯಾಗಿದೆ” ಎಂದು ಸಾಹಿತಿ ನೆಂಪೆ ದೇವರಾಜ್ ತಿಳಿಸಿದರು.
“ಸಾಹಿತ್ಯ ಕ್ಷೇತ್ರ ಎಲ್ಲರನ್ನು ಒಳಗೊಂಡಿದೆ. ಅಕ್ಷರಗಳನ್ನು ತಪ್ಪಾಗದಂತೆ ಜೋಡಿಸುವ ಅವರ ಕಾಳಜಿಯ ದಿನಗಳನ್ನು ಕಂಡು ಆಶ್ಚರ್ಯಗೊಂಡಿದ್ದೇನೆ. ಕಾದಂಬರಿ ಚೆನ್ನಾಗಿ ಮೂಡಿ ಬಂದಿದೆ” ಎಂದು ಲೇಖಕಿ ಪದ್ಮಜಾ ಜೋಯ್ಸ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.