ಶಿವಮೊಗ್ಗ: ಜಿಲ್ಲೆಯ ಹಾಸ್ಟೆಲ್‌ಗಳಿಗೆ ಪೂರೈಸುವ ಆಹಾರಸಾಮಗ್ರಿಗಳಲ್ಲಿ ಭಾರಿ ಅವ್ಯವಹಾರ ನಡೆಯುತ್ತಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ಶಾಸಕರಾದ ಆರಗಜ್ಞಾನೇಂದ್ರ, ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗ, ಅಲ್ಪ ಸಂಖ್ಯಾತ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಟೆಂಡರ್ ಪಡೆದವರು ನಿಗದಿತ ಪ್ರಮಾಣದಲ್ಲಿ ಆಹಾರ ಸಾಮಗ್ರಿ ಪೂರೈಸುತ್ತಿಲ್ಲ. ಕಡಿಮೆ ಪ್ರಮಾಣದಲ್ಲಿ ನೀಡಿ, ಹೆಚ್ಚಿನ ಮೊತ್ತ ಪಡೆಯುತ್ತಿದ್ದಾರೆ. ಕೋಟ್ಯಂತರ ಮೊತ್ತದಲ್ಲಿ ವಂಚನೆ ನಡೆಯುತ್ತಿದೆ. ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಬಡ ಮಕ್ಕಳ ಅನ್ನವನ್ನೂ ಕಸಿದುಕೊಳ್ಳುವ ಇವರ ಮನೋಸ್ಥಿತಿಗೆ ಕಡಿವಾಣ ಹಾಕಲೇಬೇಕು ಎಂದು ಒತ್ತಾಯಿಸಿದರು.
ಹೊಸದಾಗಿ ಟೆಂಡರ್ ಕರೆದರೆ, ಹಳೆಯ ಗುತ್ತಿಗೆದಾರರು ಕೋರ್ಟ್ ಮೊರೆ ಹೋಗುತ್ತಾರೆ. ಟೆಂಡರ್ ಪ್ರಕ್ರಿಯೆಗೆ ಕೋರ್ಟ್ ತಡೆ ನೀಡದಿದ್ದರೂ, ಇಲಾಖೆಯ ಆಯುಕ್ತರು ಟೆಂಡರ್ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ. ಮೊದಲು ಹಳಬರ ಟೆಂಡರ್ ರದ್ದು ಮಾಡಬೇಕು. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ. ತಮ್ಮಣ್ಣ ಅವರು ದೂರವಾಣಿ ಮೂಲಕ ಕಾರ್ಯದರ್ಶಿಯನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ತೀರ್ಥಹಳ್ಳಿ ತಾಲ್ಲೂಕಿನ ಎರಡು ಮೊರಾರ್ಜಿ ವಸತಿ ಶಾಲೆಯ ₹ 34 ಲಕ್ಷ ಹಣ ಗುಳುಂ ಮಾಡಿದ ಪ್ರಾಂಶುಪಾಲರನ್ನು ಇದುವರೆಗೂ ಬಂಧಿಸಿಲ್ಲ. ಇಂಥವರ ಮೇಲೆ ನಿಗಾ ಇಡದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ. ಒಬ್ಬ ಮಹಿಳೆ ಬಂಧಿಸಲು ಜಿಲ್ಲಾ ಪೊಲೀಸರಿಗೆ ಸಾಧ್ಯವಾಗಲಿಲ್ಲವೇ ಎಂದು ಶಾಸಕ ಆರಗ ಜ್ಞಾನೇಂದ್ರಪ್ರಶ್ನಿಸಿದರು.
ವೇಗ ಪಡೆಯದ ಬಹುಗ್ರಾಮ ನೀರು
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಳೆದ 7 ವರ್ಷಗಳಿಂದ ಹಲವು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ ಪೂರ್ಣಗೊಂಡಿಲ್ಲ. ಬರೀ ಪೈಪ್‌ಲೈನ್ ಅಳವಡಿಕೆಯಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಶಾಸಕ ಕೆ.ಬಿ. ಅಶೋಕನಾಯ್ಕ ಒತ್ತಾಯಿಸಿದರು.
ಹಲವು ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆತ್ವರಿತವಾಗಿ ಪೂರ್ಣಗೊಳಿಸಲು ಆದ್ಯತೆ ನೀಡಬೇಕು ಎಂದು ಸಚಿವ ತಮ್ಮಣ್ಣಸೂಚಿಸಿದರು.
ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ಎಲ್ಲ ಕುಡಿಯುವ ನೀರಿನ ಯೋಜನೆಗಳತ್ವರಿತ ಅನುಷ್ಠಾನಕ್ಕೆ ಸರ್ಕಾರ ₹ 50 ಸಾವಿರ ಕೋಟಿ ನೀಡಲು ಸಿದ್ಧವಿದೆ. ಈಗಾಗಲೇ ₹ 5,500 ಕೋಟಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ವಲಯದ ಕಾಮಗಾರಿಗಳ ಅನುಷ್ಠಾನ ಕುರಿತು ಕ್ಷೇತ್ರದ ಶಾಸಕರ ಗಮನಕ್ಕೆ ತಾರದೆ ನೇರವಾಗಿ ಅಧಿಕಾರಿಗಳು ಕ್ರಿಯಾಯೋಜನೆ ರೂಪಿಸುತ್ತಿದ್ದಾರೆ ಎಂದು ಶಾಸಕ ಈಶ್ವರಪ್ಪ ದೂರಿದರು.
ಅತಿವೃಷ್ಟಿಗೆ ₹ 82 ಕೋಟಿ ನಷ್ಟ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ₹ 82 ಕೋಟಿ ರೂ. ಹಾನಿ ಸಂಭವಿಸಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಡಿಕೆ ಕೊಳೆ ರೋಗದಿಂದ ಸುಮಾರು ₹ 13 ಕೋಟಿ ನಷ್ಟವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ ಸಭೆಗೆಮಾಹಿತಿ ನಿಡಿದರು.
ಕೊಳೆರೋಗದ ಜತೆಗೆ, ಅಡಿಕೆ ಮರಕ್ಕೆ ಉಂಟಾಗಿರುವ ಹಾನಿ ಸಹ ಪರಿಶೀಲಿಸಿ ಸಮಗ್ರ ವರದಿ ಸಲ್ಲಿಸುವಂತೆಸಚಿವರು ಸೂಚಿಸಿದರು.
ರೈತರಿಗೆ ಗೊಬ್ಬರ ನೀಡುವಾಗ ಸಹಕಾರ ಸಂಘಗಳಲ್ಲಿ ತೂಕದಲ್ಲಿ ವ್ಯಾಪಕ ಮೋಸನಡೆಯುತ್ತಿದೆ.ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕುಮಾರ ಬಂಗಾರಪ್ಪ ಅವರು ಒತ್ತಾಯಿಸಿದರು.
ಎಲ್ಲಾ ಗೊಬ್ಬರ ಕೇಂದ್ರಗಳ ಹೊರಗೆ ರೈತರಿಗೆ ಅರಿವು ಮೂಡಿಸಲು ಫಲಕ ಅಳವಡಿಸಬೇಕು. ತೂಕದಲ್ಲಿ ವ್ಯತ್ಯಾಸ ಮಾಡುವ ಕೇಂದ್ರಗಳ ಪರವಾನಗಿರದ್ದುಗೊಳಿಸಬೇಕು ಎಂದು ಸಚಿವರು ಸೂಚಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ಮತ್ತೆ ಮರಳಾಟ
ಮರಳಿನ ಸಮಸ್ಯೆ ಮತ್ತೆ ಜಿಲ್ಲಾ ಪಂಚಾಯಿತಿಸಭೆಯಲ್ಲಿ ಪ್ರತಿಧ್ವನಿಸಿತು.ಜನಸಾಮಾನ್ಯರಿಗೂ ಮರಳು ಸುಲಭವಾಗಿ ಸಿಗುವಂತಾಗಲು ಮರಳು ನೀತಿಯಲ್ಲಿ ಅಗತ್ಯ ಬದಲಾವಣೆ ಮಾಡಬೇಕು ಎಂದು ಶಾಸಕರು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದೆ. ಹಣ ಕೊಟ್ಟರೆ ಎಷ್ಟಾದರೂ ಮರಳು ಸಿಗುತ್ತದೆ. ನಿತ್ಯವೂ ಜಿಲ್ಲೆಯಿಂದ ಹೊರಗೆ 100 ಲೋಡ್ ಹೋಗುತ್ತಿದೆ. ವೀಡಿಯೊ, ಚಿತ್ರ ಸಮೇತ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಹಾಕಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಜನಸಾಮಾನ್ಯರು ಮನೆಕಟ್ಟಲು ಮರಳಿಗೆ ಪರದಾಡುತ್ತಿದ್ದಾರೆ. ಸಾಗರ, ಸೊರಬ, ಶಿಕಾರಿಪುರದಲ್ಲಿ ಮರಳು ಬ್ಲಾಕ್ ಮುಚ್ಚಲಾಗಿದೆ. ಬೇರೆ ಜಿಲ್ಲೆಯಿಂದ ಮರಳು ತರಿಸುವ ದುಸ್ಥಿತಿ ಇದೆ ಎಂದು ದೂರಿದರು.
ಮರಳು ಸಾಗಣೆಪ್ರಕರಣಗಳಲ್ಲಿ ವಶಕ್ಕೆ ಪಡೆದ ಸಣ್ಣಪುಟ್ಟ ವಾಹನಗಳನ್ನು ಮೂರು ದಿನಗಳಿಗಿಂತ ಹೆಚ್ಚು ಕಾಲ ವಶದಲ್ಲಿರಿಸದೆ, ಪ್ರಕರಣ ದಾಖಲಿಸಿ ಬಿಟ್ಟು ಕೊಡಬೇಕು. ಎಲ್ಲ ಬ್ಲಾಕ್ ಒಮ್ಮೆಗೆ ತೆರೆಯಬೇಕು ಎಂದುಸಲಹೆ ನೀಡಿದರು.
ಸ್ಮಾರ್ಟ್‌ಸಿಟಿ ಯೋಜನೆ ಕುರಿತು ಹೆಚ್ಚಿನ ನಿಗಾ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ್ರು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯರಾದ ಆರ್. ಪ್ರಸನ್ನಕುಮಾರ್, ಭೋಜೇಗೌಡ, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಜ್ಯೋತಿ ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯ ಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.