ADVERTISEMENT

ರಸಗೊಬ್ಬರದ ಬೆಲೆ ಏರಿಕೆಗೆ ಕಾಗೋಡು ತಿಮ್ಮಪ್ಪ ಖಂಡನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 5:29 IST
Last Updated 11 ಏಪ್ರಿಲ್ 2021, 5:29 IST
ಕಾಗೋಡು ತಿಮ್ಮಪ್ಪ
ಕಾಗೋಡು ತಿಮ್ಮಪ್ಪ   

ಸಾಗರ: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಏರಿಕೆ ಬೆನ್ನಲ್ಲೇ ರಸಗೊಬ್ಬರದ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿರುವ ಕ್ರಮ ಖಂಡನೀಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿಕೆ ನೀಡಿದ್ದಾರೆ.

‘ಅಗತ್ಯ ವಸ್ತುಗಳ ಬೆಲೆಯಿಂದ ತತ್ತರಿಸಿ ಹೋಗಿರುವ ರೈತರಿಗೆ ಗೊಬ್ಬರದ ಬೆಲೆ ಏರಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂಬ ಕೇಂದ್ರ ಸರ್ಕಾರದ ಭರವಸೆ, ಘೋಷಣೆ ಹುಸಿಯಾದದ್ದು ಎಂಬುದು ಈ ಮೂಲಕ ಸಾಬೀತಾಗಿದೆ’ ಎಂದು ದೂರಿದ್ದಾರೆ.

ಕೃಷಿ ಉತ್ಪಾದನಾ ವೆಚ್ಚ ಕಡಿಮೆಯಾದರೆ ಮಾತ್ರ ರೈತರ ಆದಾಯ ಹೆಚ್ಚಲು ಸಾಧ್ಯ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೃಷಿ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಗೊಬ್ಬರಕ್ಕೆ ಸಬ್ಸಿಡಿ ನೀಡುತ್ತಿತ್ತು. ಈಗಿನ ಸರ್ಕಾರ ಸಬ್ಸಿಡಿಯನ್ನು ಕಡಿತಗೊಳಿಸಿರುವುದು ಬೆಲೆ ಏರಿಕೆಗೆ ಕಾರಣ ಎಂದು ಹೇಳಿದ್ದಾರೆ.

ADVERTISEMENT

ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಯೋಜನೆ ಜಾರಿಗೊಳಿಸಬೇಕು. ರೈತಸ್ನೇಹಿ ಬೆಳೆ ವಿಮೆ ಜಾರಿಗೊಳಿಸಬೇಕು. ಸರ್ಕಾರ ಇಂತಹ ರೈತಪರ ನೀತಿಯನ್ನು ಜಾರಿಗೊಳಿಸದಿದ್ದರೆ ರೈತರನ್ನು ಮತ್ತಷ್ಟು ಬಡತನ ಮತ್ತು ಶೋಷಣೆಗೆ ದೂಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.