
ಹೊಸನಗರ: ತಾಲ್ಲೂಕಿನಾದ್ಯಂತ ಇದೀಗ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್ – ಕೆಎಫ್‌ಡಿ) ಪ್ರಕರಣಗಳು ವ್ಯಾಪಕವಾಗಿದ್ದು, ಜನರಲ್ಲಿ ಭೀತಿ ಆವರಿಸಿದೆ. ಕಳೆದ ವಾರ ತಾಲ್ಲೂಕಿನ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಳ್ಳೋಡಿ ಗ್ರಾಮದ ಮಹಿಳೆಯೊಬ್ಬರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿತ್ತು.
ಆ ಮಹಿಳೆಗೆ ತಲೆನೋವು, ಜ್ವರ ಕಾಣಿಸಿಕೊಂಡಿದ್ದು ಸೊನಲೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಪರೀಕ್ಷೆಗೆ ಒಳಪಡಿಸಿದಾಗ ಕೆಎಫ್‌ಡಿ ದೃಢಪಟ್ಟಿದೆ. ಸದ್ಯ ಮಹಿಳೆ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗನಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಬಿಳ್ಳೋಡಿ ಗ್ರಾಮದ ಸುತ್ತಮುತ್ತ ಜ್ಜರದ ಪ್ರಕರಣಗಳು ಹೆಚ್ಚುತ್ತಿವೆ. ಈ ಭಾಗದಲ್ಲಿ ವಾರದೊಳಗೆ ಐದು ಪ್ರಕರಣಗಳು ಪತ್ತೆಯಾಗಿವೆ.
ಜನರಲ್ಲಿ ಭೀತಿ:
ಮಲೆನಾಡಲ್ಲಿ ಮತ್ತೆ ಮಂಗನ ಕಾಯಿಲೆ ಕಂಡು ಬಂದಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ಬಿಳ್ಳೀಡಿಯ ಅಕ್ಕಪಕ್ಕದ ಗ್ರಾಮಗಳಲ್ಲೂ ರೋಗಭೀತಿ ಆವರಿಸಿದೆ.
ಈ ಭಾಗದಲ್ಲಿ ಕೆಎಫ್‌ಡಿ ಹರಡುತ್ತಿರುವ ಕಾರಣ ಆರೋಗ್ಯ ಇಲಾಖೆ ಮುಂಜಾಗೃತಾ ಕ್ರಮ ಕೈಗೊಂಡಿದೆ. ಜ್ವರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ಸೊನಲೆ ಗ್ರಾಮದ ಜನರಲ್ಲಿ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇಲಾಖೆ ಅಗತ್ಯ ಕ್ರಮ ಅನುಸರಿಸುತ್ತಿದೆ.
ಆರೋಗ್ಯ ಸಹಾಯಕರು ಮನೆಮನೆಗೆ ಭೇಟಿ ನೀಡಿ ಕಾಯಿಲೆಯ ಗುಣ ಲಕ್ಷಣ, ಹರಡುವ ವಿಧಾನ, ನಿಯಂತ್ರಣ ಕ್ರಮಗಳ ಕುರಿತು ಮನವರಿಕೆ ಮಾಡುತ್ತಿದ್ದಾರೆ. ಕಾಡಿಗೆ ಹೋಗದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ತೋಟ– ಗದ್ದೆಗಳಲ್ಲಿ ಕೆಲಸ ಮಾಡುವ ಜನ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಡಿಪಾ ಆಯಿಲ್ ಬಳಸುವಂತೆ ಸಲಹೆ ನೀಡುತ್ತಿದ್ದು, ಪ್ರತಿ ಮನೆಗೆ ಆಯಿಲ್ ಬಾಟಲಿಗಳನ್ನು ಉಚಿತವಾಗಿ ಹಂಚಲಾಗುತ್ತಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಶಾಂತಾರಾಜ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಮಂಗನಕಾಯಿಲೆ ಒಂದು ವೈರಸ್‌ನಿಂದ ಹರಡುವ ರೋಗವಾಗಿದ್ದು, ಕಾಡಿನಲ್ಲಿರುವ ಮಂಗಗಳಲ್ಲಿ ಕಂಡು ಬರುವ ಉಣ್ಣೆಯ ಮೂಲಕ ಮನುಷ್ಯರಲ್ಲಿ ಹರಡುತ್ತದೆ. ಮೊದಲು ಜ್ವರದ ಕಂಡುಬಂದ ಕೊಡಲೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಜ್ವರ ಹತೋಟಿಗೆ ಬಂದು ರೋಗಿ ಸಾವಿನ ದವಡೆಯಿಂದ ಪಾರಾಗಬಹುದು. ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಪರೀಕ್ಷೆ ಹಾಗೂ ಚಿಕಿತ್ಸೆ ಲಭ್ಯವಿದೆ. ಹೆಚ್ಚಿನ ಚಿಕಿತ್ಸೆ ಬೇಕಿದ್ದಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ, ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಜನ ಈ ಕಾಯಿಲೆ ಹರಡದಂತೆ ಮುಂಜಾಗೃತಾ ಕ್ರಮ ಅನುಸರಿಸಬೇಕು. ಮಂಗಗಳು ಮೃತಪಟ್ಟಿದ್ದು ಕಂಡುಬಂದರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಟರಾಜ್ ಕೋರಿದ್ದಾರೆ.
ಕಳೆದ ವರ್ಷ ತಾಲ್ಲೂಕಿನ ಬಪ್ಪನಮನೆ ಎಂಬಲ್ಲಿ 18 ವರ್ಷ ವಯಸ್ಸಿನ ಯುವತಿಯೊಬ್ಬರು ಮಂಗನಕಾಯಿಲೆಯಿಂದ ಮೃತಪಟ್ಟಿದ್ದರು. ಯುವತಿಗೆ ಹೇಗೆ ಕಾಯಿಲೆ ಹರಡಿತು? ಸಾವಿಗೆ ನಿರ್ದಿಷ್ಟವಾದ ಕಾರಣ ಏನು? ಎಂಬುದು ಇಂದಿಗೂ ಪತ್ತೆಯಾಗಿಲ್ಲ. ಆ ಪ್ರಕರಣ ಮಾಸುವ ಮುನ್ನವೇ ಸೊನಲೆ ಗ್ರಾಮದಲ್ಲಿ ಹೆಚ್ಚುತ್ತಿರುವ ಮಂಗನಕಾಯಿಲೆ ಪ್ರಕರಣ ಜಿಲ್ಲಾ ಆರೋಗ್ಯ ಇಲಾಖೆಗೆ ಒಂದು ಸವಾಲಾಗಿದೆ.
ಮಂಗಗಳ ಸಾವು
ತಾಲ್ಲೂಕಿನ ವಿವಿಧೆಡೆ ಮಂಗಗಳ ಅಸಹಜ ಸಾವು ಕಂಡುಬರುತ್ತಿದೆ. ಸೊನಲೆ ಗ್ರಾಮ ಪಂಚಾಯಿತಿ ಹಾಗೂ ಪಕ್ಕದ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮಂಗಗಳು ಸತ್ತು ಬೀಳುತ್ತಿವೆ. ಮಂಗಗಳು ಯಾವ ಕಾರಣದಿಂದ ಸಾಯುತ್ತಿವೆ ಎಂಬುದರ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಮಂಗಗಳು ಜ್ವರ ಉಲ್ಬಣಗೊಂಡು ಸಾಯುತ್ತಿವೆ ಎಂದು ಸ್ಥಳೀಯರು ಅಂದಾಜಿಸಿದ್ದು ಮತ್ತಷ್ಟು ಭೀತಿಗೆ ಕಾರಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.