ಶಿವಮೊಗ್ಗ: ಕಿತ್ತೂರು ವೀರರಾಣಿ ಚನ್ನಮ್ಮನ ಹೋರಾಟ ಇತಿಹಾಸದ ಪುಟಗಳಲ್ಲಿ ಎಂದೂ ಅಳಿಸಲಾಗದ ದಾಖಲೆ ಎಂದು ಹೊನ್ನಾಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕಿ ಎ.ಸಿ. ಸುಮತಿಹೇಳಿದರು.
ವೆಂಕಟೇಶ ನಗರದ ಬಸವಕೇಂದ್ರದಲ್ಲಿ ಗುರುವಾರ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಮಹಿಳಾ ಘಟಕ ಮತ್ತು ಬಸವ ಕೇಂದ್ರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವೀರಮಹಿಳೆ ಕಿತ್ತೂರು ರಾಣಿ ಚನ್ನಮ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬ್ರಿಟಿಷರ ವಿರುದ್ಧ ವ್ಯವಸ್ಥಿತವಾಗಿ ಹೋರಾಟ ನಡೆಸಿ, ಕಿತ್ತೂರು ಸಂಸ್ಥಾನವನ್ನು ಉಳಿಸಲು ಕೊನೆಯವರೆಗೂ ಹೋರಾಡಿ ತನ್ನ ಪ್ರಾಣವನ್ನೇ ಬಲಿಕೊಟ್ಟ ಮಹಿಳೆ. ಅವರ ಬದುಕು ಒಂದು ಯಶೋಗಾಥೆ. ಚನ್ನಮ್ಮ ದೇಶಪ್ರೇಮದ ಸಂಕೇತ. ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ಬ್ರಿಟಿಷರ ವಿರುದ್ಧ ಮೊದಲ ಹೋರಾಟದಲ್ಲಿ ಗೆದ್ದು, ಸಂಸ್ಥಾನವನ್ನು ಸ್ವತಂತ್ರಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಅವರ ಆದರ್ಶ, ಯಶಸ್ಸು ಇವೆಲ್ಲವೂ ಇಂದಿನ ಮಹಿಳೆಯರಿಗೆ ದಾರಿದೀಪ. ಮಹಿಳೆ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂದು ತೋರಿಸಿದವರು ಚನ್ನಮ್ಮ. ಅವರ ಇತಿಹಾಸ ಎಲ್ಲ ಕನ್ನಡಿಗರನ್ನೂ ತಲುಪಬೇಕು. ಇಂದಿನ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಲು ಸಮಾಜದ ವಿರುದ್ಧ ಸಮಸ್ಯೆಗಳು ಉಂಟಾದಾಗ ಅದನ್ನು ಎದುರಿಸಲು ಸಿದ್ಧತೆ ನಡೆಸಬೇಕು. ಸ್ವಾವಲಂಬನೆ, ಸ್ವಾಭಿಮಾನ ಸಾಧಿಸಬೇಕು ಎಂದು ಸಲಹೆನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಡಿ.ಬಿ. ಶಂಕರಪ್ಪ ಮಾತನಾಡಿ, ‘ವೀರಶೈವ ಮಹಾಸಭಾ ಯಶಸ್ವಿಯಾಗಿ ಬೆಳೆಯುತ್ತಿದೆ. ಅದರಲ್ಲೂ ಮಹಿಳಾ ಘಟಕ ಇಂತಹ ಕಾರ್ಯಕ್ರಮಗಳ ಮೂಲಕ ಬೆಳೆಯುತ್ತಿರುವುದು ಸಂತೋಷದ ವಿಷಯ. ಮುಖ್ಯವಾಗಿ ಯುವಕರು ಸಂಘಟನೆಗೆ ಬರಬೇಕು.ಮಹಿಳೆಯರು ರಾಜಕಾರಣಕ್ಕೆ ಬರುತ್ತಿರುವುದು ಕಡಿಮೆಯಾಗಿದೆ. ಶಿವಮೊಗ್ಗದಲ್ಲಿ ಮಹಾನಗರ ಪಾಲಿಕೆಯಲ್ಲಿ ವೀರಶೈವ ಮಹಿಳೆಯರು ಅಧ್ಯಕ್ಷರಾದ ಉದಾಹರಣೆಯೇ ಇಲ್ಲ. ಇದಕ್ಕೆಲ್ಲ ಅವಕಾಶ ಒದಗಬೇಕು. ಕನ್ನಡದ ಅಪ್ಪಟ ಹೋರಾಟಗಾರ್ತಿ ಕಿತ್ತೂರು ಚನ್ನಮ್ಮನ ಆದರ್ಶ ಮತ್ತು ಕೆಚ್ಚೆದೆಯನ್ನು ಮಹಿಳೆಯರು ಮೈಗೂಡಿಸಿಕೊಳ್ಳಬೇಕು’ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇಣುಕಾ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ರುದ್ರಮುನಿ ಎಸ್. ಸಜ್ಜನ್, ಸರಳ ಕರಿಬಸಪ್ಪ, ಬಸವ ಕೇಂದ್ರದ ಅಧ್ಯಕ್ಷ ಜಿ. ಬೆನಕಪ್ಪಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.