ADVERTISEMENT

ಚಿನ್ನದ ಪದಕ ಗೆದ್ದವರಿಗೆ ಐಎಎಸ್‌ ಗುರಿ

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 20:00 IST
Last Updated 25 ನವೆಂಬರ್ 2021, 20:00 IST
ಎನ್. ಸ್ಫೂರ್ತಿ, ಎಚ್.ಎಲ್. ಅಕ್ಷತಾ ಅವರು ಚಿನ್ನದ ‍ಪದಕಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ
ಎನ್. ಸ್ಫೂರ್ತಿ, ಎಚ್.ಎಲ್. ಅಕ್ಷತಾ ಅವರು ಚಿನ್ನದ ‍ಪದಕಗಳನ್ನು ಹೆಮ್ಮೆಯಿಂದ ಪ್ರದರ್ಶಿಸಿದರು –ಪ್ರಜಾವಾಣಿ ಚಿತ್ರ   

ಶಿವಮೊಗ್ಗ: ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ 6ನೇ ಘಟಿಕೋತ್ಸವದಲ್ಲಿ ಸಾಮಾನ್ಯ ರೈತ ಕುಟುಂಬಗಳ ಇಬ್ಬರು ವಿದ್ಯಾರ್ಥಿನಿಯರು ತಲಾ ನಾಲ್ಕು ಚಿನ್ನದ ಪದಕಗಳ ಸಾಧನೆ ಮಾಡಿದ್ದಾರೆ.

ಸಣ್ಣ ಹಿಡುವಳಿದಾರರ ಕುಟುಂಬದ ಎಚ್‌.ಎಲ್‌.ಅಕ್ಷತಾ, ಶಿಕ್ಷಕ ದಂಪತಿ ಪುತ್ರಿ ಎನ್‌. ಸ್ಫೂರ್ತಿ ಚಿನ್ನದ ಪದಕಗಳನ್ನು ಪಡೆದ ರ್‍ಯಾಂಕ್‌ ವಿಜೇತರು.

ವಿಶ್ವವಿದ್ಯಾಲಯದ ನವುಲೆ ಕ್ಯಾಂಪಸ್‌ನಲ್ಲಿ ಕೃಷಿ ಪದವಿ ಅಧ್ಯಯನ ಮಾಡಿರುವ ಅಕ್ಷತಾ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯ ಲೋಕೇಶ್, ರೇಣುಕಾ ದಂಪತಿಯ ಪುತ್ರಿ.ಪ್ರಸ್ತುತ ಮಹಾರಾಷ್ಟ್ರದಲ್ಲಿ ಸ್ನಾತಕೋತ್ತರ ಪದವಿ (ಎಂಎಸ್ಸಿ ಅಗ್ರಿ) ಓದುತ್ತಿದ್ದಾರೆ. ನಾಲ್ಕೂವರೆ ಎಕರೆ ಮಳೆಯಾಶ್ರಿತ ಕೃಷಿ ಭೂಮಿಯಲ್ಲಿ ದುಡಿದು ಮಗಳನ್ನು ಓದಿಸಿದ್ದಾರೆ.

ADVERTISEMENT

‘ಕೃಷಿ ಪದವಿ ಪಡೆಯಬೇಕು ಎನ್ನುವುದು ಅಪ್ಪ, ಅಮ್ಮನ ಕನಸು. ಐಎಎಸ್‌ ಅಧಿಕಾರಿಯಾಗುವ ಗುರಿ ಇದೆ. ಈಗಿರುವ ಸಬ್ಸಿಡಿ, ಸಾಲ ಸೌಲಭ್ಯಗಳು ರೈತರ ಬದುಕು ಹಸನು ಮಾಡುತ್ತಿಲ್ಲ. ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ. ಐಎಎಸ್‌ ಅಧಿಕಾರಿ
ಯಾದರೆ ರೈತರ ಬದುಕಿಗೆ ಹೊಸ ಭಾಷ್ಯ ಬರೆಯುವೆ’ ಎಂದು ಮನದಾಳ ಬಿಚ್ಚಿಟ್ಟರು ಅಕ್ಷತಾ.

ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ತೋಟಗಾರಿಕೆ ಮಹಾವಿದ್ಯಾಲಯದ ಎನ್.ಸ್ಫೂರ್ತಿ ನೆಲಮಂಗಲದ ಶಿಕ್ಷಕ ದಂಪತಿ, ನಂಜುಂಡಪ್ಪ – ಮಂಜುಳಾ ಅವರ ಪುತ್ರಿ. ತೋಟಗಾರಿಕೆ ವಿಷಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ನಾಲ್ಕು ಚಿನ್ನದ ಪದಕ ಗಳಿಸಿದ್ದಾರೆ.

‘ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವೆ. ಬೆಂಗಳೂರಿನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸಾಧನೆಗೆ ಪೋಷಕರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ ಕಾರಣ. ಸಮಯ ಸಿಕ್ಕಾಗ ಓದುತ್ತಿದ್ದೆ. ಸಾಮಾನ್ಯ ವಿದ್ಯಾರ್ಥಿಗಳೂ ರ್‍ಯಾಂಕ್‌ ಗಳಿಸಬಹುದು ಎನ್ನುವ ವಿಶ್ವಾಸ ಮೂಡಿಸಿದೆ’ ಎಂದು ಸ್ಫೂರ್ತಿ ಹೇಳಿದರು.

ಕೃಷಿ ಕೀಟಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ ಎಸ್.ಅಂಬರೀಶ್, ಕೃಷಿ ಕೀಟಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೆ. ದಿವ್ಯಾ, ಅರಣ್ಯಶಾಸ್ತ್ರದಲ್ಲಿ ಪದವಿ ಪಡೆದ ಕ್ಷಮಾ ಕೋಪರ್ಡೆ ತಲಾ ಎರಡು ಚಿನ್ನದ ಪದಕ ಪಡೆದರು. ರಾಜ್ಯಪಾಲ ಥಾವರಚಂದ್‌ ಗೆಹಲೋತ್ ಪದವಿ ಪ್ರದಾನಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.