ರಿಪ್ಪನ್ ಪೇಟೆ : ಮಹಾತ್ಮ ಗಾಂಧೀಜಿ ಅವರ ಪರಿಕಲ್ಪನೆಯಲ್ಲಿ ಜನಿಸಿದ ಖಾದಿ ಭಂಡಾರವು ಭಾರತೀಯರ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಎಚ್ ಹಾಲಪ್ಪ ಹರತಾಳು ಹೇಳಿದರು.
ಗ್ರಾಮದ ಭೂಪಾಳಂ ಆರ್. ಚಂದ್ರಶೇಖರಯ್ಯ ಸಭಾಭವನದಲ್ಲಿ ಶನಿವಾರ ಹೆಗ್ಗೋಡು ವಸ್ತ್ರ ವಿನ್ಯಾಸ ವತಿಯಿಂದ ಅಯೋಜಿಸಿದ ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಅವರು ಚಾಲನೆ ನೀಡಿ ಮಾತನಾಡಿದರು.
ಭಾರತೀಯರಾದ ನಾವು 'ಅತ್ಮ ನಿರ್ಭರತೆ ಯಿಂದ ಬದುಕಲು ಸ್ವದೇಶಿ ವಸ್ತುಗಳ ವ್ಯಾಮೋಹ ಮೈಗೂಡಿಸಿಕೊಳ್ಳಬೇಕು ಎಂದರು. ಪ್ರತಿಯೊಬ್ಬ ಭಾರತೀಯರು ಸ್ವದೇಶಿ ವಸ್ತುಗಳನ್ನು ಬಳಕೆ ಮಾಡಿದಲ್ಲಿ ದೇಶ ಪ್ರಗತಿ ಪಥದತ್ತ ಸಾಗಲು ಸಾಧ್ಯ ಆ ನಿಟ್ಟಿನಲ್ಲಿ ದೇಶದ ಪ್ರಧಾನ ಮಂತ್ರಿ ಮೋದಿಜಿ ಅವರ ಆಶಯವನ್ನು ಯಶಸ್ವಿಗೊಳಿಸೋಣ ಎಂದರು.
ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ತಲಾ ಎರಡು ಸೀರೆ ನೀಡುವ ಕುರಿತು ಸಂಪುಟ ಸಭೆಯಲ್ಲಿ ತೀರ್ಮಾನಿಸಿದೆ.
ಈ ಕುರಿತು ಪ್ರಸ್ತಾಪಿಸಿದ ಅವರು, ಸ್ವದೇಶಿ ಅಂದೋಲನದ ಹರಿಕಾರ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕನಸು ನನಸು ಮಾಡುವ ನಿಟ್ಟಿನಲ್ಲಿ ಚರಕದಿಂದ ತಯಾರಾಗಿರುವ ಸ್ವದೇಶಿ ಖಾದಿ ಗ್ರಾಮೋದ್ಯೋಗದಲ್ಲಿ ತಯಾರಿಸಿದ ಸೀರೆಗಳನ್ನೆ ಖರೀದಿಸಿ ವಿತರಿಸುವಂತೆ ಆದೇಶಿಸಲಿ ಎಂದರು.
ದೇಶಿಯ ಸಂಸ್ಕೃತಿ ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕು. ಆ ನಿಟ್ಟಿನಲ್ಲಿ ಗ್ರಾಮೋದ್ಯೋಗದಿಂದ ಜೀವನ ನಿರ್ವಹಣೆ ಮಾಡುತ್ತಿರುವ ಗ್ರಾಮೀಣ ಜನರ ಸ್ವಾವಲಂಬಿ ಬದುಕಿಗೆ ಆಸರೆಯಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕ್ ಬಿಜೆಪಿ ಘಟಕದ ಅಧ್ಯಕ್ಷ ಮತ್ತಿಮನೆ ಸುಬ್ರಹ್ಮಣ್ಯ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್.ಸತೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಎ.ಟಿ.ನಾಗರತ್ನ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸದಸ್ಯರಾದ ಮಂಜುಳಾ ಕೇತಾರ್ಜಿ, ಅಶ್ವಿನಿ, ದೀಪಾ, ದಾನಮ್ಮ, ಸುಂದರೇಶ್, ಮಲ್ಲಿಕಾರ್ಜುನ ಗೌಡ, ಮುಖಂಡರಾದ ಆರ್ ಟಿ ಗೋಪಾಲ್, ಮೆಣಸೆ ಆನಂದ್, ಕೇತಾರ್ಜಿ ರಾವ್ ಪದ್ಮ ಸುರೇಶ್, ಗೀತಮ್ಮ ಮತ್ತು ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.