ಹೊಸನಗರ: ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಗೆ ಬೇಸತ್ತು ಹೆದ್ದಾರಿಯ ಹೊಂಡ ಗುಂಡಿಗೆ ಅಡಿಕೆ ಗಿಡ ನೆಟ್ಟು ವ್ಯಕ್ತಿಯೋರ್ವ ಏಕಾಂಗಿಯಾಗಿ ಶನಿವಾರ ಪ್ರತಿಭಟನೆ ನಡೆಸಿದರು.
ರಾಣೇಬೆನ್ನೂರು ಬೈಂದೂರು ರಾಷ್ಟ್ರೀಯ ಹೆದ್ದಾರಿ (766ಸಿ) ಹೊಸನಗರದಿಂದ ನಗರದವರೆಗೆ ಸಂಪೂರ್ಣ ಹದಗೆಟ್ಟು ಹೋಗಿದೆ. ರಸ್ತೆ ತುಂಬಾ ಹೊಂಡ ಗುಂಡಿಗಳಿಂದ ತುಂಬಿ ಹೋಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯುವ ಸಲುವಾಗಿ ಮತ್ತಿಮನೆ ನಿವಾಸಿ ಶ್ರೀಕಾಂತ್ ಒ.ಆರ್ ವಿನೂತನ ಪ್ರತಿಭಟನೆ ನಡೆಸಿದರು.
ನಗರ ದಿಂದ ಹಿಲ್ಕುಂಜಿವರೆಗೆ ಸುಮಾರು ಏಳೆಂಟು ಕಿಮೀ ವರೆಗಿನ ರಸ್ತೆಯ ಗುಂಡಿಗಳಲ್ಲಿ 50 ಕ್ಕು ಹೆಚ್ಚು ಅಡಿಕೆ ಗಿಡ ನೆಟ್ಟು ಆಕ್ರೋಶ ಹೊರಹಾಕಿದ್ದಾರೆ.
ಬಳಿಕ ಮಾತನಾಡಿದ ಅವರು, ಹೊಸನಗರ ದಿಂದ ನಗರದ ವರೆಗೆ ರಸ್ತೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದರೂ ಯಾವುದೇ ದುರಸ್ಥಿಯಾಗಲಿ, ಡಾಂಬರೀಕರಣವಾಗಲೀ ಮಾಡಿಲ್ಲ. ಇಲ್ಲಿ ವಾಹನದಲ್ಲಿ ಸಂಚಾರ ಮಾಡೋದಕ್ಕಿಂತ ನಡೆದು ಹೋಗೋದೇ ಉತ್ತಮ ಎಂಬಂತಾಗಿದೆ.
ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಕೊಳ್ಳಲಿ ಎಂದು ಈ ರೀತಿ ಪ್ರತಿಭಟನೆ ನಡೆಸಿದ್ದೇನೆ. ಇದು ಸಾಂಕೇತಿಕ ಪ್ರತಿಭಟನೆ ಆಗಿದೆ. 15 ದಿನದೊಳಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಮಾಡದಿದ್ದಲ್ಲಿ. ಮತ್ತೆ ಖುದ್ದಾಗಿ ಟ್ರಾಕ್ಟರ್‌ನಲ್ಲಿ ಮಣ್ಣು ತಂದು ರಸ್ತೆ ಗುಂಡಿ ಮುಚ್ಚುವುದಾಗಿ ಹೇಳಿದ್ದಾರೆ. ಈ ಕಾರ್ಯದಲ್ಲಿ ಆಸಕ್ತರು ಭಾಗವಹಿಸಬಹುದು ಎಂದು ಮನವಿ ಮಾಡಿದ್ದಾರೆ.
ಚಿತ್ರ: ಹೊಸನಗರ - ನಗರ ರಾಷ್ಟ್ರೀಯ ಹೆದ್ದಾರಿ ಗುಂಡಿಯಲ್ಲಿ ಅಡಿಕೆ ಗಿಡ ನೆಡುತ್ತಿರುವ ಸಾಮಾಜಿಕ ಹೋರಾಟಗಾರ ಶ್ರೀಕಾಂತ ಮತ್ತಿಮನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.